ಧಾರವಾಡ

ಇಂದಿನಿಂದ ಪ್ರಥಮ ಪಿಯು ಪರೀಕ್ಷೆ

Published On :

ಧಾರವಾಡ: ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಜಿಲ್ಲೆಯಾದ್ಯಂತ ಫೆ. 20 ರಿಂದ ಮಾರ್ಚ್ 4ರವರೆಗೆ ನಡೆಯಲಿದೆ. ಸುಗಮವಾಗಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣೇಶ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿಗೆ ಒಂದರಂತೆ ಒಟ್ಟು ಐದು ಪಿಯು ಕಾಲೇಜುಗಳನ್ನು ನೋಡಲ್ ಕೇಂದ್ರಗಳನ್ನಾಗಿ ಮಾಡಲಾಗಿದ್ದು, ಆಯಾ ಕಾಲೇಜಿನ ಪ್ರಾಂಶುಪಾಲರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಪರೀಕ್ಷೆಯನ್ನು ಸುಸೂತ್ರ, ವ್ಯವಸ್ಥಿತ ನಡೆಸಲು ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಕೈಗೊಂಡಿದ್ದು, ವಿದ್ಯಾರ್ಥಿಗಳು, ಪೋಷಕರು ಆತಂಕಗೊಳ್ಳದೇ ಯಾವುದೇ ವದಂತಿಗಳಿಗೆ ಕಿವಿಗೊಡದೇ ಪರೀಕ್ಷೆ ಎದುರಿಸಬೇಕು. ಜಿಲ್ಲೆಯ 20,320 ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಗಣೇಶ ಪೂಜಾರಿ ತಿಳಿಸಿದ್ದಾರೆ.
ಇಂದು ವರ್ಧಂತ್ಯುತ್ಸವ, ಉಪನಯನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 19
ಹುಬ್ಬಳ್ಳಿ ನಗರದ ದಾಜಿಬಾನಪೇಟೆಯ ಮಹಾಗಣಪತಿ 20ನೇ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಹಾಗೂ 130 ವಟುಗಳ ಉಪನಯನ ಕಾರ್ಯಕ್ರಮ ಫೆ. 20ರಂದು ಮಹಾಗಣಪತಿ ಮಂದಿರದಲ್ಲಿ ನಡೆಯಲಿದೆ. ಅಖಿಲ ಭಾರತೀಯ ಸೋಮವಂಶೀಯ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಅಧ್ಯಕ್ಷ ಹರಿಸಾ ಖೋಡೆ ಆಗಮಿಸುವರು. ಅಂದು ಬೆಳಗ್ಗೆ 11ಕ್ಕೆ ನಡೆಯುವ ಸಮಾರಂಭದ ಸಾನ್ನಿಧ್ಯವನ್ನ್ನು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಶ್ರೀ ಫಕ್ಕೀರ ಸಿದ್ಧರಾಮ ಸ್ವಾಮೀಜಿ ವಹಿಸುವರು. ಬಿಜಾಪುರ ಜಿಲ್ಲೆಯ ಕುನ್ನೂರ ಗ್ರಾಮದ ಶಾಂತಿ ಕುಟೀರ ಆಶ್ರಮದ ಸಾಧಕ ಶ್ರೀ ಕೃಷ್ಣಾ- ಬ್ರಹ್ಮಚಾರಿ ಅವರು ಆಗಮಿಸುವರು. ಹರಿಸಾ ಖೋಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಬೆಂಗಳೂರು ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಸತ್ಯನಾರಾಯಣ ಡಮಾಮ ಹಾಗೂ ಪುಣೆಯ ಶ್ರೀಮಂತ ದಗಡುಶೇಟ್ ಹಲವಾಯಿ ಸಾರ್ವಜನಿಕ ಗಣಪತಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಅಶೋಕರಾವ್ ಪ್ರತಾಪರಾವ್ ಗೋಡ್ಸೆ ಆಗಮಿಸುವರು. ಎಸ್‌ಎಸ್‌ಕೆ ಪಂಚಕಮಿಟಿ ಅಧ್ಯಕ್ಷ ನಾಗೇಂದ್ರಸಾ ಮೆಹರವಾಡೆ ಅಧ್ಯಕ್ಷತೆ ವಹಿಸುವರು. ಕಾರ್ಯಕಾರಿ ಮಂಡಳದ ಸದಸ್ಯರಾದ ಪರಶುರಾಮ ಪಾಟೀಲ, ಗಣಪತಸಾ ಜರತಾರಘರ, ಅಶೋಕ ಮೆಹರವಾಡೆ, ಮೋಹನ ಕಲಬುರ್ಗಿ, ಗಜಾನನ ಸಾತಪುತೆ, ವೆಂಕಟೇಶ ರತನ, ಚಂದ್ರು ರತನ ಹಾಗೂ ಶ್ಯಾಮ ಕಲಬುರ್ಗಿ ಮುಂತಾದವರು ಉಪಸ್ಥಿತರಿರುವರು.
ಯಶವಂತಪುರ-ಸಂಬಾಲಪುರ್ ಮಧ್ಯೆ ವಿಶೇಷ ರೈಲು ಸಂಚಾರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 19
ಸಂಬಾಲಪುರ್-ಯಶವಂತಪುರ ಮಧ್ಯೆ ಪ್ರತಿ ಬುಧವಾರ ಮಾರ್ಚ್ 26ರವರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ. ಯಶವಂತಪುರದಿಂದ ಆರು ಬಾರಿ ಮತ್ತು ಸಂಬಾಲಪುರದಿಂದ ಆರು ಬಾರಿ ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಹೊರಡಲಿದ್ದು, ಪ್ರತಿ ಬುಧವಾರ ಬೆಳಗ್ಗೆ 8.50ಕ್ಕೆ ಸಂಬಾಲಪುರದಿಂದ ಹೊರಡುವ ವಿಶೇಷ ಎಕ್ಸ್‌ಪ್ರೆಸ್ ರೈಲು ಗುರುವಾರ ಸಂಜೆ 4.30ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಅದೇ ರೀತಿ ಶುಕ್ರವಾರ ರಾತ್ರಿ 12.30ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಪ್ರತಿ ಶನಿವಾರ ಸಂಜೆ 4.15ಕ್ಕೆ ಸಂಬಾಲಪುರ್ ರೈಲು ನಿಲ್ದಾಣ ತಲುಪಲಿದೆ. ಮಾರ್ಗ ಮಧ್ಯದಲ್ಲಿ ಕೆಆರ್ ಪುರಂ, ಜೋಲಾರಪೆಟ್, ಕಟ್ಪಾಡಿ, ಚಿತ್ತೂರ್, ಪಕಾಲಾ, ತಿರುಪತಿ, ರೇಣಿಗುಂಟ, ಗುಡೂರ, ನೆಲ್ಲೂರ, ಓಂಗೋಲ್, ವಿಜಯವಾಡಾ, ರಾಜಮಂಡ್ರಿ, ಸಮಾಲಕೋಟ್, ವಿಶಾಖಪಟ್ಟಿನಂ, ವಿಜಿಯಾನಗರಂ, ಬೊಬ್ಬಿಲಿ, ಪಾರ್ವತಿಪುರಂ, ರಾಯಗಡ ರೈಲ್ವೆ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.
ಬೈಕ್-ಲಾರಿ ಡಿಕ್ಕಿ: ಸಾವು
ಕಲಘಟಗಿ: ದ್ವಿಚಕ್ರ ವಾಹನ ಹಾಗೂ ಲಾರಿ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ಹುಬ್ಬಳ್ಳಿ-ಕಾರವಾರ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದೆ. ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಬೈಕ್ ಸವಾರ ಸುರೇಶ ಮಲ್ಲಿಕಾರ್ಜುನ ನೆನಕ್ಕಿ (21) ಎಂಬುವನು ಸಾವನ್ನಪ್ಪಿದ್ದರೆ ರವಿ ಬಮ್ಮಿಗಟ್ಟಿ ಎಂಬುವ ಗಂಭೀರ ಗಾಯಗೊಂಡಿದ್ದಾನೆ.  ದ್ವಿಚಕ್ರ ವಾಹನ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ರ್ದುಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಗಾಯ: ದ್ವಿಚಕ್ರ ವಾಹನ ಚಾಲಕ, ಗಾಯಾಳು ರವಿ ಬಮ್ಮಿಗಟ್ಟಿ ಈ ಘಟನೆಗೂ ಮೊದಲು ಬಮ್ಮಿಗಟ್ಟಿ ಕ್ರಾಸ್‌ನಲ್ಲಿ ಉಪಾಹಾರಕ್ಕಾಗಿ ನಿಂತಿದ್ದ ಅರಣ್ಯ ಇಲಾಖೆ ತರಬೇತಿ ಸಿಬ್ಬಂದಿಯ ವಾಹನಕ್ಕೆ ಡಿಕ್ಕಿಪಡಿಸಿ ಮಹಿಳಾ ತರಬೇತಿದಾರರೊಬ್ಬರನ್ನು ಗಾಯಗೊಳಿಸಿದ್ದ ಎಂದು ಗೊತ್ತಾಗಿದೆ. ಮಹಿಳಾ ತರಬೇತಿದಾರರನ್ನು ಗಾಯಗೊಳಿಸಿದ ನಂತರ ತಲೆಮರೆಸಿಕೊಳ್ಳಬೇಕೆಂಬ ಧಾವಂತದಲ್ಲಿ ಯರ್ರಾಬಿರ್ರಿಯಾಗಿ ವಾಹನ ಚಲಾಯಿಸಿ ಅನಂತರ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಲಿಖಿತ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಲಿ: ಹಿರೇಮಠ
ಹುಬ್ಬಳ್ಳಿ: ಹಿರಿಯ ಅಧಿಕಾರಿಗಳ ಲಿಖಿತ ಆದೇಶದ ಹೊರತಾಗಿ ಯಾವುದೇ ಕಾರ್ಯಕೈಗೊಳ್ಳದಂತೆ ಸುಪ್ರಿಂಕೋರ್ಟ್ ನೀಡಿರುವ ಆದೇಶವನ್ನು ಆಯಾ ಇಲಾಖೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸರ್ಕಾರವನ್ನು ಒತ್ತಾಯಿಸಿದ ಹಿರೇಮಠ, ಈ ಆದೇಶದಿಂದಾಗಿ ಐಎಎಸ್, ಐಎಫ್‌ಎಸ್, ಐಪಿಎಸ್, ಕೆಎಎಸ್‌ನಂಥ ಹಿರಿಯ ಅಧಿಕಾರಿಗಳನ್ನು 2 ವರ್ಷದವರೆಗೆ ವರ್ಗಾವಣೆ ಮಾಡದಂತೆ ನೀಡಿರುವ ಆದೇಶ ಸ್ವಾಗತಾರ್ಹ. ಇದರಿಂದ ದಕ್ಷ ಅಧಿಕಾರಿಗಳಿಗೆ ಧೈರ್ಯ ಬಂದಂತಾಗುತ್ತದೆ ಎಂದು ತಿಳಿಸಿದರು. ಹಿರಿಯ ಅಧಿಕಾರಿಗಳು ಮೌಖಿಕವಾಗಿ ನೀಡುವ ಆದೇಶ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದಿಲ್ಲ. ಇಂಥ ಮೌಖಿಕ ಆದೇಶಗಳಲ್ಲಿ ಪ್ರಾಮಾಣಿಕತೆಯನ್ನೂ ನಿರೀಕ್ಷಿಸಲಾಗದು. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚಳವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಲಿಖಿತ ರೂಪದ ಆದೇಶ ನೀಡಿದಲ್ಲಿ ಆದೇಶದ ಪಾಲನೆಯೂ ಪರಿಣಾಮಕಾರಿಯಾಗುತ್ತದೆ ಎಂದರು.  ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ತಂದು ತಮಗೆ ಬೇಕಾಗಿರುವ ಕೆಲಸವನ್ನು ಮಾಡಿಸಿಕೊಳ್ಳುವಂಥ ಪ್ರಸಂಗಗಳಿಗೆ ಸುಪ್ರೀಂಕೋರ್ಟಿನ ಆದೇಶದಿಂದಾಗಿ ತಡೆಬಿದ್ದಂತಾಗಿದೆ. ಹಿರಿಯ ಅಧಿಕಾರಿಗಳಿಂದ ಬರವಣಿಗೆಯಲ್ಲಿ ಬರುವ ಆದೇಶಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವುದು ಕೆಳಗಿನ ಅಧಿಕಾರಿಗಳ ಕರ್ತವ್ಯ. ಲೋಪಗಳು ಕಂಡಲ್ಲಿ ಹಿರಿಯ ಅಧಿಕಾರಿಗಳನ್ನು ಕೇಳಬಹುದು. ಹೆಚ್ಚಿನ ವಿವರಗಳನ್ನೂ ಬರವಣೆ ಮೂಲಕ ಪಡೆದುಕೊಳ್ಳಬಹುದು ಎಂದು ಹಿರೇಮಠ ಹೇಳಿದರು.
ಮಾನಸ ಸರೋವರ ಯಾತ್ರೆಗೆ ರಿಯಾಯ್ತಿ
ಕಾರವಾರ: ಹಿಂದೂಗಳ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವಾದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಈ ಬಾರಿ ನೇಪಾಳ ಸರ್ಕಾರದ ಪ್ರವಾಸೋದ್ಯಮ ಮಂಡಳಿಯ ನಾರಾಯಣಿ ಹಾಲಿಡೇಸ್ ಸಂಸ್ಥೆ ಸಂಘಟಿಸುತ್ತಿದ್ದು, ಈ ಪ್ರವಾಸದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಶುಲ್ಕದಲ್ಲಿ ಭಾರಿ ರಿಯಾಯ್ತಿ ಘೋಷಿಸಲಾಗಿದೆ.
ಕೂಡಲೇ, ಯಾತ್ರಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಲ್ಲಿ ಅವರಿಗೆ ಡಿಸ್ಕೌಂಟ್ (ರಿಯಾಯ್ತಿ) ನೀಡಲಾಗುವುದು. ಜೊತೆಗೆ ರು. 3500 ಪ್ರವಾಸಿ ಪರಿಕರಗಳನ್ನು ಉಚಿತ ನೀಡಲಾಗುವುದು. ಕರ್ನಾಟಕ ಸರ್ಕಾರದಿಂದ ಮಾನಸ ಸರೋವರ ಯಾತ್ರೆಗೆ ತೆರಳುವವರಿಗೆ ರು. 30,000 ನೀಡಲಾಗುತ್ತಿದೆ. ಈ ಪ್ರವಾಸವನ್ನು ಬೆಂಗಳೂರಿನಿಂದ ಬೇರೆ ಬೇರೆ ಗುಂಪುಗಳಲ್ಲಿ (ಬ್ಯಾಚ್) ಏರ್ಪಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 98456 08096 ಅಥವಾ 080 42151225, ವಿಳಾಸ-ನಂ. 24, ಬಾಲಾಜಿ ಪ್ಲಾಜಾ 2ನೇ ಮಹಡಿ, 2ನೇ ಕ್ರಾಸ್, ಕಿರ್ಲೋಸ್ಕರ್ ಎಚ್.ಬಿ.ಸಿ.ಎಸ್, 2ನೇ ಹಂತ, ಶಂಕರಮಠ ಸರ್ಕಲ್ ಹತ್ತಿರ, ಬಸವೇಶ್ವರ ನಗರ, ಬೆಂಗಳೂರು-79, ಇಮೇಲ್ ್ಝಟಿಜ್ಟಿಅಢ್ಝಡ್ಝಡಿಡ್ಟ್ಡಝ್ಝಿಟಿಜ್ಝಛ.ಛ್ಝಿಣ ಸಂಪರ್ಕಿಸಬಹುದು ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿಯ ಸಂಪರ್ಕಾಧಿಕಾರಿ ಎ.ವಿ. ಮೂರ್ತಿ ತಿಳಿಸಿದ್ದಾರೆ.
ನೇಪಾಳ, ಟಿಬೆಟ್ ಮಾರ್ಗವಾಗಿ ಏರ್ಪಡಿಸಿರುವ ಕೈಲಾಸ ಮಾನಸ ಸರೋವರ ಯಾತ್ರೆಯ ಅವಧಿ ಒಟ್ಟು 14 ದಿನಗಳಾಗಿದ್ದು, ಯಾತ್ರಾರ್ಥಿಗಳಿಗೆ ಈ ಅವಧಿಯಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನೇಪಾಳ ಟೂರಿಸಂ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಟ್ಕಳ: ಡಿಎಸ್ಪಿಯಾಗಿ ಮುತ್ತುರಾಜ
ಭಟ್ಕಳ: ನೂತನ ಡಿಎಸ್ಪಿಯಾಗಿ ಮುತ್ತುರಾಜು ಅಧಿಕಾರಿ ವಹಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಇಲ್ಲಿನ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧೀರ ಕುಮಾರ ರೆಡ್ಡಿ ಅವರು ಬಳ್ಳಾರಿ ಜಿಲ್ಲಾ ಎಸ್‌ಪಿಯಾಗಿ ಭಡ್ತಿ ಹೊಂದಿ ವರ್ಗಾವಣೆಗೊಂಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಬೆಳಗಾವಿಯಲ್ಲಿ ಡಿಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುತ್ತುರಾಜು ಅವರನ್ನು ಸರ್ಕಾರ ಈ ಜಾಗಕ್ಕೆ ನೇಮಿಸಿ ಆದೇಶ ಹೊರಡಿಸಿದೆ.
ಇಂದು ವೆಂಕಟರಮಣ ಬೆಳ್ಳಿ ರಥೋತ್ಸವ
ಭಟ್ಕಳ: ನಗರದ ಸೋನಾರಕೇರಿ ದೈವಜ್ಞ ಸಮಾಜದ ಶ್ರೀ ವೆಂಕಟರಮಣ ದೇವಸ್ಥಾನದ ಬೆಳ್ಳಿ ರಥೋತ್ಸವ ಕಾರ್ಯಕ್ರಮ ಫೆ. 20ರಂದು ನಡೆಯಲಿದೆ. ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಸಂಜೆ ಬೆಳ್ಳಿ ರಥೋತ್ಸವದ ಮೆರವಣಿಗೆ ನಂತರ ಸುಡುಮದ್ದು ಪ್ರದರ್ಶನ ನಡೆಯಲಿದ್ದು, ಶುಕ್ರವಾರ ಸಂಜೆ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಲಿವೆ.
23ಕ್ಕೆ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ
ಯಲ್ಲಾಪುರ: ಸ್ಥಳೀಯ ಸಂವಿತ್ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ದಿ. ಸುಬ್ರಾಯ ಗಣಪಯ್ಯ ಮಳಲಗಾಂವ ಸ್ಮರಣಾರ್ಥ ಪಟ್ಟಣದ ಎಪಿಎಂಸಿ ಆವಾರದ ಅಡಕೆ ಭವನದಲ್ಲಿ ಫೆ. 23ರಂದು ಸಂಜೆ 5ಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಓಂಕಾರನಾಥ ಹವಾಲ್ದಾರ್, ಅನಂತ ಹೆಗಡೆ ವಾಜಗಾರ, ಗಣೇಶ ಭಾಗ್ವತ ಗುಂಡ್ಕಲ್, ಭರತ ಹೆಗಡೆ ಹೆಬ್ಬಲಸು, ರಮೇಶ ಭಾಗ್ವತ ಕವಾಳೆ, ದತ್ತಾತ್ರೇಯ ಗಾಂವ್ಕರ್ ಮುಂತಾದ ಕಲಾವಿದರು ತಮ್ಮ ಕಲೆಯನ್ನು ಸಾದರಪಡಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಚಲಿಸುವ ರೈಲಿನಿಂದ ಬಿದ್ದು ಸಾವು
ಭಟ್ಕಳ: ಅಸೋಮ ರಾಜ್ಯದ ವ್ಯಕ್ತಿಯೋರ್ವ ಚಲಿಸುತ್ತಿರುವ ರೈಲಿನಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಮದ್ಯಾಹ್ನ ಬೆಂಗ್ರೆ ಕ್ಯಾಂಟೀನ್ ರೇಲ್ವೆ ಟ್ರಾಕ್ ಬಳಿ ನಡೆದಿದೆ. 35 ವರ್ಷದ ಈತ ಮಂಗಳೂರಿನಿಂದ ಅಸೋಮ್‌ಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದ್ದು, ಈತನಲ್ಲಿರುವ ಡೈರಿಯಲ್ಲಿ ಅಸೋಮ್ ಬರವಣಿಗೆ ಇರುವುದರಿಂದ ಈತ ಆ ರಾಜ್ಯದವನೆಂದು ಅಂದಾಜಿಸಲಾಗಿದೆ. ರೈಲು ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬಿದ್ದನೋ  ಅಥವಾ ಆತ್ಮಹತ್ಯೆ ಮಾಡಿಕೊಂಡನೋ ಎನ್ನುವುದು ತಿಳಿದು ಬರಬೇಕಾಗಿದೆ. ಮುರ್ಡೇಶ್ವರ ಠಾಣಾ ಪಿಎಸ್‌ಐ ಡಿ.ಆರ್. ಮಂಜಪ್ಪ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿವೇಕಾನಂದ ಜಯಂತಿ: ಮಾತೃ ಸಮಾವೇಶ
ಶಿರಸಿ: ಭಾರತ ಜಗತ್ತಿಗೆ ತಾಯಿ ಎಂದು ತಿಳಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ಮಾತೆಯರು ಸಮಾಜದ ಒಳಿತಿಗೆ ತಮ್ಮ ಕೊಡುಗೆ ನೀಡಬೇಕು. ಉತ್ತಮ ಸಂಸ್ಕಾರವಂತ, ಸುಸಂಸ್ಕೃತ ವ್ಯಕ್ತಿಗಳ ಸಮೂಹ ನಿರ್ಮಿಸುವಲ್ಲಿ ತಾಯಂದಿರ ಪಾತ್ರ ಹಿರಿದಾದುದು ಎಂದು ಕುಟುಂಬ ಪ್ರಬೋಧನ ಸಂಸ್ಥೆ ಹಿರಿಯ ಸು. ರಾಮಣ್ಣ ಹೇಳಿದರು. ಅವರು ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ನಡೆದ ಮಾತೃ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು. ಅತಿಥಿಗಳಾಗಿ ಸುನೀತಾ ಜಾಧವ ಆಗಮಿಸಿದ್ದರು. ಸುಲೋಚನಾ ಮಧ್ಯಸ್ಥ ಅದ್ಯಕ್ಷತೆ ವಹಿಸಿದ್ದರು. ನಗರದ ವಿವಿಧ ಪ್ರದೇಶಗಳ ಮಾತೃಮಂಡಳಿಗಳಿಂದ 125 ಮಾತೆಯರು ಪಾಲ್ಗೊಂಡಿದ್ದರು.
ಸಂಗೀತಕ್ಕೆ ಬಹುಮುಖ ಶಕ್ತಿ: ಬೀರಣ್ಣ ನಾಯಕ
ಯಲ್ಲಾಪುರ: ಸಂಗೀತ ಬಹುಮುಖ ಶಕ್ತಿಯ ಜೊತೆಗೆ ಆಕರ್ಷಣೆ ಹಾಗೂ ಚಿಕಿತ್ಸಕ ಶಕ್ತಿಯನ್ನೂ ಹೊಂದಿದೆ ಎಂದು ವೈಟಿಎಸ್‌ಎಸ್ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಹೇಳಿದರು.
ಪಟ್ಟಣದ ಕಾಳಮ್ಮನಗರದ ಶಾರದಾಗಲ್ಲಿಯಲ್ಲಿ ದರ್ಪಣ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಕಾವ್ಯ ಗಾಯನ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಲ್ಲಾಪುರ ತಾಲೂಕು ಕಲೆಗಳ ತವರು ನೆಲವಾಗಿದ್ದು, ಇಲ್ಲಿ ಕಂಡುಬರುವ ಸಂಗೀತ ಸಾಧಕರ ಸಾಧನೆಯಿಂದ ತಾಲೂಕು ಸಂಪದ್ಭರಿತವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಮೈಸೂರಿನ ನಿವಾಸಿ ಕವಿ ಪ್ರಸನ್ನ ಹೆಗಡೆ ಮಾತನಾಡಿ, ಕವಿ ಸಮಾಜದ ಇಂದ್ರಿಯವಾಗಿರಬೇಕು. ಸಾಹಿತ್ಯವು ಜನಸಾಮಾನ್ಯರ ಬದುಕಿಗೆ ಸ್ಪಂದಿಸುವಂತಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎನ್. ಗಾಂವ್ಕರ್ ಬೆಳ್ಳಿಪಾಲ ಹಾಗೂ ಅತಿಥಿಗಳಾಗಿದ್ದ ಡಾ. ಡಿ.ಕೆ. ಗಾಂವ್ಕರ್ ಸಾಂದರ್ಭಿಕವಾಗಿ ಮಾತನಾಡಿದರು. ಕಾವ್ಯ ಗಾಯನ ಸ್ಪರ್ಧೆಯಲ್ಲಿ ಹಿರಿಯ-ಕಿರಿಯ ವಿಭಾಗದ 22 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಿರಿಯರ ವಿಭಾಗದ ವಿಜೇತ ಭಟ್ಟ, ಗಿರೀಶ ಭಟ್ಟ, ಮೇಘಾ ಹೆಗಡೆ ಹಾಗೂ ಹಿರಿಯರ ವಿಭಾಗದ ಮಾಧವಿ ಭಟ್ಟ, ಪವಿತ್ರಾ ಭಟ್ಟ, ಸ್ವಾತಿ ಭಟ್ಟ ಅನುಕ್ರಮ ಸ್ಥಾನ ಗಳಿಸಿ ಬಹುಮಾನಿತರಾದರು. ನವ್ಯಾ ಭಾಗ್ವತ್ ಪ್ರಾರ್ಥಿಸಿದರು. ದರ್ಪಣ ಸೇವಾ ಸಂಸ್ಥೆಯ ಅಧ್ಯಕ್ಷೆ ಕವಿತಾ ಹೆಬ್ಬಾರ ಪ್ರಾಸ್ತಾವಿಕ ಮಾತನಾಡಿದರು. ನರಸಿಂಹ ಹೆಬ್ಬಾರ ಕಾರ್ಯಕ್ರಮ ನಿರ್ವಹಿಸಿದರು.
22ಕ್ಕೆ ಆಸ್ಪತ್ರೆ ಉದ್ಘಾಟನೆ
ಹುಬ್ಬಳ್ಳಿ: ಅತ್ಯಾಧುನಿಕ ಸೌಲಭ್ಯಗಳುಳ್ಳ ಸಮಾನ ಮನಸ್ಕ ವೈದ್ಯರು ಕೂಡಿಕೊಂಡು ಎಂ. ಟಿ. ಸಾಗರ ಕೈಗಾರಿಕಾ ವಲಯದ ಬಳಿ ಸ್ಥಾಪಿಸಿರುವ ಸುಸಜ್ಜಿತ ತತ್ವದರ್ಶ ಆಸ್ಪತ್ರೆಯ ಉದ್ಘಾಟನೆ ಫೆ. 12ರಂದು ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಸ್ಪತ್ರೆ ಚೇರ್‌ಮನ್, ನರರೋಗ ತಜ್ಞ ಡಾ. ಎಸ್.ಪಿ. ಬಳಿಗಾರ, 200 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ 36 ಸಾಮಾನ್ಯ, 24 ಎರಡು ಹಾಸಿಗೆಯ, 70 ಡಿಲೆಕ್ಸ್ ರೂಮ್‌ಗಳಿವೆಯಲ್ಲದೇ, ಒಟ್ಟು 5 ಶಸ್ತ್ರಚಿಕಿತ್ಸೆ ಅಪರೇಶನ್ ಥಿಯೇಟರ್‌ಗಳಿವೆ ಎಂದು ವಿವರಿಸಿದರು. ಕ್ಯಾಥ್‌ಲಾಬ್ ಮತ್ತು ಡಯಾಲಿಸಿಸ್ ಚಿಕಿತ್ಸೆಗಾಗಿ 16 ಹಾಸಿಗೆ, ಕಿಮೋಥೆರಪಿ ಚಿಕಿತ್ಸೆಗಾಗಿ 6 ಹಾಸಿಗೆಗಳನ್ನು ಕೂಡ ಒದಗಿಸಲಾಗಿದೆ. ಇದಲ್ಲದೆ ವಿವಿಧ ಬಗೆಯ ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳ ರೋಗ ಪತ್ತೆಗೆ ಅವಶ್ಯಕವಾದ ಸಿ.ಟಿ. ಸ್ಕ್ಯಾನ್, ಮಿಮೋಗ್ರಾಫಿ, ಎಕ್ಸ್-ರೆ, ಯುಸಿಜಿ ಮತ್ತು ಪ್ರಯೋಗಾಲಗಳಿವೆ. 24 ಗಂಟೆಗಳ ಕಾಲ ತೀವ್ರ ನಿಗಾಘಟಕ ಸೇವೆ, ಅಂಬ್ಯುಲೆನ್ಸ್, ತೀವ್ರ ಅಪಘಾತ ಮತ್ತು ತುರ್ತು ಸೇವೆಗಳ ಸೌಲಭ್ಯವೂ ಆಸ್ಪತ್ರೆ ಹೊಂದಿದೆ. ಹೆರಿಗೆ ಮತ್ತು ಪ್ರಸೂತಿ, ಎಲುಬು-ಕೀಲು, ನರರೋಗ, ಮೂತ್ರಪಿಂಡ ಹಾಗೂ ಕ್ಯಾನರ್ಸ್‌ನಂತಹ ಕಾಯಿಲೆಗಳಿಗೆ ಒಂದೆ ಸೂರಿನಡಿಯಲ್ಲಿ ಚಿಕಿತ್ಸೆ ನೀಡುವಂತಾಗಲು ಪ್ರಯತ್ನಿಸಲಾಗಿದೆ ಎಂದು ಬಳಿಗಾರ ತಿಳಿಸಿದರು. ಫೆ. 22ರಂದು ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆ ಉದ್ಘಾಟಿಸುವರು. ಮುಖ್ಯಅತಿಥಿಯಾಗಿ ಸಚಿವರಾದ ಎಚ್.ಕೆ. ಪಾಟೀಲ, ದಿನೇಶ ಗುಂಡೂರಾವ್, ಯು.ಟಿ. ಖಾದರ, ಡಾ. ಶರಣಪ್ರಕಾಶ ಪಾಟೀಲ, ಮಾಜಿ ಸಿಎಂ ಜಗದೀಶ ಶೆಟ್ಟರ್ ಪಾಲ್ಗೊಳ್ಳಲಿದ್ದಾರೆ. ಅತಿಥಿಯಾಗಿ ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ ಎಂದರು. ಡಾ. ಸಂಜೀವ ಕಳಸೂರ, ಡಾ. ಸಂಜೀವ ಕುಲಗೋಡ, ಡಾ. ಕಸ್ತೂರಿ ವಿ. ದೊಡ್ಡಮನಿ, ಡಾ. ಶೀತಲ ಕುಲಗೋಡ, ಡಾ.ಎ.ಎ. ಹೊಸಅಂಗಡಿ, ಡಾ. ರವೀಂದ್ರ ಇಳಿಗಾರ, ಡಾ. ರವಿ ನೇಮಗೌಡರ, ಡಾ. ರಾಜಶೇಖರ ಸಂಕಲ, ಡಾ. ವೆಂಕಟೇಶ ಮೋಗೇರ, ಡಾ. ಭರತ ಕ್ಷೇತ್ರಿ, ಡಾ. ಈಶ್ವರ ಹೊಸಮನಿ, ಡಾ. ಶ್ರಿನಿವಾಸ ಎಂ.ಎಚ್. ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.