ಅಮೃತ ದೇಸಾಯಿ ಬಿಜೆಪಿ ಸೇರ್ಪಡೆ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 12
ಸತತ ಎರಡು ಬಾರಿ ಗೆದ್ದಿರುವ ಪ್ರಹ್ಲಾದ ಜೋಶಿ ಅವರ ಹ್ಯಾಟ್ರಿಕ್ ಗೆಲುವಿಗೆ ಅಮೃತ ದೇಸಾಯಿ ಸೇರ್ಪಡೆ ಇಂಬು ನೀಡಿದೆ ಎಂದು ಮನಗುಂಡಿಯ ಬಸವಾನಂದ ಶ್ರೀಗಳು ಹೇಳಿದರು.
ಇಲ್ಲಿನ ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಆವರಣದಲ್ಲಿ ಶನಿವಾರ ಸಂಜೆ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ 35 ಸಾವಿರ ಮತ ಪಡೆದ ಅಮೃತ ದೇಸಾಯಿ ಈ ಲೋಕಸಭೆ ಚುನಾವಣೆಯಲ್ಲಿ ಜೋಶಿ ಹ್ಯಾಟ್ರಿಕ್ ಸಾಧಿಸಲು ನೆರವಾಗಲಿದ್ದಾರೆ ಎಂದರು.
ಸೇರ್ಪಡೆ: ಜೆಡಿಎಸ್ ಮುಖಂಡ ಅಮೃತ ದೇಸಾಯಿ ಸಾವಿರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಸೇರಿದರು. ರೈತ ಪರ ಹೋರಾಟ ಮಾಡಬೇಕೆಂದು ಚಿಂತಿಸಿದ್ದು, ಅದು ಜೆಡಿಎಸ್ನಿಂದ ಫಲ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಸೇರಿದ್ದೇನೆ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಇದು ಬದಲಾವಣೆ ಕಾಲ. ಯುಪಿಎ ಸರ್ಕಾರ ದೇಶವನ್ನು ಲೂಟಿ ಮಾಡಿದೆ. ರುಪಾಯಿ ಅಪಮೌಲ್ಯವಾಗಿದೆ. ಕಾನೂನು ಹದಗೆಟ್ಟಿದೆ. ದೇಶದ ಮೇಲೆ ಅನ್ಯ ದೇಶಿಕರು ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಬಲಾಡ್ಯ ರಾಷ್ಟ್ರದ ಅಗತ್ಯವಿದೆ. ಆದ್ದರಿಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತರಬೇಕಿದೆ ಎಂದರು. ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ, ಮೇಯರ್ ಶಿವು ಹಿರೇಮಠ, ಮಾಜಿ ಶಾಸಕರಾದ ಸೀಮಾ ಮಸೂತಿ, ಮೋಹನ ಲಿಂಬಿಕಾಯಿ, ಶಿವಾನಂದ ಅಂಬಡಗಟ್ಟಿ, ಶಶಿ ಕುಲಕರ್ಣಿ, ವೀರೇಶ ಅಂಚಟಗೇರಿ, ತವನಪ್ಪ ಅಷ್ಟಗಿ, ನಿಜನಗೌಡ ಪಾಟೀಲ, ಈಶ್ವರ ಶಿವಳ್ಳಿ, ಮಡಿವಾಳಪ್ಪ ಉಳವಣ್ಣವರ ಇದ್ದರು.
ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಬೇಕೇ?
ಅತ್ಯಾಚಾರಿಗಳ ಬಗ್ಗೆ ಮುಲಾಯಂ ಸಿಂಗ್ ಯಾದವ್ ತೀರಾ ಮೃದು ಧೋರಣೆ ತಾಳಿದ್ದಾರೆ. ಅತ್ಯಾಚಾರಿಗಳಿಗೆ ಶಿಕ್ಷೆ ಕೊಡುವ ಬದಲು ಕರೆದು ಸನ್ಮಾನ ಮಾಡಬೇಕೇ? ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಬೇಕೆ? ನಮ್ಮ ದೇಶವನ್ನು ಆಳುವ ಮುಖಂಡರು ಈ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಮನಗುಂಡಿಯ ಬಸವಾನಂದ ಸ್ವಾಮೀಜಿ ಪ್ರಶ್ನಿಸಿದರು.
ಮಠದಿಂದ ಹೊರಬಂದು ಮತ ಹಾಕಿ
ಸ್ವಾಮೀಜಿಗಳು ಈಚೆಗೆ ರಾಜಕೀಯದಲ್ಲಿ ನೇರವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ, ಸ್ವಾಮೀಜಿಗಳು ದೇಶಭಕ್ತರಿಗೆ ಬೆಂಬಲ ನೀಡಬೇಕೇ ಹೊರತು, ದೇಶ ಕೊಳ್ಳೆ ಹೊಡೆಯುವರಿಗಲ್ಲ. 25 ವರ್ಷಗಳಿಂದ ದೇಶ ಸ್ಥಿರ ಸರ್ಕಾರ ಕಂಡಿಲ್ಲ. ಕೇಂದ್ರದಲ್ಲಿ ಹಲವು ಪಕ್ಷಗಳು ಒಂದಾಗಿ ಅಧಿಕಾರ ನಡೆಸುತ್ತಿವೆ. ಇದರಿಂದ ಸರ್ಕಾರಕ್ಕೆ ಬಲವಿಲ್ಲ. ಈ ಬಾರಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗಳಿಸಿ, ಪೂರ್ಣ ಬಹುಮತದಿಂದ ಸರ್ಕಾರ ನಡೆಸಬೇಕು. ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲಿದೆ. ಸ್ವಾಮೀಜಿಗಳೂ ಮಠಗಳಿಂದ ಹೊರಬಂದು ಮತದಾನ ಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು.
ಸಿಎಂ ಸಿದ್ದು ರೈತ ಹಂತಕ: ಶೆಟ್ಟರ್
ಧಾರವಾಡ: ನರೇಂದ್ರ ಮೋದಿ ಅವರನ್ನು ನರಹಂತಕ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ರೈತರ ಹಂತಕ' ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಕಿಡಿ ಕಾರಿದ್ದಾರೆ. ಇಲ್ಲಿಯ ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಆವರಣದಲ್ಲಿ ಶನಿವಾರ ಸಂಜೆ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಗೋಧ್ರಾ ಹತ್ಯಾಕಾಂಡ ವಿಷಯದಲ್ಲಿ ಮೋದಿಗೆ ಸುಪ್ರೀಂ ಕೋರ್ಟ್ ಕ್ಲಿನ್ ಚಿಟ್ ನೀಡಿದೆ. ಆದರೂ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು. ಬೆಳಗಾವಿ ಅಧಿವೇಶನದ ವೇಳೆ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ನಡೆದ ಹೋರಾಟದಲ್ಲಿ ರೈತ ವಿಠ್ಠಲ ಅರಬಾವಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಸಿಎಂ ಮಾತ್ರ ಆ ರೈತ ಸಾರಾಯಿ ಕುಡಿದು ಸತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದು ದುರದೃಷ್ಟಕರ. ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

