ಆನ್ಲೈನ್ ದೂರಿಗೆ ತಕ್ಷಣ ಸ್ಪಂದನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 11
ನಿತ್ಯ ಏನಿಲ್ಲವೆಂದರೂ ಲಕ್ಷಾಂತರ ಜನರಿಗೆ ಸಾರಿಗೆ ಸೌಲಭ್ಯ ಒದಗಿಸುವ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಕನೊಬ್ಬನ ಅಳಲು ದೂರಿಗೆ ಸ್ಪಂದನೆ ಇತ್ತೆ?
ಇಂತಹದ್ದೊಂದು ಪ್ರಶ್ನೆಯನ್ನು ಪ್ರಯಾಣಿಕರ ಎದುರು ಇರಿಸಿದರೆ ಯಾರು ಕೇಳ್ತಾರೆ? ಅನ್ನೊ ಸಿದ್ಧ ಉತ್ತರ ಲಭಿಸುತ್ತಿತ್ತು. ಆದರೆ, ಸಂಸ್ಥೆ ಬದಲಾಗುತ್ತಿದೆ. ಸಾರ್ವಜನಿಕರ ದೂರು ದುಮ್ಮಾನಗಳಿಗೆ ಸ್ಪಂದಿಸುವುದಕ್ಕೆ ಎನ್ಡಬ್ಲ್ಯುಕೆಆರ್ಟಿಸಿ ಇಂಟರ್ನೆಟ್ನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದು, ತನ್ನ ಡಿಡಿಠ://ಢಿಢಿಢಿ.ಟಿಢ್ಞ್ಠಿಡ್ಛಿ.್ಝಟಿ/ಡ್ಡಠಠ್ಟ್ಠಡಿ/ ವೆಬ್ಸೈಟ್ನಲ್ಲಿ ಸಾರ್ವಜನಿಕ ದೂರು ದುಮ್ಮಾನ ವಿಭಾಗ ಆರಂಭಿಸಿದೆ.
ಏಕೆ ಈ ದೂರು ವಿಭಾಗ: ಖಾಸಗಿ ಸಾರಿಗೆ ಸಂಸ್ಥೆ ನೀಡುತ್ತಿರುವ ಉತ್ತಮ ಸೌಲಭ್ಯ ಮತ್ತು ಪೈಪೋಟಿಯ ಮಧ್ಯೆ ಅಸ್ತಿತ್ವ ಕಾಪಾಡಿಕೊಳ್ಳುವ ಏಕೈಕ ಉದ್ದೇಶ ಸಂಸ್ಥೆಗೆ ಇದೆ. ಹೀಗಾಗಿ ಸಿಬ್ಬಂದಿ ಮತ್ತು ಸಂಸ್ಥೆಯ ಆಡಳಿತ ವರ್ಗ ಮಾಡುತ್ತಿರುವ ತಪ್ಪುಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಎನ್ಡಬ್ಲ್ಯುಕೆಆರ್ಟಿಸಿ ತನ್ನ ವೆಬ್ಸೈಟ್ನಲ್ಲಿ ಸಾರ್ವಜನಿಕ ದೂರು ದುಮ್ಮಾನ ಆರಂಭಿಸಿದೆ. ಸಾಮಾನ್ಯವಾಗಿ ಎಲ್ಲ ವೆಬ್ಸೈಟ್ಗಳಂತೆ ಎನ್ಡಬ್ಲ್ಯೂಕೆಆರ್ಟಿಸಿ ವೆಬ್ಸೈಟ್ ಇದ್ದು, ಆನ್ಲೈನ್ ಪಬ್ಲಿಕ್ ಗ್ರೀವನ್ಸ್ ಮೇಲೆ ಕ್ಲಿಕ್ ಮಾಡಿದರೆ ಫೈಲ್ ಗ್ರೀವನ್ಸ್ ಮತ್ತು ಚೆಕ್ ಸ್ಟೇಟಸ್ ಎಂಬ ಎರಡು ಐಕಾನ್ಗಳು ದೂರು ಸಲ್ಲಿಸಬೇಕಾದ ಪ್ರಯಾಣಿಕನಿಗೆ ಗೋಚರಿಸುತ್ತವೆ. ಒಂದು ವೇಳೆ ಈಗಾಗಲೇ ದೂರು ಸಲ್ಲಿಸಿದ್ದಲ್ಲಿ ಆ ದೂರಿನ ಸ್ಥಿತಿಗತಿ ಕುರಿತು ಚೆಕ್ ಸ್ಟೇಟಸ್ನಲ್ಲಿ ದೂರು ಸಂಖ್ಯೆ ದಾಖಲಿಸುವ ಮೂಲಕ ತಿಳಿದುಕೊಳ್ಳಬಹುದು. ಸಿಬ್ಬಂದಿ ವಿರುದ್ಧ ಅಸಭ್ಯ ವರ್ತನೆ ಎಂದು ದೂರು ದಾಖಲಿಸಿದ್ದರೆ, ಸಂಬಂಧಿಸಿದ ಸಿಬ್ಬಂದಿ ವಿರುದ್ಧ ತೆಗೆದುಕೊಂಡ ಕ್ರಮದ ಮಾಹಿತಿ ಲಭಿಸುತ್ತದೆ. ಇಲ್ಲವೇ ಬಸ್ ನಿಲ್ದಾಣದಲ್ಲಿ ಮೂಲಸೌಲಭ್ಯಗಳ ಕುರಿತು ದೂರು ದಾಖಲಿಸಿದ್ದರೆ ಸೌಲಭ್ಯ ಕಲ್ಪಿಸುವುದಕ್ಕೆ ಸಂಸ್ಥೆ ತೆಗೆದುಕೊಂಡ ಕ್ರಮಗಳ ಮಾಹಿತಿ ದೊರೆಯುತ್ತದೆ. ದೂರು ದಾಖಲಿಸುವ (ಫೈಲ್ ಗ್ರೀವನ್ಸ್) ವಿಭಾಗದಲ್ಲಿ ದೂರು ಸಲ್ಲಿಸಬಯಸುವ ಪ್ರಯಾಣಿಕ ತನ್ನ ವೈಯಕ್ತಿಕ ವಿವರ, ಬಸ್ ನೋಂದಣಿ ಸಂಖ್ಯೆ, ಪ್ರಯಾಣಿಸುತ್ತಿದ್ದ ಬಸ್ನಲ್ಲಿದ್ದ ಚಾಲಕ ನಿರ್ವಾಹಕ ಹೆಸರು, ಟೋಕನ್ ನಂಬರ್ಗಳನ್ನು ದಾಖಲಿಸಿ ತಾನು ಅನುಭವಿಸಿದ ನೋವು ಇತ್ಯಾದಿ ವಿಷಯ ಬರೆಯಬೇಕು. ಒಂದು ವೇಳೆ ಕಾನೂನು ಬಾಹಿರ ಸಂಗತಿ ನಡೆಯುತ್ತಿರುವ ಚಿತ್ರ ಇದ್ದಲ್ಲಿ ಅಂತಹ ಚಿತ್ರಗಳನ್ನು ಕೂಡ ದೂರಿನೊಂದಿಗೆ ಅಪ್ಲೋಡ್ ಮಾಡುವುದಕ್ಕೆ ಅವಕಾಶವಿದೆ. ಸ್ಪಷ್ಟ ಸಾಕ್ಷ್ಯವನ್ನು ನೀಡಿದಲ್ಲಿ ಅಂತಹ ಸಿಬ್ಬಂದಿ, ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಅನುಕೂಲವಾಗುವಂತೆ ಫೋಟೋ, ವೀಡಿಯೋ ಅಥವಾ ಧ್ವನಿ ಮುದ್ರಣವನ್ನು ಕೂಡ ಅಪ್ಲೋಡ್ ಮಾಡಬಹುದು.
ಇಂಥಹದೊಂದು ಸೌಲಭ್ಯದಿಂದಾಗಿ ಪ್ರಯಾಣಿಕರು ಬಸ್ಗಳಲ್ಲಿ ಚಾಲಕರು, ನಿರ್ವಾಹಕರು ಹಾಗೂ ಬಸ್ ಸೇವೆಯಿಂದ ಅನುಭವಿಸುವ ಸಮಸ್ಯೆಗೆ ಪರಿಹಾರದ ಜತೆಗೆ ನ್ಯಾಯ ಸಿಗಲಿದೆ. ಪರಿಣಾಮ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಆಗಾಗ ಪ್ರಯಾಣಿಕರು ಹಾಗೂ ನಿರ್ವಾಹಕರೊಂದಿಗೆ ನಡೆಯುತ್ತಿದ್ದ ಕಿತ್ತಾಟಕ್ಕೆ ಕಡಿವಾಣ ಬೀಳಲಿದೆ. ಉತ್ತಮ ವ್ಯವಸ್ಥೆಯಿಂದ ಸಂಸ್ಥೆಗೆ ಲಾಭವೂ ಆಗಲಿದೆ.
-ಸತೀಶ ಪಾಗಾದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

