ಇಂದು ಶ್ರೀರಂಗರ 'ಕೇಳು ಜನಮೇಜಯ' ನಾಟಕ ಪ್ರದರ್ಶನ
ಧಾರವಾಡ: ಸ್ಥಳೀಯ ರಂಗಾಯಣದ ಆಶ್ರಯದಲ್ಲಿ ಸುಲೋಚನಾ ಕೋಟೂರ ಸ್ಮಾರಕ ಸಮಿತಿಯು ಶ್ರೀರಂಗರ 110ನೇ ನೆನಪು ಕಾರ್ಯಕ್ರಮ ಹಾಗೂ ಶ್ರೀರಂಗರ 'ಕೇಳು ಜನಮೇಜಯ' ನಾಟಕ ಪ್ರದರ್ಶನವನ್ನು ಸೆ. 26ರ ಸಂಜೆ 6ಕ್ಕೆ ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ ಸಮಾರಂಭ ಉದ್ಘಾಟಿಸುವರು. ರಂಗಕರ್ಮಿ ಪ್ರೊ ಪ್ರಭಾಕರ ಸಾತಖೇಡ್ ಉಪನ್ಯಾಸ ನೀಡಲಿದ್ದಾರೆ. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುತ್ತಾರೆ. ನಂತರ ಸಹೃದಯ ಗೆಳೆಯರ ಬಳಗವು ರಂಗ ನಿರ್ದೇಶಕ ರವಿ ಕುಲಕರ್ಣಿ ನಿರ್ದೇಶನದಲ್ಲಿ ನಾಟಕ ಪ್ರದರ್ಶನ ನೀಡಲಿದೆ. ಕತ್ತಲೆ ಬೆಳಕು (1959) ನಾಟಕದ ನಂತರ ಶ್ರೀರಂಗರು ಬರೆದ ಕೇಳು ಜನಮೇಜಯ (1960) ಅನೇಕ ದೃಷ್ಟಿಯಿಂದ ನವ್ಯ ಪ್ರಯೋಗ. ನಾಟಕದಲ್ಲಿ ಎರಡು ಸ್ತರಗಳ ಮೇಲೆ ಎರಡು ಕತೆಗಳು ನಡೆಯುತ್ತವೆ. ಮೊದಲನೆ ಸ್ತರದಲ್ಲಿ ನಾಟಕದ ಸೂತ್ರಧಾರ ಮತ್ತು ಒಬ್ಬ ರಾಜಕೀಯ ಮುಂದಾಳು ಕಾಣಿಸುತ್ತಾರೆ. ಇವರು ಮಹಾಭಾರತದ ವಿಧುರ ಮತ್ತು ಅಂಧ ರಾಜ ಧೃತರಾಷ್ಟ್ರನ ಸಂಕೇತವಾಗಿದ್ದಾರೆ. ಅಂದರೆ ಸೂತ್ರಧಾರ ಜ್ಞಾನದ ಸಂಕೇತ, ರಾಜಕೀಯ ಮುಖಂಡ ಶಕ್ತಿಯ ಸಂಕೇತ. ಇವರಿಬ್ಬರೂ ಸಮಾಜದಲ್ಲಿ ಕಾಣುವ ವಾಸ್ತವಕತೆ ನೋಡುತ್ತ, ಅದರ ಅರ್ಥ ಕಂಡುಕೊಳ್ಳುತ್ತಾರೆ. ಇನ್ನು, ಎರಡನೆ ಸ್ತರದ ಕತೆ ಅಂತರಂಗ, ಬಹಿರಂಗ ಮತ್ತು ರಣರಂಗ ಎಂಬ ಮೂರು ದೃಶ್ಯಗಳಲ್ಲಿದೆ. ಇಲ್ಲಿ ಕಾಣುವ ನಾಲ್ಕು ಪಾತ್ರಗಳೆಂದರೆ ಮುದುಕ, ಯುವಕ, ಯುವತಿ ಹಾಗೂ ಸಾಮಾನ್ಯಪ್ಪ. ಮೊದಲು ನಿರ್ಜೀವ ಕಾಣುವ ಈ ಪಾತ್ರಗಳು ಕ್ರಮೇಣ ಸಜೀವಗೊಳ್ಳುತ್ತ ತಮ್ಮ ಜೀವನಾನುಭವವನ್ನು ಪ್ರಕಟಿಸುತ್ತವೆ. ಇದಕ್ಕೆ ಸಾಕ್ಷಿಯಾಗುವ ಸೂತ್ರಧಾರ ಮತ್ತು ರಾಜಕೀಯ ಮುಖಂಡ ಒಟ್ಟು ಜೀವನದ ಬೆಳವಣಿಗೆಯಲ್ಲಿ ಶಕ್ತಿಯ ಪಾತ್ರ ಎಷ್ಟು ಮತ್ತು ವಿವೇಕದ ಪಾತ್ರ ಎಷ್ಟು ಎಂಬುದನ್ನು ಕಂಡುಕೊಳ್ಳುತ್ತಾರೆ. ಹೀಗೆ ನಾಟಕ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ವಿಚಾರವಂತಿಕೆಯಿಂದ ಕೂಡಿದ ಈ ನಾಟಕವನ್ನು ಎಲ್ಲರೂ ತಪ್ಪದೇ ನೋಡಬೇಕು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

