ರಾ.ಹೆ.ಯಲ್ಲಿವೆ ಎಸ್ಒಎಸ್ ಬಾಕ್ಸ್
ಹೊನ್ನಪ್ಪ ಲಕ್ಕಮ್ಮನವರ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 24
ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ ಪಥದತ್ತ ಮುಖ ಮಾಡಿದಂತೆ, ಹೆಚ್ಚುತ್ತಿರುವ ಅವಘಡಗಳಲ್ಲಿ ತುರ್ತು ನೆರವು ನೀಡುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ ಎಸ್ಒಎಸ್ ಅಥವಾ ತುರ್ತುಕರೆ ನೆರವು ಪೆಟ್ಟಿಗೆ ಪ್ರಮುಖವಾಗಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ, ಚಾಲಕರಿಗೆ ಅಥವಾ ಪ್ರಯಾಣಿಕರಿಗೆ ತುರ್ತಾಗಿ ನೆರವು ಕೋರುವುದಕ್ಕೆ ಬೆಳಗಾವಿ-ಧಾರವಾಡ ಮತ್ತು ಚಿತ್ರದುರ್ಗದ ವರೆಗೆ ಇರುವ ಅಷ್ಟಪಥ ಹೆದ್ದಾರಿಯುದ್ದಕ್ಕೂ ಪ್ರತಿ ಎರಡು ಕಿ.ಮೀ.ಗೆ ಒಂದರಂತೆ ತುರ್ತು ಕರೆ ಪೆಟ್ಟಿಗೆ ಅಳವಡಿಸಲಾಗಿದ್ದು, ಇವುಗಳ ಮೇಲೆ ಎಸ್ಓಎಸ್ ಎಂದು ಬರೆಯಲಾಗಿದೆ.
ಧಾರವಾಡ-ಬೆಳಗಾವಿ ಮಧ್ಯದಲ್ಲಿ, ಧಾರವಾಡದ ನರೇಂದ್ರ ಕ್ರಾಸ್ದಿಂದ ಬೆಳಗಾವಿ ಹೊನಗಾದವರೆಗೂ ಸುಮಾರು 80 ಕಿ.ಮೀ. ದೂರಕ್ಕೆ 40 ಬಾಕ್ಸ್ಗಳನ್ನು ಅಳವಡಿಸಲಾಗಿದೆ.
ಏನಿದೆ ಪೆಟ್ಟಿಗೆಯೊಳಗೆ?: ಅಷ್ಟಪಥದ ಇಕ್ಕೆಲಗಳಲ್ಲಿ ಕಂಬಕ್ಕೆ ಈ ಬಾಕ್ಸ್ ಅಳವಡಿಸಲಾಗಿದ್ದು, ಪ್ರತಿಯೊಂದು ತುರ್ತು ಕರೆ ಬಾಕ್ಸ್ಗೂ ಗುರುತು ಸಂಖ್ಯೆ ನೀಡಲಾಗಿರುತ್ತದೆ. ಅಪಘಾತಕ್ಕೊಳಗಾದವರು, ಕರೆ ಮಾಡಿದರೆ ಅವರು ಕರೆ ಮಾಡಿರುವ ಬಾಕ್ಸ್ನ ಗುರುತು ಸಂಖ್ಯೆಯ ಸಂದೇಶ ಸಂಬಂಧಿಸಿದವರಿಗೆ ರವಾನೆಯಾಗಿರುತ್ತದೆ. ಇದರಿಂದ ಅಪಘಾತ ಸ್ಥಳವನ್ನು ತಕ್ಷಣ ಗುರುತಿಸಿ ನೆರವಿನ ಹಸ್ತ ಚಾಚುವುದು ಸುಲಭವಾಗುತ್ತದೆ.
ಈ ಬಾಕ್ಸ್ನಲ್ಲಿ 3 ಬಟನ್ಗಳಿರುತ್ತವೆ. ಒಂದು ಗುಂಡಿ ಅದುಮಿದರೆ ಅದು ನಿಯಂತ್ರಣ ಕೇಂದ್ರಕ್ಕೆ ತಲುಪುತ್ತದೆ. ಇನ್ನೊಂದು ಗುಂಡಿ ಆ್ಯಂಬುಲೆನ್ಸ್ಗೆ ಸಂಪರ್ಕ ಕಲ್ಪಿಸುತ್ತದೆ. 3ನೇ ಬಟನ್ ಹೆದ್ದಾರಿ ಗಸ್ತು ವಾಹನಕ್ಕೆ ರವಾನೆಯಾಗುತ್ತದೆ. ಈ ಮೂರರಲ್ಲಿ ಯಾವ ಬಟನ್ ಒತ್ತಿದರೂ ಅದು ಆ ವ್ಯಾಪ್ತಿಯ ಟೋಲ್ಗೆ ಮಾಹಿತಿ ರವಾನಿಸುತ್ತದೆ.
ಗಸ್ತು ವಾಹನದ ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ. ಸಂದೇಶ ಸಿಕ್ಕೊಡನೆ ಟೋಲ್ ನಾಕಾದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಅಪಘಾತ ಮಾತ್ರವಲ್ಲದೆ, ರಸ್ತೆ ಮಧ್ಯೆ ಉಂಟಾಗುವ ಟ್ರಾಫಿಕ್ ಜಾಮ್, ಪಂಕ್ಚರ್ ಇತ್ಯಾದಿ ಸಮಸ್ಯೆಗಳ ಬಗ್ಗೆಯೂ ಚಾಲಕರು ಕರೆ ಮಾಡಿ, ಸಹಾಯ ಯಾಚಿಸಬಹುದು. ಟೋಲ್ನವರು ಕರೆ ಮಾಡಿದವರ ಜತೆಗೆ ಮಾತನಾಡಿ, ಅಗತ್ಯ ಸೇವೆ ಒದಗಿಸುತ್ತಾರೆ.
ಜಾಗೃತಿ ಬೇಕು...
ಈ ಬಾಕ್ಸ್ನ ಬಗ್ಗೆ ವಾಹನ ಚಾಲಕರಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ, ಅಪಘಾತ ಆದೊಡನೆ ಗಾಬರಿಯಾಗಿ ತಮ್ಮ ಸಂಬಂಧಿಗಳಿಗೆ ಕರೆ ಮಾಡಲು ಮುಂದಾಗುತ್ತಾರೆ. ಹಲವರು ತಾವೇ ಆ್ಯಂಬುಲೆನ್ಸ್ಗೆ ಕರೆ ಮಾಡುತ್ತಾರೆ. ಇದರಿಂದಾಗಿ ತುರ್ತು ಸೇವೆ ಸೂಕ್ತ ಕಾಲಕ್ಕೆ ಸಿಗದೆ ಜೀವ ಕಳೆದುಕೊಳ್ಳುವ ಅಪಾಯವಿರುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರು ಈ ಎಸ್ಒಎಸ್ ಬಾಕ್ಸ್ ಬಗ್ಗೆ ಮಾಹಿತಿ ಹೊಂದಿದ್ದರೆ ಉತ್ತಮ. ಹೆದ್ದಾರಿ ಪಕ್ಕದ ಗ್ರಾಮಸ್ಥರೂ ಅಪಘಾತ ಸಂಭವಿಸಿದಾಕ್ಷಣ ತುರ್ತು ಸೇವೆ ಬಾಕ್ಸ್ ಬಳಸಬೇಕು ಎನ್ನುತ್ತಾರೆ, ಹಿರೇಬಾಗೇವಾಡಿ ಟೋಲ್ನ ಮುಖ್ಯಸ್ಥ ಡಾ ಶ್ರೀನಿವಾಸ ಶೇಳಕೆ.
ಸದ್ಬಳಕೆಯಾಗಲಿ..
ನರೇಂದ್ರ ಕ್ರಾಸ್ನಿಂದ ಹೊನಗಾ ರಸ್ತೆಯ ಮಧ್ಯೆ ಇರುವ ಟೋಲ್ನಲ್ಲಿ ಈಗ ತಿಂಗಳಿಗೆ 20ರಿಂದ 30 ವಾಹನ ಅಪಘಾತಗಳ ಸಂದರ್ಭದಲ್ಲಿ ತುರ್ತು ಸೇವೆಗೆ ಈ ಬಾಕ್ಸ್ಗಳು ನೆರವಾಗಿವೆ. ಆದರೆ, ಕಿಡಿಗೇಡಿಗಳು ಹಲವೆಡೆ ಈ ಬಾಕ್ಸ್ಗಳ ದುರ್ಬಳಕೆ ಮಾಡುತ್ತ, ಅನವಶ್ಯಕ ಕರೆ ಮಾಡಿ, ದಾರಿ ತಪ್ಪಿಸುತ್ತಿದ್ದಾರೆ. ಸಹಾಯದ ಅಗತ್ಯವಿದ್ದಾಗ ಮಾತ್ರ ಇವುಗಳನ್ನು ಬಳಸುವಂತೆ ಪಾಂಡು ನಾಯಕ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

