ಧಾರವಾಡ

ವಿರೂಪಾಕ್ಷನ ಪೂಜೆಗೆ ಸಲ್ಲುತ್ತಿದ್ದ ಮಲ್ಲಿಗೆ ಮಂಕು

Published On :

ಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಏ. 27
ತುಂಗಭದ್ರಾ ನದಿ ತಟದ ಹಂಪಿಯಲ್ಲಿ 1336ರಲ್ಲಿ ಉದಯವಾಗಿರುವ ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ತುಂಗಭದ್ರಾ ನದಿ ಮೂಲಕ ತೆಪ್ಪದಲ್ಲಿ ಘಮಘಮಿಸುವ ಸುವಾಸನೆಯುಕ್ತ ಮಲ್ಲಿಗೆ ಹೂಗಳನ್ನು ಹಂಪಿ ವಿರೂಪಾಕ್ಷನ ಪೂಜೆಗೆ ಕಳಿಸಿಕೊಡಲಾಗುತ್ತಿತೆಂದು ಇತಿಹಾಸ ಸಾರುವ ಮಲ್ಲಿಗೆ ಬೆಳೆಗಾರರ ಬದುಕಿಗೆ ನಿಜಕ್ಕೂ ಮಂಕು ಕವಿದಿದೆ.
ಅನಾದಿ ಕಾಲದಿಂದಲೂ ಹೂವಿನಹಡಗಲಿ ಸುತ್ತಲಿನ ಪ್ರದೇಶಗಳಲ್ಲಿ ಮಲ್ಲಿಗೆ ಹೂಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಹೂವಿನಹಡಗಲಿ ಎಂಬ ಹೆಸರು ನಾಮಾಂಕಿತ ಶಾಸನಗಳಿಂದ ತಿಳಿದು ಬರುತ್ತದೆ. ಆದ್ದರಿಂದ ಹೂವಿನಹಡಗಲಿ ಮಲ್ಲಿಗೆಗೆ ರಾಷ್ಟ್ರೀಯ ಮಾನ್ಯತೆ ಧಕ್ಕಿದೆ. ಆದರೆ, ಮಲ್ಲಿಗೆ ಬೆಳೆಗಾರರಿಗೆ ಇದರಿಂದ ಆದ್ಯತೆ ಮಾತ್ರ ಸಿಕ್ಕಿಲ್ಲ.
ಸಂಕಷ್ಟದಲ್ಲಿ ಬೆಳೆಗಾರರು: ಘಮಘಮಿಸುವ ಸುವಾಸನೆಯುಕ್ತ ಮಲ್ಲಿಗೆ ಬೆಳೆಗಾರರಿಗೆ ವಿವಿಧ ರೀತಿ ತೊಂದರೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ಇಲ್ಲ, ಮಾರುಕಟ್ಟೆ ವ್ಯವಸ್ಥೆ ಇಲ್ಲ. ಕಾರ್ಮಿಕರ ಕೊರತೆ, ವಿದ್ಯುತ್ ಸಮಸ್ಯೆ, ರಸಗೊಬ್ಬರ, ಔಷಧಿ ಬೆಲೆಗಳ ಹೆಚ್ಚಳ ಇಷ್ಟಾದರೂ ಮಲ್ಲಿಗೆ ಹೂವಿಗೆ ಬೇಡಿಕೆ ಇದೆ. ಆದರೆ, ಬೆಲೆಗಳಲ್ಲಿ ಏರುಪೇರಿನಿಂದ ಮಲ್ಲಿಗೆ ಬೆಳೆಗಾರರ ಬದುಕಿಗೆ ಮಂಕು ಕವಿದಿದೆ.
ಹೂವಿನಹಡಗಲಿಗೆ ಮಲ್ಲಿಗೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಉದ್ದೇಶಿತ ದಾವಣಗೆರೆ ಇಂಟರ್ನ್ಯಾಷನಲ್ ಪ್ಲವರ್ ಆಕ್ಷನ್ ಸೆಂಟರ್ ಮೂಲಕವಾಗಿ ಬೆಳೆಗಾರನಿಂದ ನೇರವಾಗಿ ಖರೀದಿದಾರನಿಗೆ ಮಲ್ಲಿಗೆಯೂ ಪೂರೈಕೆ ಮಾಡುವ ವ್ಯವಸ್ಥೆ ಜಾರಿಗೆ ಮಾಡುವ ಉದ್ದೇಶ ಇತ್ತು. ಇದರಿಂದ ಮಲ್ಲಿಗೆ ಬೆಳೆಗಾರರು ಮಧ್ಯವರ್ತಿಗಳ ಹಾವಳಿಯಿಂದ ಬಚಾವ್ವಾಗಿ ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಸಿಗುತ್ತದೆ. ಆದರೆ, ಸರ್ಕಾರ ಈವರೆಗೂ ಇತ್ತ ಗಮನಹರಿಸಿಲ್ಲ ಎಂಬ ದೂರು ಬೆಳೆಗಾರರದ್ದು. ಎಕರೆಯೊಂದಕ್ಕೆ ರು. 18-20 ಸಾವಿರ ವೆಚ್ಚ ಮಾಡಿದ್ದರೂ ಈ ವರ್ಷ ಉತ್ತಮ ಇಳುವರಿ ಇಲ್ಲ. ಅತಿಯಾದ ತಾಪಮಾನ ಮತ್ತು ಮಳೆ ಇಲ್ಲದೇ ಮಲ್ಲಿಗೆ ಬೆಳೆ ಕುಂಠಿತಗೊಳ್ಳುತ್ತಿದೆ. ಬಂದರಕಿ ರೋಗ ಬಂದರೆ ಮಲ್ಲಿಗೆ ಮಗ್ಗು ಬಿಡುವುದಿಲ್ಲ. ಮಜ್ಜಿಗೆ ರೋಗ ಬಂದರೆ ಮಗ್ಗು ಬಿಡುತ್ತದೆ. ಆದರೆ, ಹೆಚ್ಚಿನ ಇಳುವರಿ ಬರುವುದಿಲ್ಲ. ಔಷಧಿ ಸಿಂಪರಣೆ ಮಾಡದಿದ್ದರೆ ರೋಗದಿಂದ ಬೆಳೆ ಹಾಳು, ಔಷಧಿ, ರಸಗೊಬ್ಬರ ಬೆಲೆ ಗಗನಕ್ಕೇರಿವೆ. ಆದರೆ, ಮಲ್ಲಿಗೆ ಹೂವಿಗೆ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು.
ಮಹಾನಗರಗಳಿಗೆ ಮಲ್ಲಿಗೆ ರವಾನೆ:
ಮಲ್ಲಿಗೆ ಮಗ್ಗುಗಳನ್ನು ದೂರದ ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ, ಗದಗ, ಲಕ್ಷ್ಮೇಶ್ವರ, ಹಾವೇರಿ ಸೇರಿದಂತೆ ಇತರೆ ಮಹಾನಗರ ಪ್ರದೇಶಗಳಿಗೆ ಬೆಳೆಗಾರರು ಸೇರಿ ಖಾಸಗಿ ವಾಹನಯೊಂದು ಬಾಡಿಗೆ ಪಡೆದು ಕಳಿಸುತ್ತೇವೆ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು ಬೆಳೆಗಾರರಿಗೆ ಗೌರವ ಹೆಚ್ಚಳವಾಗಿದೆ ಹೊರತು, ಸೌಲಭ್ಯ ಮರೀಚಿಕೆಯಾಗಿವೆ ಎನ್ನುತ್ತಾರೆ ಬೆಳೆಗಾರರು.
ಮಲ್ಲಿಗೆ ಹೂವುಗಳನ್ನು ಬಿಡಿಸಲು ಕಾರ್ಮಿಕರ ಕೊರತೆ ಸಾಕಷ್ಟು ಕಾಡುತ್ತಿದೆ. 1 ಕೆಜಿ ಹೂವಿಗೆ ರು. 50 ಕೂಲಿ, ಮಧ್ಯಾಹ್ನಕ್ಕೆ ರು. 100 ಕೂಲಿ ನೀಡಬೇಕು. ಅನೇಕ ತೊಂದರೆಗಳ ನಡುವೆ ಮಲ್ಲಿಗೆ ಬೆಳೆದರೆ ಮಾರುಕಟ್ಟೆ ಬೆಲೆ ಇಲ್ಲ. ಬೆಳೆಗಾರರು ಬೆಳೆದ ಮಲ್ಲಿಗೆಯ ಲಾಭ ಮಧ್ಯವರ್ತಿಗಳ ಪಾಲಾಗುತ್ತಿರುವುದು ದುರಂತ ಎಂಬ ಮಾತು ಕೇಳಿ ಬರುತ್ತಿವೆ.
ಅವನತಿಯ ಹಾದಿಯಲ್ಲಿರುವ ಹೂವಿನಹಡಗಲಿ ಮಲ್ಲಿಗೆ ಬೆಳೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯೂ ಕೆಲವು ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಮಲ್ಲಿಗೆ ಬೆಳೆಗಾರರಿಗೆ ಗರಿಷ್ಠ ಪ್ರೋತ್ಸಾಹ ಧನ ನೀಡುವ ಮೂಲಕ ಉತ್ತೇಜನ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.