ಅನಂತಮೂರ್ತಿ ಜ್ಞಾನಪೀಠ ಹಿಂಪಡೆಯಿರಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 26
ಭಾರತದ ಅನ್ನ ತಿಂದು ಭಾರತದಿಂದಲೇ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡು ಇದೀಗ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶಬಿಟ್ಟು ಹೋಗುವ ಹೇಳಿಕೆ ನೀಡಿದ್ದ ಹಿರಿಯ ಸಾಹಿತಿ ಪ್ರೊ. ಅನಂತಮೂರ್ತಿ ಅವರಿಂದ ಸರ್ಕಾರ ಪ್ರಶಸ್ತಿ ವಾಪಸು ಪಡೆದುಕೊಳ್ಳಬೇಕು ಎಂದು ಹಿಂದೂ ಮಹಾಸಭಾ ರಾಜ್ಯ ಗೌರವಾಧ್ಯಕ್ಷರೂ ಆಗಿರುವ ರಾಣೆಬೆನ್ನೂರು ತಾಲೂಕು ಅರೆಗೇರಿಯ ಶ್ರೀ ಚನ್ನಬಸವೇಶ್ವರ ಆಶ್ರಮದ ಶ್ರೀ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಮೋದಿ-ಮುತಾಲಿಕ ಅಭಿಮಾನಿ ಬ್ರಿಗೇಡ್ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ, ಮತ್ತೊಬ್ಬ ಸಾಹಿತಿ ಗಿರೀಶ್ ಕಾರ್ನಾಡ್ ಸಹ ದೇಶದ್ರೋಹದ ಹೇಳಿಕೆ ನೀಡುತ್ತಿದ್ದು, ಅವರಿಗೂ ಸರ್ಕಾರ ನೀಡಿರುವ ಪ್ರಶಸ್ತಿಗಳನ್ನು ವಾಪಸು ಪಡೆದುಕೊಳ್ಳಬೇಕು ಎಂದರು.
ಪ್ರೊ. ಅನಂತ ಮೂರ್ತಿ ಹಾಗೂ ಗಿರೀಶ ಕಾರ್ನಾಡ್ ಅವರಿಗೆ ವಯಸ್ಸಾಗಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸುವ ಬದಲು ವಯಸ್ಸಿಗನುಗುಣವಾಗಿ ರಾಮನಾಮ ಜಪಿಸುತ್ತ ಕೂರುವುದು ಒಳಿತು ಎಂದು ಸಲಹೆ ನೀಡಿದರು.
ನರೇಂದ್ರ ಮೋದಿ ಪ್ರಧಾನಿಯಾದಲ್ಲಿ ಪ್ರೊ. ಅನಂತಮೂರ್ತಿ ತಮ್ಮ ಹೇಳಿಕೆಯಂತೆ ದೇಶಬಿಟ್ಟು ಹೋಗಬೇಕು. ಅವರು ದೇಶ ಬಿಟ್ಟರೆ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಮಾಡುವುದಾಗಿ ಹೇಳಿದರು. ರಾಜ್ಯದಲ್ಲಿ ಗೋರಕ್ಷಣೆ ಕಾಯ್ದೆ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮಠಾಧೀಶರೆಲ್ಲ ಸೇರಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು ಮಾತನಾಡಿದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ರಘುವೀರಾನಂದ ಸ್ವಾಮೀಜಿ, ಜನರಲ್ಲಿ ಧರ್ಮದ ಬಗ್ಗೆ ಸಾಕಷ್ಟು ಅರಿವು ಇಲ್ಲದಿರುವ ಕಾರಣದಿಂದಲೇ ಕೋಮು ಗಲಭೆಗಳು ಉದ್ಭವಿಸುತ್ತವೆ. ಪ್ರತಿಯೊಬ್ಬರೂ ಸಮಾನ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕು ಸುಂದರವಾಗಿ ರೂಪಗೊಳ್ಳಲು ಪ್ರಯತ್ನಿಸಬೇಕು ಎಂದರು.
ಕಿರುತೆರೆ ನಟ ಸುನೀಲ ಪುರಾಣಿಕ ಮಾತನಾಡಿ, ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತು, ರಾಜಕೀಯದ ಬಗ್ಗೆ ಅಲರ್ಜಿ ಮೂಡಿಸಿಕೊಂಡಿರುವ ಜನಸಾಮಾನ್ಯರಿಗೆ ನರೇಂದ್ರ ಮೋದಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದರೆ ಮಾತ್ರ ಭಾರತಕ್ಕೆ ನೈಜ ಸ್ವಾತಂತ್ರ್ಯ ಬಂದಂತಾಗುತ್ತದೆ ಎಂದರು.
ಸಾಮಾಜಿಕ ಕಾರ್ಯಕರ್ತ ಗಂಗಾಧರ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಸತೀಶ ಪಾಟನಕರ, ಬ್ರಿಜ್ಮೋಹನ ಡಾಗಾ, ಹರೀಶ ಬೆಂಡಿಗೇರಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

