ವಾ.ಸಾ.ಸಂ. 780 ಹುದ್ದೆ ಶೀಘ್ರವೇ ಭರ್ತಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 11
ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 780 ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಹಾಗೂ ಪ್ರಸಕ್ತ ವರ್ಷ 750 ಹೊಸ ಸಾರಿಗೆ ಬಸ್ಗಳನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇಲ್ಲಿಯ ಬಂಡಿವಾಡ ಅಗಸಿಯಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ (ಸಿಬಿಟಿ) ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಉಪಯೋಗಿಸಿದ್ದ ಬಸ್ಗಳನ್ನು ಸಾರಿಗೆ ಸಂಸ್ಥೆಯ ಇತರ ವಿಭಾಗಗಳಿಗೆ ನೀಡುವುದನ್ನು ಮುಂದಿನ ದಿನಗಳಲ್ಲಿ ನಿಲ್ಲಿಸಲಾಗುವುದು ಎಂದರು.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿ ಇಲ್ಲ. ಆದರೆ, ವಿದ್ಯಾರ್ಥಿಗಳ, ವಯೋವೃದ್ಧರ ಹಾಗೂ ವಿಕಲಚೇತನರ ರಿಯಾಯಿತಿ ಬಸ್ ಪಾಸ್ಗಳ ಸಬ್ಸಿಡಿ ಹಣವನ್ನು ಹಣಕಾಸು ಇಲಾಖೆ ನಿಗದಿತ ಸಮಯಕ್ಕೆ ನೀಡದೇ ಇರುವುದರಿಂದ ಒಂದಿಷ್ಟು ನಷ್ಟ ಎದುರಿಸಬೇಕಾಗಿದೆ. ಸುಮಾರು ರು. 700 ಕೋಟಿ ಹಣವನ್ನು ಹಣಕಾಸು ಇಲಾಖೆ ನೀಡಬೇಕಿದೆ. ಮುಂದಿನ ವರ್ಷದೊಳಗೆ ಸಾರಿಗೆ ಸಂಸ್ಥೆಯ ನಾಲ್ಕೂ ವಿಭಾಗಗಳನ್ನು ಲಾಭದತ್ತ ಕೊಂಡೊಯ್ಯಲು ಪ್ರಯತ್ನಿಸಲಾಗುವುದು ಎಂದರು.
ಸಿಎಂರೊಂದಿಗೆ ಚರ್ಚೆ: ವಾಯವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳಿಗೆ ವಾಹನ ತೆರಿಗೆ ರಿಯಾಯಿತಿ, ಹೆಚ್ಚಿನ ಅನುದಾನ ಬಿಡುಗಡೆ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವ ಕುರಿತು ಸಿಎಂ ಅವರೊಂದಿಗೆ ಚರ್ಚಿಸಿದ್ದು, ಮುಖ್ಯಮಂತ್ರಿ ಅವರು ಸಮರ್ಪಕವಾಗಿ ಸ್ಪಂದಿಸಿದ್ದಾರೆ ಎಂದರು. ಬಿಆರ್ಟಿಎಸ್ ಯೋಜನೆ ತ್ವರಿತಗತಿಗಾಗಿ ಶೀಘ್ರದಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಈ ಭಾಗದ ಜನಪ್ರತಿನಿಧಿಗಳನ್ನು ಕರೆದು ಸಭೆ ನಡೆಸಲಾಗುವುದು. ಬಿಆರ್ಟಿಎಸ್ ಯೋಜನೆ ಅನುಷ್ಠಾನಕ್ಕೆ ಭೂಮಿ ವಶಪಡಿಸಿಕೊಳ್ಳುವಲ್ಲಿ ಯಾವುದೇ ರೀತಿ ತಾರತಮ್ಯ ಮಾಡಲಾಗದು. ಭೂಮಿ ವಶಪಡಿಸಿಕೊಳ್ಳುವ ಸಂದರ್ಭ ಯಾವುದೇ ರೀತಿಯ ರಾಜಕೀಯ ಪ್ರಭಾವವನ್ನು ಪರಿಗಣಿಸಲಾಗದು ಎಂದರು.
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಹಾಗೂ ಶಾಸಕ ಜಗದೀಶ ಶೆಟ್ಟರ, ಒಂದು ಸಮಯದಲ್ಲಿ ಹೆಚ್ಚಿನ ಲಾಭದಲ್ಲಿದ್ದ ವಾಯವ್ಯ ಸಾರಿಗೆ ಸಂಸ್ಥೆ ನಷ್ಟ ಅನುಭವಿಸಲು ಅಧಿಕಾರಿಗಳ ಅವೈಜ್ಞಾನಿಕ ಕಾರ್ಯನಿರ್ವಹಣೆಯೇ ಕಾರಣ ಎಂದು ಅಭಿಪ್ರಾಯಪಟ್ಟರು. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಗೆ ವಾಹನ ತೆರಿಗೆ ವಿನಾಯಿತಿ ನೀಡಲಾಗಿತ್ತು. ವಾಯವ್ಯ ಸಾರಿಗೆ ಸಂಸ್ಥೆಗೂ ವಾಹನ ತೆರಿಗೆ ವಿನಾಯಿತಿಗಾಗಿ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅಂದಿನ ಸಂಪುಟದ ನಿರ್ಧಾರವನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಇಂದಿನ ಕಾಂಗ್ರೆಸ್ ಸರ್ಕಾರದ ಮೇಲಿದೆ. ಇದಕ್ಕಾಗಿ ಈ ಭಾಗದ ಜನಪ್ರತಿನಿಧಿಗಳೆಲ್ಲ ಒಗ್ಗಟ್ಟಾಗಿ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಗೆ 25 ಕೋಟಿ ವಿಶೇಷ ಅನುದಾನ ನೀಡಲಾಗಿತ್ತು. ನಂತರ ತಾವು ಮುಖ್ಯಮಂತ್ರಿ ಆದ ನಂತರ ರು. 50 ಕೋಟಿ ವಿಶೇಷ ಅನುದಾನ ನೀಡಲು ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಇದುವರೆಗೂ ಈ ಅನುದಾನ ಬಿಡುಗಡೆಗೊಂಡಿಲ್ಲ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಾಗಿ 3,600 ಹೊಸ ಬಸ್ ಖರೀದಿಸಲಾಗಿತ್ತು. ಈ ಸರ್ಕಾರವೂ ಹೊಸ ಬಸ್ಗಳನ್ನು ಖರೀದಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಒದಗಿಸಬೇಕು ಎಂದರು.
ಕಾಮಗಾರಿ ಗುಣಮಟ್ಟದ್ದಾಗಿರಲಿ: ಮೂಲ ಸೌಲಭ್ಯ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ನಗರ ಸಾರಿಗೆ ನಿಲ್ದಾಣದ ಕಟ್ಟಡ ನಿರ್ಮಾಣ ಕಾಮಗಾರಿ ನಿಗದಿತ ಸಮಯದಲ್ಲಿ ಆಗಬೇಕು, ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು. ಬೆಂಗಳೂರಿಗೆ ನೀಡಿರುವ ಸಾರಿಗೆ ಸೌಲಭ್ಯಗಳನ್ನು ರಾಜ್ಯದ ಇತರ ಭಾಗಗಳಿಗೂ ನೀಡುವಂತೆ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಆಗ್ರಹಿಸಿದರು. ಸಂಸದ ಪ್ರಹ್ಲಾದ ಜೋಶಿ, ಕೇಂದ್ರ ಸರ್ಕಾರವು ಹು-ಧಾ ಮಧ್ಯೆ ಬಿಆರ್ಟಿಎಸ್ ಯೋಜನೆ ಜಾರಿಗೆ ಸಹಕಾರ ನೀಡಲು ಸಮ್ಮತಿಸಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯದ ಕೊರತೆಯಿಂದಾಗಿ ಕೇಂದ್ರದಿಂದ ಸಹಾಯ ಪಡೆಯಲು ಸಾಧ್ಯವಾಗಿಲ್ಲ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ವಾ.ಸಾ.ಸಂ. ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ವಾ.ಸಾ.ಸಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಮತ್ತಿತರರಿದ್ದರು. ಎನ್.ಜಿ. ನಾಯ್ಕರ ಪ್ರಾರ್ಥಿಸಿದರು. ಹುಬ್ಬಳ್ಳಿ ವಿಭಾಗೀಯ ಹಿರಿಯ ನಿಯಂತ್ರಣಾಧಿಕಾರಿ ಎ.ಎಸ್.ಆರ್. ನಮಾಜಿ ಸ್ವಾಗತಿಸಿದರು. ಪಿ.ವೈ. ನಾಯಕ್ ಹಾಗೂ ಸುನೀಲ ಪತ್ರಿ ನಿರೂಪಿಸಿದರು. ಎಚ್. ಬಾಬುರಾವ್ ವಂದಿಸಿದರು.
ಸಿಬಿಟಿ ನೂತನ ಕಟ್ಟಡ ನಿರ್ಮಾಣದ ವಿವರ
ಯೋಜನೆಯ ಮೊತ್ತ: 14.21 ಕೋಟಿ
ನಿವೇಶನದ ವಿಸ್ತೀರ್ಣ: 34 ಗುಂಟೆ
ಯೋಜನೆಯ ಒಟ್ಟು ಅವಧಿ: 18 ತಿಂಗಳು
ಕಟ್ಟಡದಲ್ಲಿರುವ ಸೌಕರ್ಯ: ಉಪಾಹಾರ ಗೃಹ, ಪಾಸ್ ಕೌಂಟರ್, ಶೌಚಾಲಯ, ಅಂಚೆ ಕಚೇರಿ
ಕಟ್ಟಡದ ಒಟ್ಟು ವಿಸ್ತೀರ್ಣ: 60 ಸಾವಿರ ಚದುರ ಅಡಿ
ಗುತ್ತಿಗೆದಾರರ ಹೆಸರು: ಕೆಎಂವಿ ಪ್ರಸಾದರಾವ್, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರು, ಹೈದರಾಬಾದ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

