ಕಿಮ್ಸ್ಕಿರಿಯವೈದ್ಯರಮುಷ್ಕರಅಂತ್ಯ
ಹುಬ್ಬಳ್ಳಿ: ಕಿಮ್ಸ್ ವೈದ್ಯರ ಮೇಲೆ ಪದೇ ಪದೇ ನಡೆದ ಹಲ್ಲೆ ಸಂಗತಿ ಮತ್ತು ಸುರಕ್ಷತೆ ವಿಚಾರವನ್ನೇ ಪ್ರಧಾನವಾಗಿಟ್ಟುಕೊಂಡು ಮುಷ್ಕರಕ್ಕೆ ಇಳಿದಿದ್ದ ಕಿರಿಯ ವೈದ್ಯರ ಬಹುತೇಕ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ವಸಂತಾ ಕಾಮತ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಸ್ ಆಡಳಿತ ಮಂಡಳಿ ಬಹುತೇಕ ಅವರ ಬೇಡಿಕೆಗಳಿಗೆ ಸಹಮತ ವ್ಯಕ್ತಪಡಿಸಿದೆ. ಕಿರಿಯ ವೈದ್ಯರು ಮಂಡಿಸಿದ ಬೇಡಿಕೆಗಳು ನ್ಯಾಯಯುತವಾಗಿದ್ದವು. ಹೀಗಾಗಿ ಆಡಳಿತ ಮಂಡಳಿ ಕೂಡ ತಕ್ಷಣ ಅವರ ಶೇ. 90ಕ್ಕೂ ಹೆಚ್ಚು ಬೇಡಿಕೆಗಳಿಗೆ ಸ್ಪಂದಿಸಿದೆ ಎಂದರು.
ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ತಡೆಗಟ್ಟುವ ನಿಟ್ಟಿನಲ್ಲಿ ಕಿಮ್ಸ್ನ ಕ್ಯಾಥ್ಲ್ಯಾಬ್, ಪ್ರಸೂತಿ ವಿಭಾಗ, ಚಿಕ್ಕಮಕ್ಕಳ ವಿಭಾಗ, ತುರ್ತು ಚಿಕಿತ್ಸಾ ಘಟಕ, ಐಸಿಯು ಮತ್ತು ಎನ್ಐಸಿಯುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಜೊತೆಗೆ ರೋಗಿಯ ಜೊತೆಗೆ ಇಬ್ಬರು ಮಾತ್ರ ಇರುವುದಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಇಬ್ಬರಿಗೆ ಪಾಸ್ ನೀಡುವ ಕ್ರಮ ಜಾರಿಗೆ ತರಲಾಗಿದೆ. ಆಸ್ಪತ್ರೆಯ ಒಳಗೆ ಜನದಟ್ಟಣೆ ನಿಯಂತ್ರಿಸುವುದು ಮತ್ತು ಸಂಘಟನೆಗಳಿಗೆ ಸೇರಿದವನ್ನು ದೂರ ಇಡುವ ನಿಟ್ಟಿನಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸಲಾಗಿದ್ದು, ಭದ್ರತೆ ಬಿಗಿಗೊಳಿಸುವಂತೆ ಸೆಕ್ಯೂರಿಟಿ ಸೂಪರ್ವೈಸರ್ಗಳಿಗೆ ಸೂಚಿಸಲಾಗಿದೆ. ಸಶಸ್ತ್ರ ಭದ್ರತೆ ಬೇಕು ಎಂದು ಕಿರಿಯ ವೈದ್ಯರು ಬೇಡಿಕೆ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಸಶಸ್ತ್ರ ಭದ್ರತೆಗೆ ಪರವಾನಗಿ ನೀಡುವಂತೆ ಪೊಲೀಸರಿಗೆ ಅರ್ಜಿ ಸಲ್ಲಿಸಲಾಗಿದೆ ಎಂದರು. ಅಂಬೇಡ್ಕರ್ ನಗರದ ನಿವಾಸಿಯೊಬ್ಬರು ತೀವ್ರ ರಕ್ತದೊತ್ತಡದಿಂದ ಮೃತಪಟ್ಟ ಸಂದರ್ಭ ಸಂಘಟನೆಯೊಂದಕ್ಕೆ ಸೇರಿದ ಕೆಲವು ವ್ಯಕ್ತಿಗಳು ಹೃದಯರೋಗ ಚಿಕಿತ್ಸಾ ವಿಭಾಗದಲ್ಲಿ ದಾಂದಲೆ ಮಾಡಿ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆ ಸಂಘಟನೆ ಮುಖ್ಯಸ್ಥನನ್ನು ಪೊಲೀಸರು ಕಿಮ್ಸ್ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಿದ್ದಾರೆ.
ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ: ಡಾ. ವಸಂತಾ
ಚಿಕಿತ್ಸೆಗೆ ಎಂದು ಬಂದಿದ್ದ ಏಡ್ಸ್ ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡದೇ ಹೊರ ಹಾಕಿದ ಕಿಮ್ಸ್ನ ಕಿವಿ, ಮೂಗು ಮತ್ತು ಗಂಟಲು ವಿಭಾಗದ ವೈದ್ಯರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಾ. ವಸಂತಾ ಕಾಮತ್ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಲ್ಲಪ್ಪ ಎಂಬ ವ್ಯಕ್ತಿ ಸೋಮವಾರ ಕಿಮ್ಸ್ಗೆ ಚಿಕಿತ್ಸೆ ಬಂದಿದ್ದು ನಿಜ. ಆದರೆ, ಇಎನ್ಟಿ ವಿಭಾಗದ ವೈದ್ಯರು ಆಡಳಿತ ಮಂಡಳಿ ಮತ್ತು ಚಿಕ್ಕಮಕ್ಕಳ ತಜ್ಞ ಡಾ. ಟಿ.ಎ. ಶೆಫೂರ್ ಅವರನ್ನು ತಪ್ಪುದಾರಿಗೆ ಎಳೆದಿದ್ದು, ತಪ್ಪು ಮಾಹಿತಿ ನೀಡಿದ ವೈದ್ಯರ ಮೇಲೆ ಖಂಡಿತವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮುಷ್ಕರ ಕೈಬಿಟ್ಟ ವೈದ್ಯರು
ಮುಷ್ಕರ ಹಿಂತೆಗೆದುಕೊಳ್ಳುವ ವಿಚಾರವನ್ನು ಆಡಳಿತ ಮಂಡಳಿ ಎದುರು ಪ್ರಸ್ತಾಪಿಸಿದ ಕಿರಿಯ ವೈದ್ಯರು ಮಂಗಳವಾರ ಮಧ್ಯಾಹ್ನ ಮುಷ್ಕರ ಹಿಂದೆಗೆದುಕೊಂಡು ನಾಲ್ಕು ದಿನಗಳಲ್ಲಿ ಸಿಸಿ ಕ್ಯಾಮರಾ, ಸೈರನ್ ಸಿಸ್ಟಮ್, ಭದ್ರತಾ ವ್ಯವಸ್ಥೆಯ ಸುಧಾರಣೆ, ರೋಗಿಗಳ ಸಂಬಂಧಿಕರಿಗೆ ನಿರ್ಬಂಧಿತ ಪ್ರವೇಶ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ಇಲ್ಲದಿದ್ದರೆ ಮತ್ತೇ ಮುಷ್ಕರ ಹಮ್ಮಿಕೊಳ್ಳುವ ವಿಚಾರ ಪ್ರಸ್ತಾಪಿಸಿದ್ದಾರೆ.
ಘಟನೆ ಹಿನ್ನೆಲೆ
ಎಚ್ಐವಿ ಪೀಡಿತ ಯಲ್ಲಪ್ಪ ಎಂಬ ವ್ಯಕ್ತಿ ಗಂಟಲು ನೋವಿಗೆ ಚಿಕಿತ್ಸೆ ಪಡೆಯುವುದಕ್ಕೆ ಸೋಮವಾರ ಮಧ್ಯಾಹ್ನ ಕಿಮ್ಸ್ಗೆ ಆಗಮಿಸಿದ್ದರು. ಇಎನ್ಟಿ ವಿಭಾಗದ ವೈದ್ಯರು ಕೆಲವು ಮಾತ್ರೆ ಮತ್ತು ಔಷಧ ಬರೆದುಕೊಟ್ಟು ಮತ್ತೆ ಇಲ್ಲಿಗೆ ಚಿಕಿತ್ಸೆ ಬರಬೇಡ ಎಂದು ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಡಾ. ಟಿ.ಎ. ಶೆಫೂರ್ ಮತ್ತು ಡಾ. ವಸಂತಾ ಕಾಮತ್ ಅವರು ಏಡ್ಸ್ ಪೀಡಿತ ವ್ಯಕ್ತಿ ನಮ್ಮಲ್ಲಿ ಬಂದೇ ಇಲ್ಲ ಮತ್ತು ಗಮನಕ್ಕೆ ಬಂದಿಲ್ಲ ಇದು ಹೇಳಿದ್ದು ಅಲ್ಲದೇ ಇದು ಮಾಧ್ಯಮಗಳ ಸುಳ್ಳು ಪ್ರಚಾರ ಎಂದಿದ್ದರು.
ಸದ್ಯ ಚಿಟಗುಪ್ಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಲ್ಲಪ್ಪ ಅವರನ್ನು ಕಿಮ್ಸ್ಗೆ ಹಸ್ತಾಂತರ ಮಾಡಿಕೊಂಡು ಅಗತ್ಯ ಚಿಕಿತ್ಸೆ ನೀಡಲಾಗುವುದು ಮತ್ತು ಸುಳ್ಳು ಹೇಳಿದ ವೈದ್ಯರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

