ಕಿಮ್ಸ್ ಆಯಾ ಅಮಾನತು
ಹುಬ್ಬಳ್ಳಿ: ಭಕ್ಷೀಸಿಗಾಗಿ ಬಾಣಂತಿಯ ಮೇಲೆ ಹಲ್ಲೆ ನಡೆಸಿದ್ದ ಕಿಮ್ಸ್ ಆಯಾ ಅಮಾನತುಗೊಂಡಿದ್ದಾಳೆ. ಗಂಗಮ್ಮ ಅಸುಂಡಿ ಎಂಬ ಆಯಾಳೇ ಅಮಾನತುಗೊಂಡಿದ್ದು, ಬಾಣಂತಿ ರೇಖಾ ವೆಂಕಟೇಶ ಮಳ್ಯಾಳೂರು ಹಾಗೂ ಆಕೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ ಈ ಕ್ರಮಕೈಗೊಂಡಿದ್ದಾರೆ. ಕಳೆದ ಮಂಗಳವಾರ ಸಂಜೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ರೇಖಾ ಮಳ್ಯಾಳೂರರನ್ನು ಭಕ್ಷೀಸಿಗಾಗಿ ಪೀಡಿಸಿದ್ದ ಆಯಾ ಗಂಗಮ್ಮ, ಬಾಣಂತಿಯ ಮೇಲೆ ಹಲ್ಲೆಯನ್ನೂ ನಡೆಸಿದ್ದಳು ಎಂದು ಆರೋಪಿಸಲಾಗಿದೆ. ಆದರೆ ಹಲ್ಲೆ ನಿರಾಕರಿಸಿರುವ ನಿರ್ದೇಶಕಿ ಡಾ. ಕಾಮತ, ಹಣಕ್ಕಾಗಿ ಪೀಡಿಸಿದ್ದಕ್ಕಾಗಿ ಅಮಾನತ್ತು ಮಾಡಿರುವುದಾಗಿ ತಿಳಿಸಿದ್ದಾರೆ. ಕಿಮ್ಸ್ನಲ್ಲಿ ಆಯಾ ಹಾಗೂ ಇತರ ಸಿಬ್ಬಂದಿ ಬಾಣಂತಿಯರಿಂದ ಭಕ್ಷೀಸು ಪಡೆಯುತ್ತಾರೆಂಬ ದೂರು ಹಳೆಯದು. ಗಂಡು ಮಗು ಜನಿಸಿದರೆ ರು. 300 ಹಾಗೂ ಹೆಣ್ಣು ಮಗು ಜನಿಸಿದರೆ ರು. 200 ಭಕ್ಷೀಸು ನೀಡುವಂತೆ ಇಲ್ಲಿನ ಕೆಲ ಸಿಬ್ಬಂದಿ ಪೀಡಿಸುತ್ತಾರೆಂಬ ದೂರು ಬಾಣಂತಿ ಹಾಗೂ ಆಕೆಯ ಸಂಬಂಧಿಕರದ್ದು. ಬಾಣಂತಿಯ ಸಂಬಂಧಿಕರು ನೀಡಿದಷ್ಟು ಭಕ್ಷೀಸು ಪಡೆದುಕೊಳ್ಳದೆ, ಇಂತಿಷ್ಟೇ ಹಣ ನೀಡುವಂತೆ ಪೀಡಿಸುತ್ತಾರೆ. ಬಾಣಂತಿ ಹಾಗೂ ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಾರೋ ಇಲ್ಲವೋ ಎಂಬ ಆತಂಕದಿಂದ ಬಹುತೇಕ ಬಾಣಂತಿಯ ಸಂಬಂಧಿಕರು ಕೇಳಿದಷ್ಟು ಹಣ ನೀಡುತ್ತಾರೆ. ಭಕ್ಷೀಸಿಗಾಗಿ ಬಾಣಂತಿಯರು ಹಾಗೂ ಆಕೆಯ ಸಂಬಂಧಿಕರನ್ನು ಒತ್ತಾಯಿಸುವ ಇಂಥ ಹಲವಾರು ಘಟನೆಗಳು ಕಿಮ್ಸ್ನಲ್ಲಿ ನಿತ್ಯ ನಡೆಯುತ್ತಿವೆ. ಇಂಥ ಘಟನೆಗಳ ನಿಯಂತ್ರಣಕ್ಕೆ ನಿರ್ದೇಶಕಿ ಡಾ. ವಸಂತಾ ಕಾಮತ ಅವರು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ.
ಕೊಪ್ಪಳ: ಮರು ಚುನಾವಣೆಗೆ ಆಗ್ರಹಿಸಿ ತಿಮ್ಮಪ್ಪ ಉಪ್ಪಾರ ಧರಣಿ
ಕೊಪ್ಪಳ: ಕೊಪ್ಪಳ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಮತಯಂತ್ರದ ಬಟನ್ ಮುಂದೆ ಮಸಿ ಹಚ್ಚಲಾಗಿತ್ತು. ಈ ಮೂಲಕ ಅವರಿಗಷ್ಟೇ ಮತಹಾಕಿ ಎನ್ನುವ ಸಂದೇಶ ಗ್ರಾಮೀಣ ಜನತೆಗೆ ಹೋಗಿದೆ. ಹೀಗಾಗಿ ಕೊಪ್ಪಳ ಲೋಕಸಭಾ ಮರು ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಸ್ವಯಂಘೋಷಿತ ತೃತಿಯ ರಂಗದ ಪ್ರಧಾನಿ ಅಭ್ಯರ್ಥಿ, ಬಿಎಜೆಪಿ ಉಮೇದುವಾರ ತಿಮ್ಮಪ್ಪ ಉಪ್ಪಾರ ಉಪವಾಸ ಧರಣಿ ಪ್ರಾರಂಭಿಸಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿರುವ ತಿಮ್ಮಪ್ಪ, ಇಲ್ಲಿನ ಚುನಾವಣೆಯಲ್ಲಿ ಸಾಕಷ್ಟು ಲೋಪ-ದೋಷಗಳಾಗಿವೆ. ಮತದಾರರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಚಿಹ್ನೆಗಳ ಗುರುತಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಚುನಾವಣಾ ಅಧಿಕಾರಿಗೂ ಮನವಿ ಸಲ್ಲಿಸಲಾಗಿದೆ. ಕೂಡಲೇ ಇಲ್ಲಿ ಮರುಮತದಾನ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿ, ಏಕಾಂಗಿ ಉಪವಾಸ ಧರಣಿಗೆ ಮುಂದಾಗಿದ್ದು, ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

