ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದ ಭಕ್ತರು
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬುಧವಾರ ರಾತ್ರಿ ಒಂದೇ ಜಪ, ಅದುವೇ ಗಣಪತಿ ಬಪ್ಪಾ ಮೋರಯಾ... ಮಂಗಲ ಮೂರ್ತಿ ಮೋರಯಾ... ಮೋರಿಯಾರೆ.. ಬಪ್ಪ.. ಮೋರಿಯಾರೆ... ಗಣೇಶ ಮಹರಾಜಕೀ ಜೈ...
ಭಾದ್ರಪದ ಚೌತಿಯಂದು ಪ್ರತಿಷ್ಠಾಪನೆಗೊಂಡ ಸಾರ್ವಜನಿಕ ಗಣೇಶ ವಿಗ್ರಹಗಳು 10ನೇ ದಿನವಾದ ಬುಧವಾರದ ಅನಂತ ಚತುರ್ದಶಿಯಂದು ಭವ್ಯ ಮೆರವಣಿಗೆಯೊಂದಿಗೆ ವಿಸರ್ಜನೆಗೊಂಡಿತು. ಗಣೇಶ ವಿಸರ್ಜನೆಯ ನಿಮಿತ್ತ ಸಂಪೂರ್ಣ ಹುಬ್ಬಳ್ಳಿಯಲ್ಲಿ ವಿಘ್ನನಿವಾರಕನ ಗಾಯನ, ನೃತ್ಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.
ಗಣೇಶ ವಿಸರ್ಜನೆ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೆನಿಸಿಕೊಂಡಿರುವ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಹುಬ್ಬಳ್ಳಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ದಾಜೀಬಾನ್ ಪೇಟೆಯ ಹುಬ್ಬಳ್ಳಿ ಕಾ ರಾಜಾ, ಮರಾಠಾ ಗಲ್ಲಿ, ಗಣೇಶಪೇಟ, ಸಿಂಪಿಗಲ್ಲಿ, ಕೋಯಿನ್ರೋಡ್, ಸ್ಟೇಶನ್ ರೋಡ್, ಉದಯನಗರ, ಮೂರುಸಾವಿರ ಮಠ, ದುರ್ಗದಬೈಲ್, ಕಮರಿಪೇಟ, ಡಾಕಪ್ಪ ಸರ್ಕಲ್, ಬಾರದಾನಸಾಲ್, ಹೊಸೂರ, ಗೋಕುಲ ರಸ್ತೆ, ಬಾಕಳೆ ಗಲ್ಲಿ ಸೇರಿದಂತೆ ಇನ್ನಿತರ ಓಣಿಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ಭವ್ಯ ಮೆರವಣಿಗೆ: ಗಣೇಶ ವಿಸರ್ಜನೆಯ ಭವ್ಯ ಮೆರವಣಿಗೆ ನೋಡಲು ಕಣ್ಣೆರಡೂ ಸಾಲದು ಎಂಬಂತಿತ್ತು. ಸಾಗರೋಪಾದಿಯಲ್ಲಿ ನೆರೆದಿದ್ದ ಜನರ ನಡುವೆ ಸಾಗಿದ್ದ ಗಣೇಶನ ಮೆರವಣಿಗೆ ಅದ್ಧೂರಿಯೋ ಅದ್ಧೂರಿ. ಮುಗಿಲೆತ್ತರಕ್ಕಿದ್ದ ಹುಬ್ಬಳ್ಳಿ ಕಾ ರಾಜಾ, ಮರಾಠಾ ಗಲ್ಲಿಯ ಗಣೇಶ ವಿಗ್ರಹ ನೋಡುವುದೇ ಹಬ್ಬವಾಗಿತ್ತು.
ಗಲ್ಲಿ ಗಲ್ಲಿಯಿಂದ ಹೊರಟ ಮೆರವಣಿಗೆ ಹುಬ್ಬಳ್ಳಿಯ ಹೃದಯ ಭಾಗವಾಗಿರುವ ಚೆನ್ನಮ್ಮ ವೃತ್ತದಲ್ಲಿ ಸೇರುತ್ತಿತ್ತು. ಅಲ್ಲಿಂದ ಹಳೇ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ ಇಂದಿರಾ ಗಾಜಿನ ಮನೆಯಲ್ಲಿನ ಬಾವಿಯಲ್ಲಿ ವಿಗ್ರಹ ವಿಸರ್ಜಿಸಲಾಯಿತು.
ಕುಳಿದು ಕುಪ್ಪಳಿಸಿದರು: ಗಣೇಶ ವಿಸರ್ಜನೆಗೆ ವಿವಿಧ ಜಾನಪದ ಕಲಾ ತಂಡಗಳು, ವಾದ್ಯ ವೃಂದಗಳು, ಝಾಂಜ್ ಮೇಳ, ಜಾನಪದ ಕಲಾ ತಂಡಗಳು ಮೆರಗು ತಂದಿದ್ದವು. ಕಿವಿಗಡಚಿಕ್ಕುವ ಧ್ವನಿ ವರ್ಧಕಗಳಿಂದ ಹೊರ ಹೊಮ್ಮುತ್ತಿದ್ದ ಹಾಡಿಗೆ ತಕ್ಕಂತೆ ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು. ಗಣೇಶ ನಾಮ ಸ್ಮರಣೆ, ಗಣೇಶನ ಜಯ ಘೋಷ ಹಾಕುತ್ತಾ ಕುಳಿದು ಕುಪ್ಪಳಿಸಿದರು. ಇನ್ನು ಪುಟ್ಟ ಮಕ್ಕಳು ಗಣೇಶ, ಶಿವ-ಪಾರ್ವತಿ, ಸಿದ್ಧಾರೂಢ, ಪುಟ್ಟರಾಜ ಗವಾಯಿಗಳ ವೇಷಭೂಷಣ ಧರಿಸಿದ್ದು ಗಮನ ಸೆಳೆಯಿತು.
ಜನವೋ ಜನ: ಗಣೇಶನಿಗೆ ವೈಭವದ ವಿದಾಯ ಹೇಳಲು ಮೆರವಣಿಗೆಯಲ್ಲಿ ಕುಳಿದು ಕುಪ್ಪಳಿಸುವ ಜನ ಒಂದೆಡೆಯಾದರೆ ಗಣೇಶ ವಿಸರ್ಜನೆಯ ಅವಿಸ್ಮರಣೀಯ ದೃಶ್ಯ ಕಣ್ತುಂಬಿಕೊಳ್ಳಲು ಅದಕ್ಕೂ ಹೆಚ್ಚು ಜನ ನೆರೆದಿದ್ದರು. ದಾಜೀಬಾನ್ಪೇಟೆ, ಕೊಪ್ಪಿಕರ ರಸ್ತೆ, ಸ್ಟೇಶನ್ ರಸ್ತೆ, ದುರ್ಗದ ಬೈಲ್ ಮಾರ್ಗವಾಗಿ ಸಾಗಿ ಬರುತ್ತಿದ್ದ ಗಣೇಶ ಮೆರವಣಿಗೆ ನೋಡಲು ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಮನೆ, ಅಂಗಡಿ ಸೇರಿದಂತೆ ಕಟ್ಟಡದ ತುತ್ತ ತುದಿಯಲ್ಲಿ ನಿಂತು ಜನರು ಗಣೇಶ ವಿಸರ್ಜನೆಯ ವೈಭವವನ್ನು ವೀಕ್ಷಿಸಿದರು. ಬೆಳಗಿನ ಜಾವದವರೆಗೂ ಗಣೇಶ ವಿಸರ್ಜನೆ ಸಂಭ್ರಮದಿಂದ ನೆರವೇರಿತು.
ಬಾನಂಗಳದಲ್ಲಿ ಚಿತ್ತಾರ: ಗಣೇಶ ಹಬ್ಬ ಎಂದ ಮೇಲೆ ಕೇಳಬೇಕೇ ಪಟಾಕಿ ಸದ್ದು ಇದ್ದೇ ಇರುತ್ತದೆ. ಪರಿಸರ ಹಾನಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿ ಸದ್ದು ಮಾತ್ರ ಅಡಗಲಿಲ್ಲ. ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳು ಆಕರ್ಷಕವಾಗಿದ್ದವು. ಮಕ್ಕಳು, ಮಹಿಳೆಯರು ಹಿರಿಹಿರಿ ಹಿಗ್ಗಿದರು.
ಝಗಮಗಿಸು ಲೈಟ್: ಗಣೇಶ ಮೆರವಣಿಗೆ ಆಕರ್ಷಕ ಕಳೆ ತಂದಿದ್ದು ಝಗಮಗಿಸುವ ವಿದ್ಯುತ್ ಅಲಂಕಾರಿಕ ದೀಪಗಳು. ಗಣೇಶ ಮೂರ್ತಿ ಆಕರ್ಷಕವಾಗಿ ಕಾಣಿಸಲೆಂದು ಝಗಮಗಿಸುವ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲೂ ಮುಖ್ಯವಾಗಿ ಲೇಸರ್ ಲೈಟ್ ಅಳವಡಿಸಿರುವುದು ಈ ಬಾರಿಯ ಆಕರ್ಷಣೆಯಾಗಿತ್ತು. ಲೈಟ್ ಬೆಳಕಿನಲ್ಲಿ ಯುವಕರು ಖುಷಿ ಖುಷಿಯಾಗಿ ಕುಳಿದು ಕುಪ್ಪಳಿಸಿದರು.
ಬಿಗಿ ಬಂದೋಬಸ್ತ್: ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುನ್ನೆಚ್ಚರಿಕೆಯ ಕ್ರಮವಾಗಿ ನಗರದ 120 ಕಡೆಗಳಲ್ಲಿ ವಿಶೇಷವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದರೊಟ್ಟಿಗೆ ಬಿಎಸ್ಎಫ್ ಕಂಪನಿ, 10 ಕೆಎಸ್ಆರ್ಪಿ ಪ್ಲಟೂನ್, 1500 ಪೊಲೀಸ್ ಸಿಬ್ಬಂದಿ ಬಂದೋಬಸ್ತ್ಗೆ ನಿಯೋಜನೆಗೊಳಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಡಿಎಆರ್ ಪೊಲೀಸ್ ಪಡೆ, ಸ್ಟ್ರೈಕಿಂಗ್ ಫೋರ್ಸ್ ಮತ್ತು ಬಿಎಸ್ಎಫ್ ಯೋಧರನ್ನು ಬಂದೋಬಸ್ತ್ಗೆ ನೇಮಿಸಲಾಗಿತ್ತು. ಪೊಲೀಸ್ ಆಯುಕ್ತರ ಹೈಅಲರ್ಟ್: ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ಕ್ರಮವಾಗಿ ಚೆನ್ನಮ್ಮ ಸರ್ಕಲ್ನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಟೆಂಟ್ ಹಾಕಲಾಗಿತ್ತು. ಈ ಟೆಂಟ್ನಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಕುರಿತು ಅಲ್ಲಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸ್ವತ ಕಮೀಷನರ್ ಬಿ.ಎ. ಪದ್ಮನಯನ ಅವರೇ ಕುಳಿತು ವೀಕ್ಷಿಸುವ ಮೂಲಕ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಯಾವ ಮಂಡಳಿಯ ಗಣೇಶ ಮೂರ್ತಿ, ಯಾವ ಏರಿಯಾದಲ್ಲಿ ಆಗಮಿಸುತ್ತಿದೆ? ಎಂಬುದನ್ನು ಕೂಡಾ ಕಮೀಷನರ್ ಅವರೇ ಮುತುವರ್ಜಿ ವಹಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದರು.
ಪದಾಧಿಕಾರಿಗಳ ಮುತುವರ್ಜಿ: ಸಾರ್ವಜನಿಕ ಗಣೇಶ ಉತ್ಸವ ಮಂಡಳ ಪದಾಧಿಕಾರಿಗಳು ಹಾಗೂ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಬಂದ ಗಣೇಶ ಮೂರ್ತಿಗಳನ್ನು ಸ್ವಾಗತಿಸಿದರು. ಗಣೇಶೋತ್ಸವ ವಿಸರ್ಜನೆ ಸಂದರ್ಭ ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಯಾವುದೇ ಅಡೆತಡೆ, ಗಲಭೆ, ಗೊಂದಲವಾಗದಂತೆ ಸ್ಥಳೀಯ ಸಂಘ-ಸಂಸ್ಥೆಗಳು, ಗಣೇಶ ಮಂಡಳಗಳು ಚೆನ್ನಮ್ಮ ವೃತ್ತದಲ್ಲಿ ಟೆಂಟ್ಗಳನ್ನು ಹಾಕಿಕೊಂಡು ಬೇಗಬೇಗ ತೆರಳಿದ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಿಗೆ ಮಾಲೆ ಹಾಕುವ ಮತ್ತು ಸ್ವಾಗತಿಸಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು.
ಬಸ್ ಮಾರ್ಗ ಬದಲು: ನಗರದ ಬಹುತೇಕ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹಳೆ ಬಸ್ ನಿಲ್ದಾಣ ಮಾರ್ಗದ ಮೂಲಕವಾಗಿ ಸಾಗುತ್ತಿದ್ದ ಪರಿಣಾಮ ಬುಧವಾರ ಸಂಜೆಯ ಬಳಿಕ ಬಸ್ ಮಾರ್ಗ ಬದಲಾಯಿಸಲಾಗಿತ್ತು. ನಗರದ ಹೊರ ವಲಯದಿಂದಲೇ ಬಸ್ಗಳ ಹೊಸ ಬಸ್ ನಿಲ್ದಾಣಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಇತರೆ ವಾಹನಗಳ ಮಾರ್ಗವನ್ನೂ ಬದಲಾಯಿಸಲಾಗಿತ್ತು. ಹುಬ್ಬಳ್ಳಿಯ 150ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ. ವೀರಗಾಸೆ, ಯಕ್ಷಗಾನ ಕಲಾವಿದರು, ವಿವಿಧ ವೇಷಧಾರಿಗಳು, ಸ್ತ್ರೀ ವೇಷಧಾರಿಗಳು, ವಿವಿಧ ವಾದ್ಯ ಮೇಳಗಳು, ಜಾನಪದ ಕಲಾ ತಂಡಗಳು, ಆರ್ಕೆಸ್ಟ್ರಾ ಕಲಾವಿದರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಜನಮನ ರಂಜಿಸಿದರು. ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಮಂಡಳಿಯ ಸದಸ್ಯರು ಬಣ್ಣ ಎರಚಿ ಸಂಭ್ರಮಿಸಿದರೆ, ಇಡೀ ಹುಬ್ಬಳ್ಳಿ ನಗರ ಗುಲಾಲ್ನಲ್ಲಿ ಮಿಂದೆದ್ದಂತೆ ಕಾಣುತ್ತಿತ್ತು. ಸಾರ್ವಜನಿಕರು, ಪಟಾಕಿ, ಬಾಣ ಬಿರುಸು ಸುಟ್ಟು ಸಂಭ್ರಮಿಸಿದರು. ಇತ್ತ ವಿವಿಧ ಹಳ್ಳಿಗಳಿಂದ ಬಂದಿದ್ದ ಜನರ ಜಯಘೋಷ ಮುಗಿಲು ಮುಟ್ಟಿತ್ತು.
ದಾಹ ದಣಿಸಿದ ಪಾನಕ, ನೀರು: ಕಿವಿಗಡಚಿಕ್ಕುವ ಧ್ವನಿವರ್ಧಕಗಳಿಗೆ ಮೈಮರೆತು ಕುಣಿಯುತ್ತಿದ್ದ ಗಣೇಶ ಭಕ್ತರಿಗೆಂದೆ ಅನೇಕ ಭಕ್ತರು ಅಲ್ಲಲ್ಲಿ ಪಾನಕ, ನೀರಿನ ವ್ಯವಸ್ಥೆ ಮಾಡಿದ್ದರು. ಕುಣಿಕುಣಿದು ದಣಿಯುತ್ತಿದ್ದ ಭಕ್ತರು ಪಾನಕ ಸೇವಿಸಿ ದಾಹ ನೀಗಿಸಿಕೊಂಡರು.
ಮನಸೆಳೆದ ಹೈಫೈ ಸಾಂಗ್ಗಳು: ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು... ಖಾಲಿ ಕ್ವಾಟ್ರೂ ಬಾಟ್ಲಿಯಂಗೆ ಲೈಫು, ಚಿಕನೀ ಚಮೇಲಿ, ಯಕ್ಕಾ ನಿನ್ ಮಗ್ಳು ನಂಗ್ ಚಿಕ್ಕೋಳಾಗಲ್ವಾ, ದೇವಶ್ರೀ ಗಣೇಶ... ದೇವಶ್ರೀ ಗಣೇಶ, ಚೆನ್ನೈ ಎಕ್ಸ್ಪ್ರೆಸ್ನ ಒನ್ ಟು ತ್ರಿ ಫೋರ್, ಜೈ ಗಣೇಶ ಜೈ ಗಣೇಶ ಮತ್ತಿತರ ಹಾಡುಗಳಿಗೆ ಜನರು ಹುಚ್ಚೆದ್ದು ಕುಣಿದರು. ನಂತರ ಗ್ಲಾಸ್ ಹೌಸ್ ಪಕ್ಕದಲ್ಲಿರುವ ಬಾವಿಯಲ್ಲಿ ನಗರದ ಎಲ್ಲ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಮೂಲಕ ಭಕ್ತರು ಕೃತಾರ್ಥರಾದರು. ಗುರುವಾರ ಬೆಳಗಿನ ಜಾವದವರೆಗೂ ಮೆರವಣಿಗೆ ಮುಂದುವರೆಯಿತು.
ಪ್ರಕಾಶ ಎಸ್. ಶೇಟ್/ ಗಣೇಶ್ ಕಮ್ಲಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

