ವಿಳಾಸ ಕೇಳಿ ಮಾಂಗಲ್ಯ ದೋಚಿದ ಕಳ್ಳರು
ಹುಬ್ಬಳ್ಳಿ: ಮನೆ ಎದುರು ಕಸಗುಡಿಸುತ್ತಿದ್ದ ವೃದ್ಧೆಯೊಬ್ಬರ ಬಳಿ ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಕೊರಳಲ್ಲಿದ್ದ ರು. 40 ಸಾವಿರ ಮೌಲ್ಯದ ಮಂಗಳಸೂತ್ರವನ್ನು ಅಪರಿಚಿತ ಯುವಕರಿಬ್ಬರು ದೋಚಿಕೊಂಡು ಪರಾರಿಯಾಗಿದ್ದಾರೆ.
ಇಲ್ಲಿನ ಕಂಚಗಾರ ಓಣಿಯ ಗುರುಸಿದ್ಧಮ್ಮ ಹರಳನ್ನವರ (70) ಅವರು ಮನೆ ಎದುರು ಕಸಗುಡಿಸುತ್ತಿದ್ದ ವೇಳೆ ವಿಳಾಸ ಕೆಳುವ ನೆಪ ಮಾಡಿಕೊಂಡು ಹತ್ತಿರ ಹೋದ ಅಪರಿಚಿತ ಯುವಕ, ವೃದ್ಧೆಯ ಕೊರಳಿಗೆ ಕೈಹಾಕಿ ಒಂದೂವರೆ ತೊಲೆಯ ಮಂಗಳಸೂತ್ರ ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌಸ್ ಮೋದಿನಸಾಬ ಸರ್ಕಾವಾಸ ನಿಧನ
ಕುಂದಗೋಳ: ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಪೊಲೀಸ್ ಇಲಾಖೆಯಲ್ಲಿ ಹವಾಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಾಲೂಕಿನ ಗುಡಗೇರಿ ಗ್ರಾಮದ ಗೌಸ್ ಮೋದಿನಸಾಬ ಅಬ್ದುಲಸಾಬ ಸರ್ಕಾವಾಸ (56) ಶನಿವಾರ ಅನಾರೋಗ್ಯದಿಂದ ನಿಧನರಾದರು.
ಗ್ರಾಮದ ಸರಸ್ವತಿ ಯುವಕ ಸಂಘದ ಸದಸ್ಯರಾದ ಗೌಸ್ ಮೋದಿನಸಾಬ ಓರ್ವ ಶ್ರೇಷ್ಠ ಓಟಗಾರನಾಗಿದ್ದು, ಕರ್ನಾಟಕ ವಿವಿಯಿಂದ ಸತತ 3 ಬಾರಿ ರಾಜ್ಯಮಟ್ಟದ ಹಳ್ಳಿಗಾಡು ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡು ದ್ವೀತಿಯ ಸ್ಥಾನ ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ 3 ಸಾವಿರ ಮೀಟರ್ ಸ್ಕೀಪಲ್ ಚೇಸ್ನಲ್ಲಿ ದಾಖಲೆ ನಿರ್ಮಿಸಿದ್ದಕ್ಕೆ ಅಂದಿನ ಸರ್ಕಾರ ಸನ್ಮಾನಿಸಿತ್ತು. ಈಗ ಇವರು ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ.
ಶನಿವಾರ ಸಾಯಂಕಾಲ ಮೃತರ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಡಿಎಸ್ಪಿ ವಿ.ವಿ. ಕುಂಬಾರ ನೇತೃತ್ವ ವಹಿಸಿದ್ದರು. ನಿಧನಕ್ಕೆ ಗ್ರಾಮದ ಹಿರಿಯ ಕ್ರೀಡಾಪಟು ವೈ.ಆರ್. ಗೇಟಿ, ಎನ್.ಎಸ್. ಪಾಟೀಲ, ಶಾಸಕ ಸಿ.ಎಸ್. ಶಿವಳ್ಳಿ, ವೆಂಕನಗೌಡ ಹೀರೆಗೌಡ್ರ, ಗ್ರಾಪಂ ಅಧ್ಯಕ್ಷೆ ಗೀತಾ ಸುತಾರ, ಶಿರಹಟ್ಟಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಇಂದಿನಿಂದ ಚೆಸ್ ಟೂರ್ನಿ
ಹುಬ್ಬಳ್ಳಿ: ನೈಋತ್ಯ ರೇಲ್ವೆ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಸೆ.22ರಿಂದ 28ರ ವರೆಗೆ ಅಖಿಲ ಭಾರತೀಯ ಚೆಸ್ ಚಾಂಪಿಯನ್ಷಿಪ್ ಹಮ್ಮಿಕೊಳ್ಳಲಾಗಿದೆ. ನೈಋತ್ಯ ರೇಲ್ವೆ ವಲಯ ಕ್ರೀಡಾ ಒಕ್ಕೂಟದ ಅಧ್ಯಕ್ಷ ವಶಿಷ್ಠ ಜೋಹ್ರಿ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಇಎಂಡಿ ಲೋಕೊ ಶೆಡ್ನಲ್ಲಿ ಸೆ. 22ರಂದು ಬೆಳಗ್ಗೆ 9ಕ್ಕೆ ಚೆಸ್ ಚಾಂಪಿಯನ್ಷಿಪ್ ಆರಂಭವಾಗಲಿದೆ.
ಚೇತರಿಸಿದ ಈರುಳ್ಳಿ ದರ
ಹುಬ್ಬಳ್ಳಿ: ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶುಕ್ರವಾರ ದಿಢೀರ್ ಕುಸಿತ ಕಂಡಿದ್ದ ಈರುಳ್ಳಿ ಬೆಲೆ ಶನಿವಾರ ಮತ್ತೆ ಚೇತರಿಸಿಕೊಂಡಿದ್ದು 2 ಸಾವಿರ ಆಸುಪಾಸಿನಲ್ಲಿ ವ್ಯಾಪಾರಿಗಳು ಈರುಳ್ಳಿ ಖರೀದಿಸಿದ್ದಾರೆ. ಕ್ವಿಂಟಲ್ಗೆ ರು. 2250ನಂತೆ ಸ್ಥಳೀಕ ತಳಿ ಈರುಳ್ಳಿ ಅತಿ ಹೆಚ್ಚು ಮಾರಾಟವಾಗಿದೆ. ಸ್ಥಳೀಕ ಈರುಳ್ಳಿಯಲ್ಲಿ ಗುಣಮಟ್ಟದ ಆಧಾರದ ಮೇಲೆ ಕ್ವಿಂಟಲ್ಗೆ ರು. 500ನಿಂದ ರು. 3800ರ ವರೆಗೆ ಮಾರಾಟವಾಗಿದೆ. ತೆಲಗಿ ತಳಿಯ ಈರುಳ್ಳಿಯ ಮಾದರಿ ಬೆಲೆ ಕ್ವಿಂಟಲ್ಗೆ ರು. 2050 ಆಗಿದ್ದು, 500ದಿಂದ ರು. 3750ರ ವರೆಗೆ ಮಾರಾಟವಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಅತಿ ಹೆಚ್ಚು ಬೆಲೆಗೆ ವ್ಯಾಪಾರಿಗಳು ಈರುಳ್ಳಿ ಖರೀದಿಸಿದ್ದರಿಂದ ಸಹಜವಾಗಿ ರೈತರಲ್ಲಿ ಮೊಗದಲ್ಲಿ ಸಂತಸ ಮೂಡಿದೆ. ಶುಕ್ರವಾರ ಮಧ್ಯಾಹ್ನ ವಿಪರೀತ ಪ್ರಮಾಣದಲ್ಲಿ ಈರುಳ್ಳಿ ಬೆಲೆಯಲ್ಲಿ ಕುಸಿತವಾಗಿರುವುದನ್ನು ಖಂಡಿಸಿ ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಯ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರು.
ಮನೆಗಳ್ಳತನ: ದೂರು
ಹುಬ್ಬಳ್ಳಿ: ಬೀಗ ಹಾಕಿದ್ದ ಮನೆಯ ಹಿಂದಿನ ಬಾಗಿಲು ಚಿಲಕ ತೆಗೆದ ಕಳ್ಳರು ಮನೆಯೊಳಗಿದ್ದ ರು. 1.42 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ನವನಗರ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಾನಂದ ನಗರದ ಶೌಕತ್ ಹರಳುನವರ ಅವರು ಮನೆಯ ಹಿಂದಿನ ಬಾಗಿಲು ತೆರೆದು ಅಲ್ಮೇರಾದಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಶೌಕತ್ ಮತ್ತು ಅವರ ಕುಟುಂಬ ಬೆಳಗಾವಿಗೆ ಹೋಗಿತ್ತು, ಬೆಳಗಾವಿಯಿಂದ ಮರಳಿದ ನಂತರ ಮನೆಯಲ್ಲಿ ನಡೆದಿರುವ ಕಳ್ಳತನದ ಬಗ್ಗೆ ತಿಳಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

