ಸ್ಪಷ್ಟ ಚಿಂತನೆಯಿಂದ ಲಾಭದಾಯಕ ಕೃಷಿ
ಹುಬ್ಬಳ್ಳಿ: ನಿಯಮಿತ ಅವಧಿಯಲ್ಲಿ ಆದಾಯ ತರುವಂತಹ ಸ್ಪಷ್ಟ ಚಿಂತನೆಯನ್ನು ಕೃಷಿಕರು ರೂಢಿಸಿಕೊಂಡಲ್ಲಿ ಕೃಷಿಯಲ್ಲೂ ಸಮೃದ್ಧ ಲಾಭ ಪಡೆಯಲು ಸಾಧ್ಯ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಿಂದ ಹಲವಾರು ಕುಟುಂಬಗಳು ಕೃಷಿಯಿಂದ ನೆಮ್ಮದಿ ಜೀವನ ಕಂಡಿವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಗುರುವಾರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಉತ್ಸವ ಸಮಿತಿ, ಕೃಷಿ ಇಲಾಖೆ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕೃಷಿ ಉತ್ಸವ ಮತ್ತು ಪ್ರಗತಿ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆ ಬಂದ ಸಂದರ್ಭದಲ್ಲಿ ಬೆಲೆ ಇರದು, ಇದು ಇಂದಿನ ಪರಿಸ್ಥಿತಿ. ರೈತರ ಉತ್ಪನ್ನಗಳಿಗೆ ಬೆಲೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಶೈತ್ಯಾಗಾರಗಳನ್ನು ನಿರ್ಮಿಸಬೇಕು. ರೈತರು ಕೂಡ ಸರ್ಕಾರದ ಯಾವುದೇ ಯೋಜನೆಗಳಿರಲಿ, ಸ್ವಯಂ ಸೇವಾ ಸಂಸ್ಥೆಯ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಧಾರವಾಡ ಜಿಲ್ಲೆಯ ಸ್ವಸಹಾಯ ಸಂಘಗಳಿಂದ ವಾರಕ್ಕೆ ತಲಾ ರು. 10ನಂತೆ 41 ಕೋಟಿ ಉಳಿತಾಯ ಮಾಡಲಾಗಿದೆ. ಹಣ ಉಳಿತಾಯದಲ್ಲಿ ಮನೆಯ ಮಹಿಳೆಯ ಪಾತ್ರ ಮುಖ್ಯವಾಗಿದ್ದು, ಸಂಪಾದಿಸಿದ ಸದ್ವಿನಿಯೋಗವಾಗುವಂತೆ ಮಹಿಳೆ ನೋಡಿಕೊಂಡು ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂದು ಹೇಳಿದರು.
ಗ್ರಾಮೀಣ ಸೇರಿದಂತೆ ನಗರ ಪ್ರದೇಶ ಬಹುತೇಕ ಕುಟುಂಬಗಳ ಆದಾಯ ದುಶ್ಚಟಗಳಿಂದ ಸೋರಿ ಹೋಗುತ್ತಿದ್ದು, ದುಶ್ಚಟಗಳಿದ್ದರೆ ಎಷ್ಟೇ ಸಂಪಾದಿಸಿದರೂ ಉಳಿತಾಯ ಅಸಾಧ್ಯ. ಒಂದು ರೀತಿಯಲ್ಲಿ ದುಶ್ಚಟಗಳು ಭಾಗ್ಯದ ಬಟ್ಟಲಿಗೆ ರಂಧ್ರಗಳಿದ್ದಂತೆ ದೇವರು ಭಾಗ್ಯದ ಬಟ್ಟಲು ತುಂಬಿಕೊಟ್ಟರೂ ಅದರಲ್ಲಿ ಉಳಿಯುವುದಿಲ್ಲ ಎಂದು ತಿಳಿಸಿದರು. ನಮ್ಮ ಸಂಸ್ಕೃತಿಯ ಮೂಲ ಸಂಗತಿ ಮರೆಯದೇ ನಾವು ಆಧುನಿಕ ಜೀವನಕ್ಕೆ ತೆರೆದುಕೊಳ್ಳಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯ ನಿಲ್ಲಬೇಕು. ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿರಬೇಕು ಎಂದು ಹೇಳಿದರು.
ಜಿಲ್ಲಾ ಕೃಷಿ ಉತ್ಸವ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಕೈಗೆತ್ತಿಕೊಂಡ ಸುಜ್ಞಾನನಿಧಿ, ಶೌಚಾಲಯ, ಮಾಸಾಶನ, ಕೃಷಿ ಯಂತ್ರೋಪಕರಣ ಖರೀದಿಗೆ ಒಟ್ಟು ರು. 22 ಕೋಟಿ ಅನುದಾನ ಬಿಡುಗಡೆ ಮಾಡಲಾಯಿತು.
ಇದಕ್ಕೂ ಮುನ್ನ ಶ್ರೀಸುಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಮೂರುಸಾವಿರಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಹೊರಕೇರಿ, ರಂಗಾಬದ್ದಿ, ಕೆಎಂಫ್ ಅಧ್ಯಕ್ಷ ಗಂಗಣ್ಣ ಮೊರಬದ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

