ಉಣಕಲ್ ಕೆರೆಯಲ್ಲಿ ಚರಂಡಿ ನೀರೇ ಅಧಿಕ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 17
ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಭವಿಷ್ಯದಲ್ಲಿ ಉಣಕಲ್ ಕೆರೆ ಸಂಪೂರ್ಣ ಚರಂಡಿ ನೀರಾಗಿ ಬದಲಾವಣೆಗೊಂಡಲ್ಲಿ ಅಚ್ಚರಿಪಡಬೇಕಿಲ್ಲ.
ಈಗಾಗಲೇ ನವನಗರ ಹಾಗೂ ಉಣಕಲ್ ಮಧ್ಯದ ಕೆರೆಗಳಾದ ಬಸವನಕೆರೆ ಹಾಗೂ ಟೋಪಿನಕೆರೆಗಳು ಚರಂಡಿ ನೀರಿನಿಂದ ಸಂಪೂರ್ಣ ಹಾಳಾಗಿದ್ದು, ಮುಂದಿನ ಸರದಿ ಉಣಕಲ್ ಕೆರೆಯದ್ದಾಗಲಿದೆ ಎಂಬ ಆತಂಕ ನಾಗರಿಕರದ್ದು.
ಗಿಡ, ಗಂಟೆ ವಿಷಜಂತು: ದಶಕಗಳ ಹಿಂದೆ ಉತ್ತಮ ನೀರಿದ್ದ ಬಸವನಕೆರೆ ಹಾಗೂ ಟೋಪಿನಕೆರೆಗಳ ಬಳಿ ಸದ್ಯ ತಿರುಗಾಡಲೂ ಆಗದಂಥ ಸ್ಥಿತಿ ಇದೆ. ಎರಡೂ ಕೆರೆಗಳ ಸುತ್ತಲಿನ ಪ್ರದೇಶ ಚರಂಡಿ ನೀರಿನಿಂದಾಗಿ ದುರ್ನಾತದಿಂದ ಕೂಡಿದ್ದು, ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಈ ಕೆರೆಗಳು ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟಿವೆ. ಕೆರೆಗಳ ಸುತ್ತ ನಿವೇಶನಗಳು ತಲೆ ಎತ್ತಿದ್ದು, ಕೆರೆಗಳು ದುರ್ನಾತ ಹಾಗೂ ಅದರಲ್ಲಿ ವಾಸಿಸುವ ವಿಷಜಂತುಗಳಿಂದಾಗಿ ನಾಗರಿಕರು ಇಲ್ಲಿ ನಿವೇಶನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಚರಂಡಿ ನೀರು ಶೇಖರಣೆ: ಎರಡೂ ಕೆರೆಗಳಲ್ಲಿ ತುಂಬಿ ಹರಿಯುವ ಚರಂಡಿ ನೀರು ಉಣಕಲ್ ಕೆರೆ ಸೇರುತ್ತಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಉಣಕಲ್ ಕೆರೆ ಪರಿಸ್ಥಿತಿಯೂ ಭಿನ್ನವಾಗಲಿಕ್ಕಿಲ್ಲ. ಈಗಾಗಲೇ ಕೆರೆಯ ಆಳದ ಅರ್ಧಕ್ಕೂ ಹೆಚ್ಚು ಭಾಗ ಹೂಳು ತುಂಬಿದೆ. 25 ವರ್ಷಗಳಿಂದ ಕೆರೆ ಹೂಳು ತೆಗೆದಿಲ್ಲ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕೆರೆಗಳಲ್ಲಿನ ನೀರು ಕಡಿಮೆಯಾಗುವುದರಿಂದ ಆ ಸಮಯ ಕೆರೆ ಹೂಳು ತೆಗೆಯಲಾಗುತ್ತದೆ. ಆದರೆ, ಉಣಕಲ್ ಕೆರೆಯಲ್ಲಿ ನೀರು ಸದಾ ತುಂಬಿಯೇ ಇರುತ್ತದೆ. ಇಲ್ಲಿಯ ನೀರು ಕಡಿಮೆಯಾಗುವುದೇ ಇಲ್ಲ. ಇದಕ್ಕೆ ಕಾರಣವೆಂದರೆ ದಿನದ 24 ತಾಸೂ ಕೆರೆಗೆ ಸೇರುವ ನವನಗರ, ಗಾಮನಗಟ್ಟಿ, ಬೈರಿದೇವರಕೊಪ್ಪ, ಅಮರಗೋಳ ಹಾಗೂ ಸುತ್ತಲಿನ ಪ್ರದೇಶಗಳ ಚರಂಡಿ ನೀರು.
ತುಮಕೂರು ಹಾಗೂ ಬೆಂಗಳೂರಿನಲ್ಲಿನ ಅಲಸೂರು ಕೆರೆಗಳ ದುಸ್ಥಿತಿಯೂ ಭಿನ್ನವಾಗಿರಲಿಲ್ಲ. ಅಲ್ಲಿಯೂ ಕೆರೆಗೆ ಸೇರುವ ಚರಂಡಿ ನೀರು ತಡೆಯಲು ಆಡಳಿತ ನಿರ್ಲಕ್ಷ್ಯ ತೋರಿತ್ತು. ಅತಿ ಕಡಿಮೆ ವೆಚ್ಚದಲ್ಲಿ ಕೆರೆಗೆ ಸೇರುವ ನೀರು ತಡೆಯುವುದನ್ನು ನಿರ್ಲಕ್ಷಿಸಿದ್ದರಿಂದ ನೂರಾರು ಕೋಟಿ ರು. ವೆಚ್ಚ ಮಾಡುವ ಅನಿವಾರ್ಯತೆ ತಲೆದೋರಿತು. ಇದೀಗ ತುಮಕೂರು ಹಾಗೂ ಬೆಂಗಳೂರಿನ ಕೆರೆಗಳಲ್ಲಿ ಚರಂಡಿ ನೀರು ಸೇರುವುದು ನಿಂತಿದೆಯಲ್ಲದೇ, ಈ ಎರಡೂ ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಎಚ್ಚೆತ್ತುಕೊಳ್ಳಬೇಕು: ಉಣಕಲ್ ಕೆರೆಗೆ ಸೇರುವ ಚರಂಡಿ ನೀರು ತಡೆಯಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಶೀಘ್ರ ಕ್ರಮಕೈಗೊಳ್ಳದಿದ್ದಲ್ಲಿ ಭವಿಷ್ಯದ ದಿನಗಳಲ್ಲಿ ಉಣಕಲ್ ಕೆರೆ 'ಉಗುರಿನಿಂದ ಹೋಗುವುದಕ್ಕೆ ಕೊಡಲಿ ಬಳಸಿದರು' ಎಂಬುವ ಸ್ಥಿತಿಗೆ ಬಂದು ತಲುಪುವುದರಲ್ಲಿ ಎರಡು ಮಾತಿಲ್ಲ.
ರು. 2 ಕೋಟಿಗೂ ಅಧಿಕ ಹಣ ವೆಚ್ಚ ಮಾಡಿ ಉಣಕಲ್ ಕೆರೆ ದಂಡೆ ಮೇಲೆ ಸುಂದರ ಉದ್ಯಾನ ನಿರ್ಮಿಸಿರುವ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ವೈಖರಿ 'ಮೇಲೆಲ್ಲ ಥಳಕು ಒಳಗೆಲ್ಲ ಹುಳುಕು' ಎಂಬಂತಿದೆ.
ಉಣಕಲ್ ಕೆರೆ ಮೇಲೆ ನಿರ್ಮಿಸಿರುವ ಉದ್ಯಾನದ ಉದ್ಘಾಟನೆ ಸಂದರ್ಭ ಸುತ್ತಲಿನ ನಿವಾಸಿಗಳು ಮೊದಲು ಕೆರೆ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದರು. ಆ ಸಂದರ್ಭದಲ್ಲಿ ಮುಂದಿನ ಒಂದು ವರ್ಷದೊಳಗೆ ಕೆರೆ ಸ್ವಚ್ಛಗೊಳಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿತ್ತು. ಆದರೆ, ಈ ಭರವಸೆ ಇದುವರೆಗೂ ಈಡೇರಿಲ್ಲ.
ಉಣಕಲ್ ಕೆರೆಗೆ ಸೇರುವ ಒಳಚರಂಡಿ ನೀರು ಸ್ಥಗಿತಗೊಂಡು, ಕೆರೆಗೆ ಐತಿಹಾಸಿಕ ಸ್ಥಿತಿ ಬರಲು ಇನ್ನೆಷ್ಟು ವರ್ಷಗಳು ಬೇಕೋ? ಕಾಯ್ದು ನೋಡಬೇಕು.
ಉಣಕಲ್ ಕೆರೆ ಸ್ವಚ್ಛಗೊಳಿಸಲಾಗುವುದು
ಅವಳಿ ನಗರದಲ್ಲಿ ನಡೆದಿರುವ ಬೃಹತ್ ಒಳಚರಂಡಿ ನಿರ್ಮಾಣ ಕಾಮಗಾರಿಯ ಒಟ್ಟು ಯೋಜನೆ ವೆಚ್ಚದಲ್ಲಿ ಉಳಿಯುವ ಹಣವನ್ನು ಕೆರೆ ಸ್ವಚ್ಛತೆಗೆ ಬಳಸಲಾಗುವುದು. ಅವಳಿ ನಗರದ ಕೆರೆಗಳಿಗೆ ಸೇರುವ ಚರಂಡಿ ನೀರು ಹರಿಯುವ ದಿಕ್ಕು ಬದಲಾಯಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಚರಂಡಿ ನೀರು ಸೇರುವ ಕೆರೆಗಳನ್ನು ಗುರುತಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ. ಕೆರೆಗಳಿಗೆ ಸೇರುವ ಚರಂಡಿ ನೀರು ತಡೆಯಲು ಇದುವರೆಗೆ ಹಣ ಇರಲಿಲ್ಲ. ಆದರೆ, ಇದೀಗ ಬೃಹತ್ ಒಳಚರಂಡಿ ನಿರ್ಮಾಣ ಕಾಮಗಾರಿಯ ಒಟ್ಟಾರೆ ವೆಚ್ಚದಲ್ಲಿ ಸ್ವಲ್ಪ ಹಣ ಉಳಿಸಲಾಗಿದ್ದು, ಈ ಹಣವನ್ನು ಕೆರೆ ಸ್ವಚ್ಛತೆಗೆ ಬಳಸಿಕೊಳ್ಳಲಾಗುವುದು.
- ಸಮೀರ ಶುಕ್ಲಾ, ಜಿಲ್ಲಾಧಿಕಾರಿ, ಧಾರವಾಡ
ಚರಂಡಿ ನೀರಿನ ಮಾರ್ಗ ಬದಲಾವಣೆಗೆ ಜಿಲ್ಲಾಡಳಿಕ್ಕೆ ಸೂಚಿಸಿದ್ದೆ...
ಉಣಕಲ್ ಉದ್ಯಾನ ಸಂದರ್ಭದಲ್ಲಿಯೇ ಕೆರೆಗೆ ಸೇರುವ ಚರಂಡಿ ನೀರಿನ ಮಾರ್ಗ ಬದಲಾಯಿಸುವಂತೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಸೂಚಿಸಲಾಗಿತ್ತು. ಈ ಕುರಿತು ಪ್ರಾರಂಭಿಸಿದ ಕಾಮಗಾರಿಯೂ ಪ್ರಗತಿಯಲ್ಲಿದೆ. ಆದರೆ, ಕಾಮಗಾರಿಯ ವೇಗ ನಿಧಾನಗತಿಯಲ್ಲಿ ಸಾಗಿದೆ. ಇದಕ್ಕಿರುವ ಕಾರಣ ಕಂಡುಹಿಡಿದು ಕಾಮಗಾರಿಗೆ ವೇಗ ನೀಡಲಾಗುವುದು. ಉಣಕಲ್ ಕೆರೆ ಸ್ವಚ್ಛತೆಗೆ ತಕ್ಷಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರೊಂದಿಗೂ ಚರ್ಚಿಸಲಾಗುವುದು.
- ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ, ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

