ಕೆಎಟಿ: ಬೆಂಗಳೂರಿಗೆ ಅಲೆದಾಟ 'ಕಾಯಂ'!
ಬಿ.ಕೆ. ಮಹೇಂದ್ರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 27
ಧಾರವಾಡದಲ್ಲಿ ಹೈಕೋರ್ಟ್ ಕಾಯಂ ಪೀಠ ಆರಂಭಗೊಂಡರೂ ಕಕ್ಷಿದಾರರು ಬೆಂಗಳೂರಿಗೆ ಅಲೆದಾಡುವುದು ತಪ್ಪುತ್ತಿಲ್ಲ. ಹೈಕೋರ್ಟ್ ಕಾಯಂ ಪೀಠ ಅನುಷ್ಠಾನಗೊಂಡಿದೆ. ಆದರೆ, ಕೆಎಟಿಯಲ್ಲಿರುವ (ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ) ವಾಜ್ಯಗಳ ವಿಚಾರಣೆಗಾಗಿ ಈ ಭಾಗದ ಏಳು ಜಿಲ್ಲೆಗಳ ಕಕ್ಷಿದಾರರು ಬೆಂಗಳೂರಿಗೆ ಹೋಗಲೇಬೇಕಾಗಿದೆ.
ಧಾರವಾಡದ ವಾಲ್ಮಿಯಲ್ಲೇ ಕೆಎಟಿ ಆರಂಭಿಸುವುದರಿಂದ ಕಕ್ಷಿದಾರರಿಗೆ ಸಮಯ ಹಾಗೂ ಹಣ ಉಳಿತಾಯವಾಗಲಿದೆ. ತ್ವರಿತಗತಿಯಲ್ಲಿ ನ್ಯಾಯ ಪಡೆಯಲು ಅನುಕೂಲವಾಗಲಿದೆ. ಕೆಎಟಿ ಆದಷ್ಟು ಶೀಘ್ರದಲ್ಲೇ ಧಾರವಾಡದಲ್ಲೇ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಧಾರವಾಡ ವಕೀಲರ ಸಂಘ ಹೋರಾಟಕ್ಕೆ ಚಾಲನೆ ನೀಡಿದ್ದು, ಹುಬ್ಬಳ್ಳಿ ವಕೀಲರ ಸಂಘವೂ ಇದಕ್ಕೆ ಸಾಥ್ ನೀಡಲು ಸಜ್ಜಾಗಿದೆ.
ಕೆಎಟಿಯಲ್ಲಿ ಏನೇನು..?: ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರು ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳು, ರೆವಿನ್ಯೂ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳು, ಸಹಕಾರಿ ಕ್ಷೇತ್ರದ ವ್ಯಾಜ್ಯಗಳು ಇತ್ಯಾದಿಗಳ ವಿಚಾರಣೆ ನಡೆಯುತ್ತವೆ. ಈ ಎಲ್ಲ ಕ್ಷೇತ್ರಗಳ ಎಡಿಶನಲ್ ಟ್ರಿಬ್ಯೂನಲ್ಗಳು, ಕೆಎಟಿ ಆರಂಭದಿಂದ ಸೇವೆ ನೀಡಲು ಸಿದ್ಧವಾಗಲಿವೆ. ಹೀಗಾಗಿ, ಕೆಎಟಿ ಕಾರ್ಯಾರಂಭ ಮಾಡುವುದು ಅಗತ್ಯವಾಗಿದೆ.
2.50 ಲಕ್ಷಕ್ಕೂ ಹೆಚ್ಚು: ಧಾರವಾಡ, ಗದಗ, ಹಾವೇರಿ, ಕಾರವಾರ, ಬೆಳಗಾವಿ, ಕೊಪ್ಪಳ ಹಾಗೂ ಬಳ್ಳಾರಿಯ ಭಾಗದ ಅಂದಾಜು 2.50 ಲಕ್ಷಕ್ಕೂ ಹೆಚ್ಚು ವ್ಯಾಜ್ಯಗಳು ಕೆಎಟಿಯಲ್ಲಿ ವಿಚಾರಣಾ ಹಂತದಲ್ಲಿವೆ. ಈ ಎಲ್ಲ ಜಿಲ್ಲೆಗಳ ಕಕ್ಷಿದಾರರು, ಹೈಕೋರ್ಟ್ ಕಾಯಂ ಪೀಠ ಧಾರವಾಡದಲ್ಲಿ ಆರಂಭಗೊಂಡಿದ್ದರೂ ಬೆಂಗಳೂರಿಗೆ ಎಡತಾಕುವುದು ಮಾತ್ರ ತಪ್ಪಿಲ್ಲ.
ಕೆಎಟಿ ನೀಡುವ ತೀರ್ಪು ಕಕ್ಷಿದಾರರಿಗೆ ಸಮಾಧಾನ ತಂದಿಲ್ಲ ಎಂದಾದರೆ ಅಂತಹ ಕಕ್ಷಿದಾರರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುವ ಅವಕಾಶ ಉಂಟು. ಆದರೆ, ಕೆಎಟಿಯೇ ಬೆಂಗಳೂರಿನಲ್ಲಿರುವುದರಿಂದ ಹೈಕೋರ್ಟ್ ಕಾಯಂ ಪೀಠ ಧಾರವಾಡದಲ್ಲಿದ್ದರೂ ಕಕ್ಷಿದಾರರ ಹಣ ಹಾಗೂ ಸಮಯ ಉಳಿತಾಯವಾಗುತ್ತಿಲ್ಲ ಎಂಬ ಕೊರಗು ಏಳು ಜಿಲ್ಲೆಗಳ ಕಕ್ಷಿದಾರರದ್ದು.
ಪ್ರಶಂಸೆ: ಕಡಿಮೆ ವೆಚ್ಚದಲ್ಲಿ ತ್ವರಿತಗತಿಯಲ್ಲಿ ನ್ಯಾಯದಾನ ಮಾಡಬೇಕೆಂಬುದೇ ಸಂವಿಧಾನದ ಮೂಲ ಆಶಯ. ಇದನ್ನು ಸಾಕಾರಗೊಳಿಸುವಂತೆ ಧಾರವಾಡದಲ್ಲಿ ಹೈಕೋರ್ಟ್ ಕಾಯಂಪೀಠ ಆರಂಭಕ್ಕೆ ಕ್ರಮ ಕೈಗೊಂಡಿದ್ದು ಈ ಭಾಗದ ಜನರ ಪ್ರಶಂಸೆಗೆ ಕಾರಣವಾಗಿದೆ.
ಬಡ ಕಕ್ಷಿದಾರರೇ..:ಕೆಎಟಿಯಲ್ಲಿ ಸರ್ಕಾರಿ ನೌಕರರ ಪ್ರಕರಣಗಳಿಗಿಂತಲೂ ಹೆಚ್ಚಾಗಿ ರೈತಾಪಿ ವರ್ಗದವರ, ಪಿತ್ರಾರ್ಜಿತ ಆಸ್ತಿ ವಿವಾದ ಹಾಗೂ ಸಹಕಾರಿ ಕ್ಷೇತ್ರದ ವ್ಯಾಜ್ಯಗಳೇ ತುಂಬಿ ತುಳುಕುತ್ತಿವೆ. ಪ್ರತಿ ನಿತ್ಯ ಕೆಎಟಿಯಲ್ಲಿ ಈ ಏಳು ಜಿಲ್ಲೆಗಳಿಂದ ಸುಮಾರು 500-800 ಪ್ರಕರಣಗಳು ದಾಖಲಾಗುತ್ತಲಿವೆ. ಈ ನ್ಯಾಯಾಧಿಕರಣದಿಂದ ತೀರ್ಪು ಹೊರಬರುವ ವರೆಗೂ ಬೆಂಗಳೂರಿಗೆ ಸುತ್ತಾಡಿ ಕಕ್ಷಿದಾರರ ಜೇಬು ಬರಿದಾಗಿರುತ್ತದೆ.
ಹೈಕೋರ್ಟ್ನಲ್ಲಿ: ಈ ಕಾರಣಕ್ಕಾಗಿ ಕೆಲ ಕಕ್ಷಿದಾರರು ಕೆಎಟಿಯಿಂದ ಯಾವ ತೀರ್ಪು ಹೊರಬಂದರೂ ಸರಿ. ಒಟ್ಟಾರೆ ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ಮುಗಿಯಲಿ. ಆಮೇಲೆ ಧಾರವಾಡದ ಹೈಕೋರ್ಟ್ನಲ್ಲಿ ರಿಟ್ ದಾಖಲಿಸಿ ನ್ಯಾಯಕ್ಕಾಗಿ ಹೋರಾಡೋಣ ಎಂಬ ಮನಸ್ಥಿತಿಗೆ ತಲುಪಿದ್ದಾರೆ. ಆರ್ಥಿಕ ಅಡಚಣೆಯಿಂದಾಗಿ ಬಹುತೇಕ ಕಕ್ಷಿದಾರರು ವಿಚಾರಣೆ ವೇಳೆ ಹಾಜರಾಗುತ್ತಲೂ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

