ಸಣ್ಣ ಕೈಗಾರಿಕಾ ಕ್ಷೇತ್ರವನ್ನು ಕಾಂಗ್ರೆಸ್ ನಿರ್ಲಕ್ಷಿಸುತ್ತಿದೆ
ಹುಬ್ಬಳ್ಳಿ: ರಾಜ್ಯದ ಸುಮಾರು 2.5 ಕೋಟಿ ಜನರಿಗೆ ಅನ್ನ ನೀಡುತ್ತಿರುವ ಸಣ್ಣ ಕೈಗಾರಿಕಾ ಕ್ಷೇತ್ರವನ್ನು ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸುತ್ತಿದ್ದು, ಇದರ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ಎಂದು ಕರ್ನಾಟಕ ವಾಣಿಜ್ಯೋದ್ದಮ ಸಂಸ್ಥೆಗಳ ಒಕ್ಕೂಟದ ಮಾಜಿ ಅಧ್ಯಕ್ಷ ಜೆ.ಎಲ್. ಕ್ರಾಸ್ಟಾ ಹೇಳಿದರು.
ಭಾನುವಾರ ಕೆಸಿಸಿಐ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು. ರಾಜ್ಯದ ರಾಜಸ್ವದಲ್ಲಿ ಶೇ. 54ರಷ್ಟು ಆದಾಯ ಸಣ್ಣ ಕೈಗಾರಿಕೆಗಳಿಂದ ಬರುತ್ತಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚು ಜನರಿಗೆ ಸಣ್ಣ ಕೈಗಾರಿಕಾ ಕ್ಷೇತ್ರ ಉದ್ಯೋಗ ನೀಡಿದೆ. ನಾಲ್ಕು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಸಣ್ಣ ಕೈಗಾರಿಕಾ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಹ್ವಾನಿಸಿಲ್ಲ. ನೇರವಾಗಿ ಹೇಳಬೇಕು ಎಂದರೆ ಸುಮಾರು ಎರಡೂವರೆ ಕೋಟಿ ಮತದಾರರು ಸಣ್ಣ ಕೈಗಾರಿಕೆ ಕ್ಷೇತ್ರ ಅವಲಂಬಿಸಿದ್ದಾರೆ. ಹೀಗಾಗಿ ಸರ್ಕಾರ ನಮ್ಮನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದರು. ರಾಜ್ಯದಲ್ಲಿ ಉತ್ಪಾದನೆಯಾಗುವ ಸಣ್ಣ ಕೈಗಾರಿಕೋತ್ಪನ್ನಗಳಿಗೆ ಶೇ. 14.5ರಷ್ಟು ಮೌಲ್ಯ ವರ್ದಿತ ತೆರಿಗೆ ವಿಧಿಸಲಾಗುತ್ತಿದೆ. ಆದರೆ, ಅದೇ ವಸ್ತುವನ್ನು ಪಕ್ಕದ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದ ಇಲ್ಲಿನ ಬೃಹತ್ ಕೈಗಾರಿಕೋದ್ಯಮಿಗಳು ಖರೀದಿಸಿದರೆ ಶೇ. 2ರಷ್ಟು ಕೇಂದ್ರ ಮಾರಾಟ ತೆರಿಗೆ ಅನ್ವಯವಾಗುತ್ತದೆ. ಅತಿಯಾದ ತೆರಿಗೆ ಪರಿಣಾಮ ರಾಜ್ಯದಲ್ಲಿ ಬಿಡಿ ಭಾಗ ಉದ್ಯಮ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣ ಗಮನ ಹರಿಸಿ, ಸಾಲ ಮನ್ನಾ, ರಿಯಾಯಿತಿಯಂತಹ ಬೇಡಿಕೆಗಳನ್ನು ನಾವು ಮಂಡಿಸುತ್ತಿಲ್ಲ. ಬದಲಿಗೆ ಇತರ ರಾಜ್ಯಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ನೀಡಿರುವ ಸೌಲಭ್ಯ ನೀಡಿ ಅತ್ಯಧಿಕವಾಗಿರುವ ತೆರಿಗೆ ಮೊತ್ತವನ್ನು ಇತರ ರಾಜ್ಯಗಳಂತೆ ಕಡಿಮೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ ಆದರೂ ಸರ್ಕಾರ ನಮ್ಮ ಮಾತಿಗೆ ಮನ್ನಣೆ ನೀಡುತ್ತಿಲ್ಲ.
ಅವೈಜ್ಞಾನಿಕ ತೆರಿಗೆ ಪದ್ಧತಿಗೆ ಸರ್ಕಾರ ಇತಿಶ್ರೀ ಹೇಳದಿದ್ದರೆ ರಾಜ್ಯದಲ್ಲಿ ಶೇ. 80ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ಕಣ್ಣು ಮುಚ್ಚಬೇಕಾಗುತ್ತದೆ ಎಂದರು. ಕಾಸಿಯಾ ಅಧ್ಯಕ್ಷ ಬಿ.ಪಿ. ಶ್ರೀಧರ ಅವರು, ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದಿದ್ದೇವೆ.
ಹದಿನೈದು ದಿನಗಳಲ್ಲಿ ಈ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎಂದರು. ಈ ಸಂದರ್ಭ ಕೈಗಾರಿಕೋದ್ಯಮಿಗಳಾದ ಮುರುಗೇಶ ನಿರಾಣಿ, ಲಜಪತರಾಯ್ ಸುಖೇಜಾ, ತಿಲಕ್ ವಿಕಮ್ಸಿ, ನಾಗರಾಜ ಯಲಿಗಾರ ಮತ್ತು ದಾಸನೂರು ಸಮೂಹದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ದಾಸನೂರ ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

