ಧಾರವಾಡ

ಜಿಂಕ್ ಕಡ್ಡಾಯ: ಸಂಕಷ್ಟದಲ್ಲಿ ರೈತರು

Published On :

ಕನ್ನಡಪ್ರಭ ವಾರ್ತೆ, ನರಗುಂದ, ಸೆ. 22
ನರಗುಂದ ತಾಲೂಕಾದ್ಯಂತ 20 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ರೈತರು ಬೆಳೆದ ಬೆಳೆಗಳಿಗೆ ಅತಿಯಾದ ತೇವಾಂಶದಿಂದ ಸಾಕಷ್ಟು ಸಮಸ್ಯೆಯಾಗಿದ್ದು, ಇದರಿಂದ ಬೆಳೆ ಕಾಪಾಡಿಕೊಳ್ಳಬೇಕಾದಲ್ಲಿ ರೈತರು ಅನಿವಾರ್ಯವಾಗಿ ಯೂರಿಯಾ ಗೊಬ್ಬರ ಮೊರೆ ಹೋಗಬೇಕಾಗಿದೆ. ಆದರೆ, ನರಗುಂದ ಪಟ್ಟಣ ಮತ್ತು ವಿವಿಧ ಗ್ರಾಮಗಳಲ್ಲಿನ ಗೊಬ್ಬರ ಅಂಗಡಿ ವ್ಯಾಪಾರಸ್ಥರು ಯೂರಿಯಾ ಗೊಬ್ಬರ ಕೇಳಿದರೆ ಅದರೊಂದಿಗೆ ಜಿಂಕ್ ಗೊಬ್ಬರವನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ಪಟ್ಟು ಹಿಡಿಯುತ್ತಿದ್ದು, ಇದು ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜಿಂಕ್ ಕಡ್ಡಾಯ: ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿರುವುದು ಹಾಗೂ ಕಾಲುವೆಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ರೈತರು ಗೋವಿನಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ ವಿವಿಧ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ, ಸತತ ಸುರಿಯುತ್ತಿರುವ ಮಳೆ ರೈತರಲ್ಲಿ ಆತಂಕ ಸೃಷ್ಟಿಸಿದ್ದು, ಅತಿಯಾದ ತೇವಾಂಶದಿಂದ ಬೆಳೆಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿವೆ. ಇವುಗಳನ್ನು ರಕ್ಷಣೆ ಮಾಡಿಕೊಳ್ಳಬೇಕಾದಲ್ಲಿ ರೈತರೀಗ ತಕ್ಷಣದಲ್ಲಿಯೇ ಬೆಳೆಗಳಿಗೆ ಯೂರಿಯಾ ಗೊಬ್ಬರ ಹಾಕಬೇಕಾದ ಅನಿವಾರ್ಯತೆ ಇದೆ. ಇದನ್ನರಿತ ರೈತರ ಗೊಬ್ಬರ ಖರೀದಿಗೆ ಹೋದರೆ 1 ಚೀಲ ಯೂರಿಯಾ ಖರೀದಿ ಮಾಡಿದರೆ 1 ಕೆ.ಜಿ ಜಿಂಕ್ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಿದ್ದಾರೆ. ಇದು ಸರ್ಕಾರದ ಆದೇಶವಾ ಅಥವಾ ಖಾಸಗಿ ಅಂಗಡಿಯವರೇ ಮಾಡಿಕೊಂಡಿರುವ ಒಪ್ಪಂದವೇ ಈ ಕುರಿತು ಕೃಷಿ ಇಲಾಖೆ ತನಿಖೆ ನಡೆಸಬೇಕಿದೆ.
ರೈತರಿಗೆ ಹೊರೆ: ಇದೇ ಜಿಂಕ್ ಗೊಬ್ಬರ ಕೃಷಿ ಇಲಾಖೆಯಲ್ಲಿ ತೆಗೆದುಕೊಂಡರೆ 5 ಕೆ.ಜಿ ಪ್ಯಾಕೇಟ್‌ಗೆ ರು. 110 ಸಿಗುತ್ತದೆ. ಅದೇ ಖಾಸಗಿ ಅಂಗಡಿಯವರು ಪ್ರತಿ 1 ಕೆ.ಜಿಗೆ ರು. 100ದಂತೆ ರೈತರನ್ನು ಕಿತ್ತು ತಿನ್ನುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ತೀವ್ರ ಬರಗಾಲಕ್ಕೆ ಸಿಲುಕಿದ್ದ ರೈತನಿಗೆ, ಅವಶ್ಯಕತೆ ಇಲ್ಲದಿದ್ದರೂ ಒತ್ತಾಯ ಪೂರ್ವಕವಾಗಿ ಗೊಬ್ಬರ ನೀಡುತ್ತಿದ್ದು, ಇದು ರೈತರಿಗೆ ಮತ್ತಷ್ಟು ಆರ್ಥಿಕ ಹೊರೆಯನ್ನುಂಟು ಮಾಡುತ್ತಿದೆ. ಯುರಿಯಾ ಗೊಬ್ಬರ ಬೆಳೆಗಳಿಗೆ ಉಪಯೋಗ ಇದೆ. ಆದರೆ, ಜಿಂಕ್ ಸದ್ಯ ಯಾವುದಕ್ಕೂ ಉಪಯೋಗವಿಲ್ಲ. ಆದರೆ, ಅಂಗಡಿಯರಿಗೆ ಇದನ್ನು ಬೇಡವೆಂದರೂ, ಜಿಂಕ್ ಖರೀದಿ ಮಾಡಿದರೆ ಮಾತ್ರ ಯೂರಿಯಾ ಗೊಬ್ಬರ ನೀಡುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದು, ರೈತರ ಈ ಅನಾವಶ್ಯಕ ಹೊರೆ ತಪ್ಪಿಸುವವರ್ಯಾರು ಎನ್ನುವುದೇ ಪ್ರಶ್ನೆಯಾಗಿದೆ.
ನಾನು ಈಗಾಗಲೇ ತಾಲೂಕಿನ ಎಲ್ಲ ಖಾಸಗಿ ಗೊಬ್ಬರ ವ್ಯಾಪಾರಸ್ಥರು ಸಭೆ ಮಾಡಿ ಎಲ್ಲರಿಗೂ ಜಿಂಕ್ ಕಡ್ಡಾಯ ಮಾಡಬಾರದೆಂದು ಸೂಚಿಸಿದ್ದೇನೆ. ಕೆಲವು ರೈತರು ಜಿಂಕ್ ಬೇಕೆಂದು ಕೇಳಿದಾಗ ಮಾತ್ರ ನೀಡಲು ಸೂಚಿಸಿದ್ದೇನೆ. ಆದರೆ, ಎಲ್ಲರೂ ಕಡ್ಡಾಯಗೊಳಿಸಿರುವ ಕುರಿತು, ತಕ್ಷಣ ಪರಿಶೀಲನೆ ನಡೆಸಿ, ತಪ್ಪುಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ತೆಗೆದುಕೊಂಡು ರೈತರಿಗೆ ನ್ಯಾಯ ಒದಗಿಸಲಾಗುವುದು.
ಎಸ್.ಎಚ್. ಪಾಟೀಲ,
ತಾಲೂಕು ಕೃಷಿ ಅಧಿಕಾರಿ ನರಗುಂದ
ರೈತ ತನಗೆ ಅವಶ್ಯವಿರುವ ಗೊಬ್ಬರ ಖರೀದಿಸಲು ಸರ್ಕಾರ ಅವಕಾಶ ನೀಡಬೇಕು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ಯೂರಿಯಾ ಅವಶ್ಯಕತೆ ಇದೆ. ಹಾಗಾಗಿ ಜಿಂಕ್‌ನ್ನು ಕಡ್ಡಾಯವಾಗಿ ಖರೀದಿಸಲು ಖಾಸಗಿ ವ್ಯಾಪಾರಸ್ಥರು ಸೂಚಿಸಿದರು. ಯೂರಿಯಾದೊಂದಿಗೆ ಖರೀದಿಸುತ್ತಾರೆ ಎನ್ನುವ ತಂತ್ರ ಅನುಸರಿಸುತ್ತಿದ್ದು, ಇದನ್ನು ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು.
ಬಸವರಾಜ ಹಡಪದ, ಮಲ್ಲಪ್ಪ ಮೇಟಿ,
ತಾಲೂಕಿನ ವಿವಿಧ ಗ್ರಾಮಗಳ ರೈತರು

 ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.