ಧಾರವಾಡ

ಕಾಂಗ್ರೆಸ್ ಮಾತಿಗೆ ಮರುಳಾಗದಿರಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 15
ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಜಾತಿ-ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದು, ವೀರಶೈವ ಲಿಂಗಾಯತರು ಕಾಂಗ್ರೆಸ್‌ನ ಬೋಗಸ್ ಮಾತಿಗೆ ಕಿವಿಗೊಡಬಾರದು ಎಂದು  ಇತ್ತೀಚೆಗೆ ಜೆಡಿಎಸ್‌ನಿಂದ ಬಿಜೆಪಿ ಸೇರಿರುವ ಅಮೃತ ದೇಸಾಯಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ-ಧರ್ಮ ನೋಡಿ ಮತ ಹಾಕುವುದಕ್ಕಿಂತ ದೇಶದ ಉತ್ತಮ ಭವಿಷ್ಯದತ್ತ ನೋಡಬೇಕಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದಕ್ಕೆ ಇಡೀ ದೇಶವೇ ಒಗ್ಗಟ್ಟಾಗಿದ್ದು, ಧಾರವಾಡ ಕ್ಷೇತ್ರದಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರ ಹ್ಯಾಟ್ರಿಕ್ ಗೆಲುವು ಖಚಿತವಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ, ಮೋದಿ ಪರ ಬಿಜೆಪಿ ಅಲೆ ಇದೆ.  ಕೇವಲ ನನ್ನ ಜಿಪಂ ಕ್ಷೇತ್ರದಿಂದಲೇ 40 ರಿಂದ 50 ಸಾವಿರ ಮತಗಳನ್ನು ಬಿಜೆಪಿಗೆ ತರುತ್ತೇನೆ. ಇಡೀ ಕ್ಷೇತ್ರದಲ್ಲಿ ಈ ಬಾರಿ ಜೋಶಿ ಸುಮಾರು 2 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಎರಡು ಅವಧಿಯಲ್ಲಿ ಕ್ರಿಯಾಶೀಲ ಸಂಸದರಾಗಿ ಸೇವೆ ಸಲ್ಲಿಸಿರುವ ಜೋಶಿ ಜನಾನುರಾಗಿಯಾಗಿದ್ದಾರೆ. ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿರುವ ಅವರು, ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಸಂಸತ್ತಿನಲ್ಲಿ ಹಲವಾರು ಚರ್ಚೆಗಳಲ್ಲಿ ಪಾಲ್ಗೊಂಡು ಸಮರ್ಥ ಪ್ರತಿನಿಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಕೇಂದ್ರದ ಅನುದಾನವನ್ನು ತಾರತಮ್ಯ ಮಾಡದೇ ಎಲ್ಲರಿಗೂ ನೀಡಿದ್ದಾರೆ.
ಕೇವಲ ಜಾತಿ ಮುಂದಿಟ್ಟುಕೊಂಡು ಚುನಾವಣೆ ಮಾಡಲು ಸಾಧ್ಯವಿಲ್ಲ ಎನ್ನುವ ಸಂಗತಿ ಇತರರಿಗೆ  ಮನದಟ್ಟಾಗಬೇಕಿದೆ. ಎಲ್ಲರನ್ನು ಸಮಾನದೃಷ್ಟಿಯಿಂದ ಕಾಣುವ ಜೋಶಿ ಅವರು ಗೆಲ್ಲುವ ಅಗತ್ಯ ಕೂಡ ಕ್ಷೇತ್ರಕ್ಕಿದೆ ಎಂದರು.
ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ದೇಶ ಸದೃಢವಾಗಬೇಕು. ಜೊತೆಗೆ ಇನ್ನೂ ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೇನೆ. ಯಾವುದೇ ಆಕಾಂಕ್ಷೆಯಿಂದ ಬಿಜೆಪಿಗೆ ಬಂದಿಲ್ಲ ಎಂದು ದೇಸಾಯಿ ಸ್ಪಷ್ಟಪಡಿಸಿದರು.
ತಾಪಂ ಅಧ್ಯಕ್ಷ ಈರಣ್ಣ ಕರಲಿಂಗಣ್ಣವರ, ಮುಖಂಡರಾದ ದತ್ತಾ ಡೋರ್ಲೆ, ಟಿ.ಎಸ್. ಪಾಟೀಲ, ಶಂಕರ ಮುಗದ, ಹೇಮರಾಜ ಭಂಡಾರಿ, ಈರಣ್ಣ ಗಾಣಿಗೇರ, ಚಿಂತನ ಹಳ್ಯಾಳ, ಖಲಂದರ ಮುಲ್ಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.