ಧಾರವಾಡ

ಇಲ್ಲಿ ಹನಿ ಹನಿ ನೀರಲ್ಲೂ ಫ್ಲೋರೈಡ್

Published On :

ಧಾರವಾಡ: ಕಲುಷಿತ ನೀರು ಹೊಂದಿರುವ ಎಲ್ಲ ಸಮಸ್ಯಾತ್ಮಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು-ಸರ್ಕಾರದ ಬದ್ಧತೆ ಎಂದು ರಾಜ್ಯ ಸರ್ಕಾರ ನಿತ್ಯ ಜಾಹೀರಾತು ನೀಡುತ್ತಿದ್ದು, ಧಾರವಾಡ ಗ್ರಾಮೀಣ ಪ್ರದೇಶದ ಒಂದೊಂದು ಹಳ್ಳಿಗಳ ಒಳಹೊಕ್ಕು ನೋಡಿದರೆ ಹಳ್ಳಿಗರು ಎಂತಹ ನೀರು ಕುಡಿಯುತ್ತಿದ್ದಾರೆಂಬ ನಿಜಾಂಶ ಬೆಳಕಿಗೆ ಬರುತ್ತದೆ.
ಜಿಲ್ಲೆಯ ಕೆಲ ಹಳ್ಳಿಗರು ಕುಡಿಯುವ ನೀರಿನ ಪ್ರತಿ ಹನಿಯಲ್ಲೂ ರೋಗದ ಛಾಯೆ ಎದ್ದು ಕಾಣುತ್ತಿದ್ದು, ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಪಡೆಯುತ್ತಿದ್ದು, ಈ ನೀರಿನಲ್ಲಿ ದಿನದಿಂದ ದಿನಕ್ಕೆ ಫ್ಲೋರೈಡ್ ಅಂಶ ಹೆಚ್ಚಾಗುತ್ತಿದೆ ಎಂಬುದೀಗ ಬೆಳಕಿಗೆ ಬಂದಿದೆ.
ಅದರಲ್ಲೂ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಹಟ್ಟಿ, ಮೊರಬ ಹಾಗೂ ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮಗಳ ನೀರು ಸಂಪೂರ್ಣವಾಗಿ ಫ್ಲೋರೈಡ್‌ನಿಂದ ಕೂಡಿದ್ದು, (ಪ್ರತಿ ಲೀಟರ್ ನೀರಿನಲ್ಲಿ ಗರಿಷ್ಠ 1.5 ಮಿ.ಗ್ರಾಂ ಇರಬಹುದು. ಆದರೆ, ಈ ಗ್ರಾಮಗಳಲ್ಲಿ 1.5 ಮೀ.ಗ್ರಾಂ ಮೀರಿ ಫ್ಲೋರೈಡ್ ಇದೆ) ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿ ಹಾಗೂ ಸಸ್ಯಗಳಿಗೂ ಆ ನೀರು ಯೋಗ್ಯವಲ್ಲ ಎಂಬುದನ್ನು ಇತ್ತೀಚೆಗೆ ಧಾರವಾಡದಲ್ಲಿ ನಡೆದ ಅಂತರ್ಜಲ ಕುರಿತ ಸಮಾರಂಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೇ ದೃಢಪಡಿಸಿದ್ದಾರೆ. ಜಿಲ್ಲಾಡಳಿತಕ್ಕೂ ಈ ಕುರಿತು ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಆದರೆ, ಆರೋಗ್ಯ ಇಲಾಖೆಯಾಗಲೀ ಅಥವಾ ಜಿಲ್ಲಾಡಳಿತವಾಗಲೀ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕೊಡುವಲ್ಲಿ ಪ್ರಯತ್ನ ಮಾಡುತ್ತಿಲ್ಲ ಎಂಬುದು ಸೋಜಿಗದ ಸಂಗತಿ.
ಅಲ್ಲದೆ, ಜಿಲ್ಲೆಯ ನವಲಗುಂದ ತಾಲೂಕು ಹಾಗೂ ಕುಂದಗೋಳ ತಾಲೂಕಿನ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣ ಉಪ್ಪಿನ ನೀರನ್ನು ಹೊಂದಿವೆ. ಈ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರಸಿದರೆ ಸಾಕು ಉಪ್ಪು ನೀರೇ ಸಿಗುತ್ತದೆ. ತಿಳಿವಳಿಕೆ ಹಾಗೂ ಅನಿವಾರ್ಯವಾಗಿ ಗ್ರಾಮಸ್ಥರು ಫ್ಲೋರೈಡ್‌ಯುಕ್ತ ಹಾಗೂ ಉಪ್ಪಿನಂಶದ ನೀರು ಕುಡಿಯುತ್ತಿದ್ದಾರೆ. ಈ ಭಾಗದಲ್ಲಿ ನೀರಿನಲ್ಲಿ ಫ್ಲೋರೈಡ್ ಅಂಶ ಒಂದೇ ಹೇರಳವಾಗಿಲ್ಲ. ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ನೀರಿನ ಕಠಿಣತ್ವದ ಪ್ರಮಾಣಗಳು ಜಾಸ್ತಿಯಾಗಿ ನೀರು ಜನತೆಯ ಜೀವಕ್ಕೆ ಸಂಚಕಾರ ತಂದೊಡ್ಡುವ ಹಂತವನ್ನು ತಲುಪಿದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು.
ನಗರ ಪ್ರದೇಶದ ಜನತೆ ಮಲಪ್ರಭಾ ನದಿಯ ಶುದ್ಧ ನೀರನ್ನು ಕುಡಿಯುತ್ತಿದ್ದು, ಹಳ್ಳಿಗರು ಮಾತ್ರ ತಿಳಿದು-ತಿಳಿಯದೆಯೋ ಫ್ಲೋರೈಡ್ ನೀರನ್ನು ಕುಡಿಯುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಬಿ.ವಿ. ದೇಸಾಯಿ.
ಜಿಲ್ಲೆಯ ಎಲ್ಲ ತಾಲೂಕು ಪ್ರದೇಶದಲ್ಲಿ ಕೊಳವೆ ಬಾವಿ ನೀರನ್ನೇ ಕುಡಿಯಲು ಬಳಸುತ್ತಿದ್ದು, ನೀರಿನಲ್ಲಿನ ಅಂಶಗಳ ಬಗ್ಗೆ ಪರೀಕ್ಷೆ ನಡೆಸಿ ಯಾವ ಗ್ರಾಮಗಳ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಹೆಚ್ಚಿದೆ ಅಥವಾ ಇನ್ನಾವುದೋ ಅಂಶ ಕಂಡು ಬಂದರೆ ಆ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿರುವುದು ಸರ್ಕಾರದ ಕರ್ತವ್ಯ. ಈ ಮೂಲಕ ರಾಜಕಾರಣಿಗಳು ಎನಿಸಿಕೊಂಡವರು ಸಹ ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ.

ಹೊನ್ನಪ್ಪ ಲಕ್ಕಮ್ಮನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.