ಧಾರವಾಡ

ಬೆಳ್ಳಿತೆರೆ ತಾರೆಗಳಿಗೆ ಪ್ರಶಸ್ತಿಗಳ ಹೂ ಮಳೆ

Published On :

ಕ.ಪ್ರ.ವಾರ್ತೆ  ಧಾರವಾಡ  ಫೆ. 9
ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಜಮಾಯಿಸಿದ್ದ ಸಾವಿರಾರು ಸಿನಿ ಪ್ರಿಯರ ಕರತಾಡನ, ಶಿಳ್ಳೆ ಹಾಗೂ ಮೇರೆ ಮೀರುವಂತಿದ್ದ ಉತ್ಸಾಹದ ಮಧ್ಯೆ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2010-11 ಹಾಗೂ 2011-12ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಮೊಟ್ಟ ಮೊದಲ ಬಾರಿಗೆ ಧಾರವಾಡದಲ್ಲಿ ನಡೆದ ಈ ವಿಶಿಷ್ಟ ಸಮಾರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ನಿರ್ದೇಶಕರಿಗೆ ನೀಡುವ ದಿ. ಪುಟ್ಟಣ್ಣ ಕಣಗಾಲ್ 2010ನೇ ಸಾಲಿನ ಪ್ರಶಸ್ತಿಯು ಭಾಗರ್ವ, 2011ನೇ ಸಾಲಿನ ಪ್ರಶಸ್ತಿಯನ್ನು ಡಾ.ಡಿ. ರಾಜೇಂದ್ರ ಬಾಬು ಅವರ ಪರವಾಗಿ ಪತ್ನಿ ಸಾವಿತ್ರಿ ಅವರಿಗೆ ಪ್ರದಾನ ಮಾಡಲಾಯಿತು. 2010ನೇ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿ ಎಸ್. ಶಿವರಾಂ, 2011ನೇ ಸಾಲಿನ ಪ್ರಶಸ್ತಿಯನ್ನು ಹಂಸಲೇಖ ಸ್ವೀಕರಿಸಿದರು. ಡಾ. ವಿಷ್ಣುವರ್ಧನ್ ಪ್ರಶಸ್ತಿಯು 2010ನೇ ಸಾಲಿಗೆ ಅಂಬರೀಷ (ಅನುಪಸ್ಥಿತಿ) ಮತ್ತು 2011ನೇ ಸಾಲಿಗೆ ಅನಂತನಾಗ್ ಪಡೆದರು. ಈ ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ತಲಾ 2 ಲಕ್ಷ ನಗದು ಹಾಗೂ ಚಿನ್ನಲೇಪಿತ ಪದಕ ನೀಡಿ ಗೌರವಿಸಲಾಯಿತು.
2010ನೇ ಸಾಲಿನ ಅತ್ಯುತ್ತಮ ನಟನೆಗೆ ಸುಬ್ಬಯ್ಯ ನಾಯ್ಡು ಪ್ರಶಸ್ತಿ 'ಜಾಕಿ' ಚಿತ್ರಕ್ಕಾಗಿ ಪುನೀತ ರಾಜಕುಮಾರ್‌ಗೆ, 2011ನೇ ಸಾಲಿನ 'ಪ್ರಸಾದ' ಚಿತ್ರಕ್ಕಾಗಿ ಅರ್ಜುನ ಸರ್ಜಾ ಸ್ವೀಕರಿಸಿದರು. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಎರಡು ವರ್ಷಗಳಿಗೆ ಕ್ರಮವಾಗಿ 'ಸಂಜು ವೆಡ್ಸ್ ಗೀತಾ' ಚಿತ್ರಕ್ಕಾಗಿ ರಮ್ಯಾ ಹಾಗೂ 'ಭಾಗೀರಥಿ' ಚಿತ್ರಕ್ಕಾಗಿ ಭಾವನಾ ಗಿಟ್ಟಿಸಿಕೊಂಡರು. ಅತ್ಯುತ್ತಮ ಪೋಷಕ ನಟ 2010ಕ್ಕೆ ಅಚ್ಯುತ್‌ಕುಮಾರ (ಹೆಜ್ಜೆಗಳು), 2011ನೇ ಸಾಲಿಗೆ ಶ್ರೀಧರ (ಕಂಸಾಳೆ ಕೈಸಾಳೆ), ಅತ್ಯುತ್ತಮ ಪೋಷಕ ನಟಿ ಕ್ರಮವಾಗಿ ಹರ್ಷಿಕಾ ಪೂಣಚ್ಚ (ತಮಸ್ಸು), ಗಿರಿಜಾ ಲೋಕೇಶ (ಸಿದ್ದಿಂಗು) ಪಡೆದರು.
ಅತ್ಯುತ್ತಮ ಚಿತ್ರಗಳಿವು: 2010ನೇ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ 'ಮಾಗಿಯ ಕಾಲ', 2011ನೇ ಸಾಲಿಗೆ 'ಪ್ರಸಾದ' ಚಿತ್ರ ಪಡೆಯಿತು. ದ್ವಿತೀಯ ಅತ್ಯುತ್ತಮ ಚಿತ್ರ 2010ನೇ ಸಾಲಿಗೆ 'ತಮಸ್ಸು' ಹಾಗೂ 2011ನೇ ಸಾಲಿಗೆ 'ಕೂರ್ಮಾವತಾರ', ತೃತೀಯ ಅತ್ಯುತ್ತಮ ಚಿತ್ರ 2011ನೇ ಸಾಲಿಗೆ 'ಅಲ್ಲಿದೆ ನಮ್ಮನೆ ಇಲ್ಲೆ ಬಂದೆ ಸುಮ್ಮನೆ' ಚಿತ್ರ ಪಡೆಯಿತು. 2010-11ನೇ ಸಾಲಿಗೆ ವಿಶೇಷ ಪ್ರಶಸ್ತಿಯನ್ನು ಗ್ರಾಫಿಕ್ಸ್ ವಿನ್ಯಾಸಕ್ಕಾಗಿ 'ಸೂಪರ್‌' ಚಿತ್ರಕ್ಕೆ ನೀಡಿದರೆ, 2011ನೇ ಸಾಲಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು 'ಸಾರಥಿ' ಚಿತ್ರದ ಸ್ಪೆಷಲ್ ಎಫೆಕ್ಟ್‌ಗಾಗಿ ರಾಜನ್ ಅವರಿಗೆ ವಿತರಿಸಲಾಯಿತು. ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯು 2010ನೇ ಸಾಲಿಗೆ ಕೊಡವ ಭಾಷೆಯ 'ನಾ ಪುಟ್ಟನ ಮಣ್ಣ್‌' ಹಾಗೂ 2011ನೇ ಸಾಲಿಗೆ ಕೊಂಕಣಿ ಭಾಷೆಯ 'ಉಜ್ವಾಡು' ಚಿತ್ರಕ್ಕೆ ಲಭಿಸಿತು.
ಮತ್ತಷ್ಟು ಪ್ರಶಸ್ತಿಗಳು: ಅತ್ಯುತ್ತಮ ಕಥೆ ಬರಹಗಾರ ಪ್ರಶಸ್ತಿಯನ್ನು (2010-11ನೇ ಸಾಲಿಗೆ ಕ್ರಮವಾಗಿ) ಈಶ್ಚರ ಚಂದ್ರ (ಮಾಗಿಯಕಾಲ) ಹಾಗೂ ಕುಂ. ವೀರಭದ್ರಪ್ಪ (ಕೂರ್ಮಾವತಾರ), ಅತ್ಯುತ್ತಮ ಚಿತ್ರಕಥೆ ಬರಹಗಾರ ಪ್ರಶಸ್ತಿಯನ್ನು ಅಗ್ನಿ ಶ್ರೀಧರ (ತಮಸ್ಸು) ಹಾಗೂ ರವೀಂದ್ರ ಎಚ್.ಪಿ. ದಾಸ (ಮತ್ತೆ ಬನ್ನಿ ಪ್ರೀತ್ಸೋಣ) ಪಡೆದರು. ಅತ್ಯುತ್ತಮ ಸಂಭಾಷಣಕಾರ ಲಕ್ಷ್ಮೀಪತಿ ಕೋಲಾರ (ಭಗವತಿ ಕಾಡು) ಹಾಗೂ ಗೋಪಿ ಪೀಣ್ಯ (ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ), ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಬಿ.ಎಲ್. ಬಾಬು (ಒಂದೂರಲ್ಲಿ) ಹಾಗೂ ಜಿ.ಎಸ್. ಭಾಸ್ಕರ (ಕೂರ್ಮಾವತಾರ) ಪಡೆದರು. ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಯನ್ನು ಜಯಶ್ರೀ ಅರವಿಂದ (ಒಂದೂರಲ್ಲಿ) ಹಾಗೂ ಅನೂಪ ಸೀಳಿನ್ (ಸಿದ್ಲಿಂಗು) ಪಡೆದರು. ಅತ್ಯುತ್ತಮ ಧ್ವನಿಗ್ರಾಹಕ ಪ್ರಶಸ್ತಿಯನ್ನು 2010ನೇ ಸಾಲಿಗೆ ಪಳನಿ ಡಿ. ಸೇನಾಪತಿ (ಕಾಲ್ಗೆಜ್ಜೆ) ಪಡೆದರು.
ಅತ್ಯುತ್ತಮ ಸಂಕಲನಕಾರ ಸುರೇಶ ಅರಸ (ಐದೊಂದ್ಲ ಐದು) ಹಾಗೂ ಬಿ.ಎಸ್. ಕೆಂಪರಾಜು (ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ) ಪಡೆದರು. ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ಮಾಸ್ಟರ್ ಚನ್ನಕುಮಾರ (ಒಂದೂರಲ್ಲಿ) ಹಾಗೂ ಮಾಸ್ಟರ್ ಸಂಕಲ್ಪ (ಪ್ರಸಾದ) ಗಳಿಸಿದರೆ, ಬಾಲ ನಟಿ ಪ್ರಶಸ್ತಿಯನ್ನು ಬೇಬಿ ಪ್ರಕೃತಿ (ಹೆಜ್ಜೆಗಳು) ಹಾಗೂ ಬೇಬಿ ಸುಹಾಸಿನಿ (ಬಣ್ಣದ ಕೊಡೆ) ಪಡೆದರು. ಅತ್ಯುತ್ತಮ ಕಲಾ ನಿರ್ದೇಶಕ ಪ್ರಶಸ್ತಿಯು ಇಸ್ಮಾಯಿಲ್ (ಸಂಜು ವೆಡ್ಸ್ ಗೀತಾ) ಹಾಗೂ ಈಶ್ವರಿ ಕುಮಾರ (ಸಾರಥಿ) ಪಡೆದರು. ಹಾಗೆಯೇ ಅತ್ಯುತ್ತಮ ಗೀತ ರಚನೆಕಾರ ಎ. ಬಂಗಾರು (ಕಾಲ್ಗೆಜ್ಜೆ) ಹಾಗೂ ಬರಗೂರು ರಾಮಚಂದ್ರಪ್ಪ (ಭಾಗೀರಥಿ) ಪಡೆದರು. ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯು ರವೀಂದ್ರ ಸೊರಗಾವಿ (ಪುಟ್ಟಕ್ಕನ ಹೈವೆ) ಹಾಗೂ ಆದಿತ್ಯಾ ರಾವ್ (ಬಾಲ್ ಪೆನ್), ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನು ರಕ್ಷಾ ಪ್ರಿಯರಾಮ್ (ಒಂದೂರಲ್ಲಿ) ಹಾಗೂ ಅರ್ಚನಾ ಉಡುಪ (ಭಾಗೀರಥಿ) ಪಡೆದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ಆರ್. ರೋಷನ್ ಬೇಗ್, ದಿನೇಶ ಗುಂಡೂರಾವ್, ಉಮಾಶ್ರೀ, ಮಾಜಿ ಸಿಎಂ ಜಗದೀಶ ಶೆಟ್ಟರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ. ಗಂಗರಾಜು ಇದ್ದರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.