ಟ್ರಾಫಿಕ್ ಪೊಲೀಸರಿಗೆ ಧೂಳ್ ದಾಳಿ
ವಿಶೇಷ ವರದಿ
ಹುಬ್ಬಳ್ಳಿ: ಸಂಚಾರ ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮಹಾನಗರ ಸಂಚಾರಿ ಪೊಲೀಸರು ಧೂಳಿನಿಂದಾಗಿ ಹಲವಾರು ರೋಗಗಳಿಗೆ ತುತ್ತಾಗುವ ಆತಂಕ ಎದುರಿಸುತ್ತಿದ್ದಾರೆ.
ಬೃಹತ್ ಒಳಚರಂಡಿ ಕಾಮಗಾರಿ ಹಾಗೂ ತಗ್ಗು ಬಿದ್ದ ರಸ್ತೆಗಳಿಂದಾಗಿ ಕಳೆದ ಒಂದೆರೆಡು ತಿಂಗಳುಗಳಿಂದ ಅವಳಿ ನಗರದಲ್ಲಿ ಧೂಳು ಹೆಚ್ಚಾಗಿದೆ. ಬೈಕ್ ಸವಾರರು, ಪಾದಚಾರಿಗಳು, ರಸ್ತೆ ಪಕ್ಕದ ವ್ಯಾಪಾರಸ್ಥರು ಧೂಳಿನಿಂದಾಗಿ ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಇವರೆಲ್ಲರಿಗಿಂತಲೂ ಹೆಚ್ಚಿನ ಸಮಸ್ಯೆ ಆಗುತ್ತಿರುವುದು ಸಂಚಾರಿ ಠಾಣೆ ಪೊಲೀಸರಿಗೆ.
ವಾಹನಗಳ ಶಬ್ದ ಮಾಲಿನ್ಯದ ಜೊತೆಗೆ ಧೂಳಿನ ಸಮಸ್ಯೆಯೂ ಸಂಚಾರಿ ಠಾಣೆ ಪೊಲೀಸರಿಗೆ ಸಾಮಾನ್ಯವಾದಂತಾಗಿದೆ. ನಿತ್ಯ 8 ತಾಸುಗಳವರೆಗೆ, ಗಣ್ಯ ಮತ್ತು ಅತಿಗಣ್ಯರು ಮಹಾನಗರಕ್ಕೆ ಭೇಟಿ ನೀಡಿದಾಗ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಅವಧಿವರೆಗೆ ಕಾರ್ಯನಿರ್ವಹಿಸುವ ಸಂಚಾರಿ ಠಾಣೆ ಪೊಲೀಸರು ಧೂಳಿನ ಮಧ್ಯದಲ್ಲಿಯೇ ನಿಲ್ಲುವುದು ಅನಿವಾರ್ಯ.
ಪೊಲೀಸ್ ಇಲಾಖೆಯಿಂದ ಮಾಸ್ಕ್ ಪೂರೈಸಿದ್ದರೂ ಹೆಚ್ಚಿನ ಪೇದೆಗಳು ಮಾಸ್ಕ್ ಧರಿಸಿಕೊಳ್ಳುತ್ತಿಲ್ಲ. ಧೂಳು ಕಣ್ಣಿಗೆ ಹೋಗುವುದನ್ನು ತಡೆಯಲು ಸಮರ್ಪಕ ಚಾಳೀಸನ್ನೂ ಇಲಾಖೆ ಪೂರೈಸಿಲ್ಲ. ಕರ್ತವ್ಯ ನಿರ್ವಹಣೆ ಜೊತೆಗೆ ಹಲವಾರು ರೋಗಗಳು ಸಂಚಾರಿ ಠಾಣೆ ಪೊಲೀಸರಿಗೆ ತಗಲುವ ಆತಂಕ ತಪ್ಪಿದ್ದಲ್ಲ.
ಹೆಚ್ಚಿದ ಕಾಯಿಲೆ ಭೀತಿ: ದಿನದ ಹೆಚ್ಚಿನ ಅವಧಿಯನ್ನು ಧೂಳಿನಲ್ಲಿಯೇ ಕಳೆದಲ್ಲಿ ಚರ್ಮರೋಗಗಳು, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಕ್ಷಯರೋಗ, ಅಸ್ತಮಾ ಜತೆ ಕಣ್ಣಿಗೆ ಸಂಬಂಧಿಸಿದ ರೋಗಗಳು ಸೇರಿದಂತೆ ಇನ್ನೂ ಹಲವು ರೋಗಗಳು ಪೊಲೀಸರಿಗೆ ಆವರಿಸಿಕೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಧೂಳಿನಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಠಾಣೆ ಪೇದೆಗಷ್ಟೇ ಈ ರೋಗಗಳು ತಗಲುವುದಿಲ್ಲ. ಪೇದೆಯ ಜೊತೆಗೆ ಆತನ ಕುಟುಂಬದ ಸದಸ್ಯರೂ ಈ ರೋಗಕ್ಕೆ ತುತ್ತಾಗುವ ಸಂಭವಗಳು ಹೆಚ್ಚು. ಹೆಚ್ಚಿನ ಚರ್ಮರೋಗಗಳು ಹಾಗೂ ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಕ್ಷಯರೋಗಕ್ಕೆ ತುತ್ತಾಗುವ ಪೇದೆಯಿಂದಾಗಿ ಆತನ ಕುಟುಂಬದ ಸದಸ್ಯರಲ್ಲಿ ಕೆಲವರಾದರೂ ಕ್ಷಯರೋಗಕ್ಕೆ ತುತ್ತಾಗುವ ಸಾಧ್ಯತೆ ಇದ್ದದ್ದೇ.
ಧೂಳ್ಮಯವಾದ ರಸ್ತೆಗಳು: ಹುಬ್ಬಳ್ಳಿ-ಧಾರವಾಡದ ಬಹುತೇಕ ರಸ್ತೆಗಳು ಧೂಳಿನಿಂದ ಆವೃತ್ತಗೊಂಡಿವೆ. ಅದರಲ್ಲಿಯೂ ಆರ್ಟಿಓ ಕಚೇರಿ, ಪೊಲೀಸ್ ಆಯುಕ್ತರ ಕಚೇರಿ, ಧಾರವಾಡದ ಹಳೇ ಬಸ್ ನಿಲ್ದಾಣ, ಆಲೂರು ವೆಂಕಟರಾವ್ ವರ್ತುಲ, ಕೋರ್ಟ್ ವೃತ್ತ, ಸವದತ್ತಿ ರಸ್ತೆ, ಧಾರವಾಡದಿಂದ ಹುಬ್ಬಳ್ಳಿಗೆ ತೆರಳುವ ಹಳೇ ಪಿಬಿ ರಸ್ತೆ, ಸ್ಟೇಶನ್ ರಸ್ತೆ, ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಎದುರಿನ ರಸ್ತೆ, ಉಣಕಲ್ ರಸ್ತೆ, ವಿದ್ಯಾನಗರ, ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆ, ಗೋಕುಲ ರಸ್ತೆ, ದುರ್ಗದಬೈಲ್, ಚೆನ್ನಮ್ಮ ವೃತ್ತ, ಕೇಶ್ವಾಪುರ ರಸ್ತೆ, ಕಾರವಾರ ರಸ್ತೆ, ಹಳೇ ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಠಾಣೆ ಪೊಲೀಸರು ಧೂಳಿನಿಂದ ಉಂಟಾಗುವ ಹಲವಾರು ರೋಗಗಳಿಗೆ ತುತ್ತಾಗುವ ಆತಂಕವನ್ನು ಈಗಾಗಲೇ ಎದುರಿಸುತ್ತಿದ್ದಾರೆ. ಅದರಲ್ಲಿಯೂ ಸೇವಾನಿವೃತ್ತಿ ಅಂಚಿನಲ್ಲಿರುವ ಪೇದೆಗಳಿಗೆ ಈ ಆತಂಕ ಹೆಚ್ಚು ಕಾಡುತ್ತಿದೆ.
ರಸ್ತೆ ಮಧ್ಯೆ ಹಾಗೂ ಪಕ್ಕದಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರ ಕಣ್ಣಗಳು ಧೂಳಿನಿಂದಾಗಿ ಸಾಕಷ್ಟು ತೊಂದರೆಗೀಡಾಗಿವೆ.
ಬೃಹತ್ ಒಳಚರಂಡಿ ಕಾಮಗಾರಿಗೆ ತೆಗ್ಗು ತೋಡಿದ ರಸ್ತೆಗಳಿಗೆ ಹಾಗೂ ಗುಂಡಿ ಬಿದ್ದಿರುವ ರಸ್ತೆಗಳಿಗೆ ಮಹಾನಗರ ಪಾಲಿಕೆ ಅಧಿಕಾರಿಗಳ ಪ್ರಕಾರ ಮಳೆಗಾಲ ಮುಗಿಯುವವರೆಗೂ ಡಾಂಬರೀಕರಣ ಮಾಡಲಾಗುವುದಿಲ್ಲ. ಹೀಗಾಗಿ ಮಳೆಗಾಲ ಪೂರ್ಣಗೊಳ್ಳುವವರೆಗೂ ಸಂಚಾರಿ ಠಾಣೆ ಪೊಲೀಸರು ಧೂಳಿನ ಮಧ್ಯದಲ್ಲಿಯೇ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ.
ಸಂಚಾರಿ ಠಾಣೆ ಪೊಲೀಸರಿಗೆ ಮಾಸ್ಕ್ ಪೂರೈಸಲಾಗಿದೆ. ಆದರೆ, ಸಾಕಷ್ಟು ಜನ ಪೇದೆಗಳು ಮಾಸ್ಕ್ ಹಾಕಿಕೊಳ್ಳುವುದಿಲ್ಲ. ಪೇದೆಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಆ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು. ಇಲಾಖೆ ನೀಡಿರುವ ಮಾಸ್ಕ್ಗಳ ಪ್ರಯೋಜನ ಪಡೆದುಕೊಳ್ಳಬೇಕು.
-ಬಿ.ಎ. ಪದ್ಮನಯನ, ಆಯುಕ್ತರು, ಮಹಾನಗರ ಪೊಲೀಸ್ ಇಲಾಖೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

