ಧಾರವಾಡ

ಬಸ್ ಪಾಸ್ ವಿತರಣೆ ಗೊಂದಲ ಕೇಂದ್ರ ಗಾಜು ಪುಡಿಪುಡಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 30
ಸಾರಿಗೆ ಸಂಸ್ಥೆಯ ಬಸ್ ಪಾಸ್ ವಿತರಣೆಗೆ ಸಂಬಂಧಿಸಿದಂತೆ ಬುಧವಾರ ನಗರದ ಹೊಸ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಂದ ನೂಕು ನುಗ್ಗಲು ಉಂಟಾಗಿ ಪಾಸ್ ವಿತರಣಾ ಕೇಂದ್ರದ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ.
ಸಾರಿಗೆ ಸಂಸ್ಥೆಯಿಂದ ಪ್ರತಿ ವರ್ಷ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹತ್ತು ತಿಂಗಳ ಪಾಸ್ ವಿತರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ಪದವಿ ವಿದ್ಯಾರ್ಥಿಗಳ ಪರೀಕ್ಷೆಗಳು ಮುಂದೂಡಿದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಆಗಮಿಸುವವರಿಗೆ ಪಾಸ್ ಇಲ್ಲದಂತಾಗಿ ತೊಂದರೆಯಾಗಿದೆ.
ಈ ಕುರಿತು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದಾಗ ಒಂದು ತಿಂಗಳ ವಿಸ್ತರಣೆ ಮಾಡುವುದಾಗಿ ಅಧಿಕಾರಿಗಳು ಸೂಚಿಸಿದ್ದರು. ಕಳೆದ ಜೂನ್ ತಿಂಗಳಿನಿಂದ ಪ್ರಸಕ್ತ ವರ್ಷದ ಏಪ್ರಿಲ್ ವರೆಗೆ ಹತ್ತು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ವಿದ್ಯಾರ್ಥಿಗಳು ಒಂದು ತಿಂಗಳ ಪಾಸ್ ಪಡೆಯಲು ಸರದಿ ಸಾಲಿನಲ್ಲಿ ನಿಂತಾಗ ನೂಕು ನುಗ್ಗಲು ಸಂಭವಿಸಿದೆ.
ಅಲ್ಲದೇ ಪ್ರತಿ ವರ್ಷದ ಪ್ರಾರಂಭದಲ್ಲಿ ಪಾಸ್ ವಿತರಿಸುವ ಸಂದರ್ಭದಲ್ಲೇ ಹನ್ನೊಂದು ತಿಂಗಳ ಪಾಸ್ ನೀಡಿದರೆ ಈ ರೀತಿಯ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೆ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪ್ರತಿ ವರ್ಷ ಹತ್ತು ತಿಂಗಳ ಪಾಸ್ ಮಾತ್ರ ನೀಡುತ್ತಾರೆ. ಇದರಿಂದ ಪ್ರತಿ ಬಾರಿ ಇದೇ ಸಮಸ್ಯೆ ಎದುರಿಸಬೇಕಾಗುತ್ತದೆ. ಬದಲಿಗೆ ಹನ್ನೊಂದು ತಿಂಗಳ ಹಣ ಪಡೆದು ಒಂದೇ ಬಾರಿ ಪಾಸ್ ನೀಡಿದರೆ ವಿದ್ಯಾರ್ಥಿಗಳು ಈ ರೀತಿಯ ತೊಂದರೆ ಅನುಭವಿಸುವುದು ತಪ್ಪುತ್ತದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಒಂದೇ ಯಂತ್ರ...: ಪಾಸ್ ವಿತರಣೆಗೆ ಒಂದೇ ಯಂತ್ರ ಇದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 10ಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ಸಂಜೆಯವರೆಗೆ ಪಾಸ್ ಪಡೆದುಕೊಂಡು ಹೋದ ದೃಶ್ಯಗಳು ಕಂಡು ಬಂದವು. ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಇಲಾಖೆ ವಿತರಣಾ ಕೇಂದ್ರದ ಸುತ್ತ ವ್ಯಾಪಕ ಬಂದೊಬಸ್ತ್ ಏರ್ಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.