ಇನ್ಮುಂದೆ ದಣಿಯಲಿದ್ದಾರೆದೈಹಿಕ ಶಿಕ್ಷಣ ಶಿಕ್ಷಕರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 14
ಕ್ಲಾಸೊಂದರಲ್ಲಿ ಕುಳಿತ ಮಕ್ಕಳಿಗೆ ಪಾಠ ಹೇಳುವುದರಲ್ಲಿಯೇ ಶಿಕ್ಷಕರು ಹೈರಾಣಾಗಿ ಬಿಡುತ್ತಾರೆ. ಅಂಥದರಲ್ಲಿ ಮೂರು ಶಾಲೆಗಳಿಗೆ ಓಡಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡುವಂತಾದರೆ ಶಿಕ್ಷಕನ ಗತಿ ಏನಾಗಬೇಡ ಹೇಳಿ..?
ಹೌದು.., ಶಿಕ್ಷಕನ ಕಥೆ ಮುಗಿಯಿತು ಬಿಡಿ ಎನ್ನಬಹುದು. ಇಂಥದೊಂದು ಅವೈಜ್ಞಾನಿಕ ಪದ್ಧತಿಗೆ ನಾಂದಿ ಹಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ದೈಹಿಕ ಶಿಕ್ಷಕರ ನೇಮಕಾತಿಗೆ ಮೀನಾಮೇಷ ಎಣಿಸುತ್ತಿರುವ ಸರ್ಕಾರ ಇದೀಗ ಸರ್ವ ಶಿಕ್ಷಣ ಅಭಿಯಾನದಡಿ 1360 ಅರೆಕಾಲಿಕ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ. ಅರೆಕಾಲಿಕವಾದರೂ ಸೈ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳೋಣವೆಂದರೆ ಓರ್ವ ಶಿಕ್ಷಕ ಮೂರು ಶಾಲೆಗಳಿಗೆ ಸುತ್ತಾಡಿ ಪಾಠ ಹೇಳುವ ನಿಯಮ ಅವೈಜ್ಞಾನಿಕ ನಿಯಮ ಜಾರಿಗೆ ತಂದಿರುವುದು ನೇಮಕಾತಿಯ ಹೊಸ್ತಿಲಲ್ಲಿರುವ ಶಿಕ್ಷಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನೇಮಕಾತಿ ಹಗ್ಗಜಗ್ಗಾಟ: ರಾಜ್ಯದ 43 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಾವಳಿಯ ಪ್ರಕಾರವೇ 2500 ಹುದ್ದೆಗಳು ಖಾಲಿ ಇವೆ. ಈ ಪೈಕಿ ವಯೋವುತಿ ಮೀರುತ್ತಿರುವ 952 ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು 2007 ಜೂನ್ ತಿಂಗಳಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿತ್ತು. ನೇಮಕಾತಿ ಮಾತ್ರ ಆಗಲೇ ಇಲ್ಲ.
ಈ ನಡುವೆ 2010ರಲ್ಲಿ ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರು ಮೂರು ಶಾಲೆಗಳಿಗೊಬ್ಬರಂತೆ ರಾಜ್ಯದಲ್ಲಿ 1421 ಅರೆಕಾಲಿಕ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸುವುದಾಗಿ ತಿಳಿಸಿದ್ದರು. ಆದರೆ, ಮೂರು ಶಾಲೆಗಳಿಗೆ ಓಡಾಡಿ ಪಾಠ ಹೇಳುವುದು ಅಸಾಧ್ಯದ ಮಾತು. ಇದು ನಿರುಪಯೋಗಿ ಯೋಜನೆ ಇದರಿಂದ ಶಿಕ್ಷಕರ ಸಮಯ, ಹಣ ವ್ಯರ್ಥವಾಗುತ್ತದೆ. ಜತೆಗೆ ವಿದ್ಯಾರ್ಥಿಗಳಿಗೆ ಸರಿಯಾಗಿ ದೈಹಿಕ ಪಾಠವೂ ಸಿಗುವುದಿಲ್ಲ. ಈ ಯೋಜನೆ ಕೈಬಿಟ್ಟು ಅಗತ್ಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಖಾಯಂ ನೇಮಕ ಮಾಡಿಕೊಳ್ಳಬೇಕೆಂದು ದೈಹಿಕ ಶಿಕ್ಷಣ ಶಿಕ್ಷಕರು ಒತ್ತಾಯಿಸಿದ್ದರಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು.
ನೇಮಕಾತಿಗೆ ಮರುಜೀವ: ಇದೀಗ ಮತ್ತೇ ಸರ್ವ ಶಿಕ್ಷಣ ಅಭಿಯಾನದಡಿ ಅರೆಕಾಲಿಕ ಶಿಕ್ಷಕರನ್ನು ನೇಮಿಸಿಕೊಳ್ಳಲು ಇಲಾಖೆ ಮುಂದಾಗಿದೆ. ಈ ಬಾರಿ ನೇಮಕಾತಿ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ರಾಜ್ಯದ 12 ಜಿಲ್ಲೆಗಳಾದ ದಾವಣಗೆರೆ, ಗದಗ, ಶಿವಮೊಗ್ಗ, ತುಮಕೂರು, ಮೈಸೂರು, ಉತ್ತರ ಕನ್ನಡ, ಬೀದರ್, ಗುಲ್ಬರ್ಗಾ, ಬಳ್ಳಾರಿ, ರಾಯಚೂರು, ಕೊಪ್ಪಳ, ಧಾರವಾಡಕ್ಕೆ ಅನ್ವಯವಾಗುವಂತೆ 1360 ಶಿಕ್ಷಕರನ್ನು ನೇಮಿಸಿಕೊಳ್ಳುವುದಾಗಿ ಸರ್ವ ಶಿಕ್ಷಣ ಅಭಿಯಾನಸಹ ನಿರ್ದೇಶಕರು ಪ್ರಕಟಿಸಿದ್ದಾರೆ.
ದಣಿಯಲಿದ್ದಾರೆ ಶಿಕ್ಷಕರು: ಈ ಹಿಂದೆಯೇ ದೈಹಿಕ ಶಿಕ್ಷಣ ಶಿಕ್ಷಕರಿಂದ ವಿರೋಧ ವ್ಯಕ್ತವಾದಾಗಲೂ ಇದೀಗ ಪುನಃ ಓರ್ವ ಶಿಕ್ಷಕನನ್ನು ಮೂರು ಶಾಲೆಗೆ ಓಡಾಡಿ ಪಾಠ ಮಾಡುವಂತೆ ನೇಮಕ ಮಾಡಿಕೊಳ್ಳಲು ಹೊರಟಿರುವುದು ಅಚ್ಚರಿ ಮೂಡಿಸಿದೆ. ಇನ್ನು ಶಿಕ್ಷಕರಿಗೆ ಉತ್ತಮ ಸಂಬಳ ನೀಡುತ್ತಿದ್ದಲ್ಲಿ ಹೇಗೋ ನಿಭಾಯಿಸಬಹುದಾಗಿತ್ತು, ಆದರೆ ಪ್ರತಿ ಶಾಲೆಗೊಂದರಂತೆ ರು. 1360 ವೇತನ ನೀಡಲಾಗುತ್ತಿದ್ದು, 3 ಶಾಲೆ ಸೇರಿಸಿದರೆ ರು. 4080 ತಿಂಗಳ ವೇತನವಾಗುತ್ತದೆ. ಇದರೊಟ್ಟಿಗೆ ಬೇರೆ ಬೇರೆ ಶಾಲೆಗೆ ಓಡಾಡಲು ತಗಲುವ ವೆಚ್ಚವನ್ನು ನೇಮಕಗೊಳ್ಳಲಿರುವ ಅರೆಕಾಲಿಕ ಶಿಕ್ಷಕರೇ ಭರಿಸಬೇಕಿದೆ.
ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರಿಂದ 1ರಿಂದ 7ನೇ ತರಗತಿಗೆ ಕೇವಲ ಒಂದೇ ಶಾಲೆಯಲ್ಲಿ ತಾತ್ವಿಕ ಮತ್ತು ಪ್ರಾಯೋಗಿಕ ಪಠ್ಯಕ್ರಮ ಕಲಿಸಲು ಸಮಯ ಸಾಕಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಒಬ್ಬ ಅರೆಕಾಲಿಕ ದೈಹಿಕ ಶಿಕ್ಷಣ ಶಿಕ್ಷಕ ದೂರದ 3 ಶಾಲೆಗೆ ಅಲೆಮಾರಿಯಂತೆ ಓಡಾಡಿ ಪಾಠ ಹೇಳುವುದು ಹೇಗೆ ಸಾಧ್ಯವಾದೀತು? ಎನ್ನುವ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಿದೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

