ವರ್ಷಕ್ಕೆ 1.5 ಕೋಟಿ ಉದ್ಯೋಗ ಸೃಷ್ಟಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 23
ಮುಂದಿನ 20 ವರ್ಷಗಳಲ್ಲಿ ಸುಮಾರು 30 ಕೋಟಿಗಿಂತಲೂ ಹೆಚ್ಚು ಜನರಿಗೆ ಉದ್ಯೋಗ ನೀಡಬೇಕಾಗುತ್ತದೆ. ಪ್ರತಿ ವರ್ಷ 1.5 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿದೆ ಎಂದು ಮುಂಬೈ ಶೇರು ವಿನಿಮಯ ಕೇಂದ್ರದ ಮುಖ್ಯ ಯೋಜನಾಧಿಕಾರಿ ಶಂಕರ ಜಾಧವ ಹೇಳಿದರು.
ಕೆಎಲ್‌ಇ ನಿರ್ವಹಣೆ ಮತ್ತು ಅಧ್ಯಯನ ಸಂಸ್ಥೆ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಆಯೋಜಿಸಿದ್ದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಣ್ಣ ಮತ್ತು ಮದ್ಯಮ ಕೈಗಾರಿಕಾ ವಲಯ ಮಾತ್ರ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ಸಾಧ್ಯ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ದೇಶದ ಅರ್ಥ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ದೇಶದ ಆಂತರಿಕ ಉತ್ಪನ್ನದ ಬೆಳವಣಿಗೆಯಲ್ಲಿ ಶೇ. 10ರಷ್ಟು ಕೊಡುಗೆ ನೀಡುತ್ತಿವೆ. ಸುಮಾರು 10 ದಶಲಕ್ಷ ಉದ್ಯೋಗಿಗಳು ಲಘು ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿನ ಒಟ್ಟು ಉದ್ಯಮದಲ್ಲಿ ಶೇ. 75ರಷ್ಟು ಉದ್ಯಮಗಳು ಈ ವಲಯಕ್ಕೆ ಸೇರಿದ್ದು, ಈ ಕ್ಷೇತ್ರಕ್ಕೆ ಸೂಕ್ತ ಪ್ರೋತ್ಸಾಹ ಮತ್ತು ಬಂಡವಾಳ ಹೂಡಿಕೆಯಾದಲ್ಲಿ ದೇಶದ ಚಿತ್ರಣವೇ ಬದಲಾಗುತ್ತದೆ ಎಂದರು.
ಬಂಡವಾಳ ಹೂಡಿಕೆಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಬಡ್ಡಿ ಪಾವತಿ ಬಸವಳಿಯುವ ಬದಲು ಶೇರು ಪೇಟೆ ಪ್ರವೇಶಿಸಿ ಸಾರ್ವಜನಿಕರಿಂದ ಬಂಡವಾಳ ಸ್ವೀಕರಿಸುವುದು ಸೂಕ್ತ. ಷೇರು ವಿನಿಮಯ ಕೇಂದ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಂಡವಾಳ ಸಂಗ್ರಹಿಸಿ ದೇಶದ ಆರ್ಥಿಕಾಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಸಣ್ಣ, ಮಧ್ಯಮ ಕೈಗಾರಿಕೋದ್ಯಮಿಗಳು ಶೇರು ಮಾರುಕಟ್ಟೆ ಪ್ರವೇಶಿಸುವುದಕ್ಕೆ ಹಿಂಜರಿಯದೆ ಶೇರು ವಿನಿಮಯ ಕೇಂದ್ರಗಳ ಮುಖಾಂತರ ನೇರವಾಗಿ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿ ಬರುವ ಪಾರದರ್ಶಕವಾಗಿ ಲಾಭಾಂಶ ಹಂಚಿಕೆ ಮಾಡುವ ಮೂಲಕ ಉದ್ಯಮವನ್ನು ವಿಸ್ತರಿಸಬಹುದು ಎಂದರು.
ಸಂವಾದ ಗೋಷ್ಠಿಯಲ್ಲಿ ಹುಬ್ಬಳ್ಳಿಯ ಎಸ್‌ಆರ್‌ವಿ ಅಟೋಮೇಷನ್, ಕ್ವಾಲಿಟಿ ಪೇಂಟ್ಸ್, ಹರಾ ಗ್ರಾನೈಟ್ಸ್, ವಿ-ಟೆಕ್ ವ್ಯಾಲ್ಯೂಸ್, ಅಡ್ವಾನ್ಸ್ ಡೈಕಾಸ್ಟ್‌ನ ಉದ್ಯಮಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಐಎಂಎಸ್‌ಆರ್ ನಿರ್ದೇಶಕ ಡಾ.ಪಿ.ಬಿ. ರೂಢಗಿ ಪ್ರಾಸ್ತಾವಿಕ ಮಾತನಾಡಿದರು. ರಾಜೀವ ಕಾಳೇಬರ ವಂದಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಲತೇಶ ಜೀವಣ್ಣವರ, ಕೆಸಿಸಿಐ ಅಧ್ಯಕ್ಷ ಎನ್.ಪಿ. ಜವಳಿ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

