ನೂತನ ನೀತಿ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಧಾರವಾಡ: ಬಿಸಿಎಂ ವಿದ್ಯಾರ್ಥಿಗಳನ್ನು ಶುಲ್ಕ ವಿನಾಯಿತಿಗೆ ಸಂಬಂಧಿಸಿದಂತೆ ಸರ್ಕಾರ ಜಾರಿ ಮಾಡಿರುವ ನೂತನ ನೀತಿ ಖಂಡಿಸಿ ಬುಧವಾರ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಗಂಗಾಧರ ಬಡಿಗೇರ, ಸರ್ಕಾರದ ಆದೇಶದ ಪ್ರಕಾರ ಬಿಸಿಎಂ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶುಲ್ಕ ವಿನಾಯಿತಿ ಇನ್ನು ಮುಂದೆ ರದ್ದಾಗುವುದರಿಂದ ಪೂರ್ಣ ಶುಲ್ಕ ಪಾವತಿಸುವ ಪರಿಸ್ಥಿತಿ ಬಂದಿದೆ. ವಿದ್ಯಾರ್ಥಿಗಳು ಪಾವತಿಸಿದ ಹೆಚ್ಚುವರಿ ಶುಲ್ಕವನ್ನು ನಗದು ವರ್ಗಾವಣೆ ಸೌಲಭ್ಯದಡಿ ಸರ್ಕಾರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ. ಶುಲ್ಕ ವಿನಾಯಿತಿಗೆ ವಿದ್ಯಾರ್ಥಿ ಮುಷ್ಕರಗಳಲ್ಲಿ ಭಾಗಿಯಾಗಿರಬಾರದು. ಎಲ್ಲ ವಿಷಯಗಳಲ್ಲಿ ತೇರ್ಗಡೆಯಾಗಬೇಕು. ಸರ್ಕಾರ ನಿಗದಿಪಡಿಸಿದಷ್ಟು ಶೇಕಡಾವಾರು ಅಂಕ ಪಡೆದಿರಬೇಕೆಂಬ ನಿಬಂಧನೆಗಳನ್ನು ಶುಲ್ಕ ವಿನಾಯಿತಿಗೆ ಸರ್ಕಾರ ವಿಧಿಸಿದೆ. ಎಐಡಿವೈಒ ಯುವಜನ ಸಂಘಟನೆ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ್, ಶರಣು ಗೋನವಾರ, ಅಕ್ಷಯ ತಳಕಲ್, ರಮೇಶ ಹೊಸಮನಿ, ಬಸವರಾಜ, ಸುನೀಲ್, ಮಂಜುನಾಥ ಪ್ರತಿಭಟನೆಯಲ್ಲಿದ್ದರು.
ಎಸ್ಎಫ್ಐ ಪ್ರತಿಭಟನೆ
ಧಾರವಾಡ: ಬಿಸಿಎಂ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗೆ ಅಂಕಗಳನ್ನು ಮಾನದಂಡ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು. ಇದೀಗ ಸರ್ಕಾರ ನೂತನ ನೀತಿ ಜಾರಿ ಮಾಡಿದ್ದು ಸಂವಿಧಾನಬಾಹಿರ. ಸರ್ಕಾರದ ಈ ನಿಲುವು ಪ್ರಶ್ನಿಸಿ ಮುಷ್ಕರ ನಡೆಸಿದರೆ ಅಂತಹ ವಿದ್ಯಾರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಹೇಳಿದೆ. ಕೂಡಲೇ ರಾಜ್ಯ ಸರ್ಕಾರ ಈ ಆದೇಶ ಕೈ ಬಿಡಬೇಕೆಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಈರಪ್ಪ ನಾಯ್ಕ, ಸಂದೀಪ ಕೊಳೋರಗಿ, ವಿಶಾಲ ಜೈನ್, ಸಂಪತ್ ಕುಮಾರ, ನಾಗರಾಜ ಗೋಕಾಕ, ಶಿವಕುಮಾರ ಪವಾರ ಇದ್ದರು.
ಶುಲ್ಕ ವಿನಾಯಿತಿ ನೂತನ ನೀತಿಗೆ ವಿರೋಧ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 19
ಬಿಸಿಎಂ ವಿದ್ಯಾರ್ಥಿಗಳನ್ನು ಶುಲ್ಕ ವಿನಾಯಿತಿ ಸೌಲಭ್ಯದಿಂದ ದೂರವಿಡುವ ಸರ್ಕಾರದ ಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ನಗರ ಘಟಕದ ಕಾರ್ಯಕರ್ತರು ಬುಧವಾರ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ, ಸರ್ಕಾರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶುಲ್ಕ ವಿನಾಯಿತಿ ರದ್ದಾಗಲಿದ್ದು, ವಿದ್ಯಾರ್ಥಿಗಳು ಪೂರ್ಣ ಶುಲ್ಕವನ್ನು ಪಾವತಿಸುವ ಪರಿಸ್ಥಿತಿ ಉಂಟಾಗಲಿದೆ. ಈ ಆದೇಶದಂತೆ ವಿದ್ಯಾರ್ಥಿಗಳು ಪಾವತಿಸಿದ ಹೆಚ್ಚುವರಿ ಶುಲ್ಕವನ್ನು ನಗದು ವರ್ಗಾವಣೆ ಸೌಲಭ್ಯದಡಿ ಸರ್ಕಾರವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ.
ರಾಜ್ಯ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಈ ಕಾಯ್ದೆ ರಾಜ್ಯದ ಬಡ, ಗ್ರಾಮೀಣ ಮತ್ತು ಮಧ್ಯಮ ವರ್ಗ ವಿದ್ಯಾರ್ಥಿಗಳಿಗ ನೇರ ದುಷ್ಪರಿಣಾಮ ಬೀರಲಿದೆ. ವಿದ್ಯಾರ್ಥಿಗಳು ಸರ್ಕಾರ ಮತ್ತು ಅನಾನುಕೂಲತೆಯಿಂದ ಕೂಡಿರುವ ಕಾಲೇಜುಗಳಲ್ಲಿಯೇ ಪ್ರವೇಶ ಪಡೆಯುತ್ತಾರೆ. ಈ ಕಾಲೇಜು ತರಗತಿಗಳು ನಿಯಮಿತವಾಗಿ ನಡೆಯಗಿರುವುದು, ಉಪನ್ಯಾಸಕರ ಕೊರತೆ, ಲ್ಯಾಬ್, ಪ್ರಾಯೋಗಿಕ ಉಪಕರಣಗಳ ಕೊರತೆ ಸೇರಿದಂತೆ ಮೂಲಸೌಕರ್ಯ ಕೊರತೆಯ ಮಧ್ಯದಲ್ಲಿ ಕೂಡ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.
ಹೀಗಾಗಿ ಸರ್ಕಾರ ಮೊದಲು ರಾಜ್ಯದ ಸರ್ಕಾರಿ ಕಾಲೇಜುಗಳು, ಅನಾನುಕೂಲತೆಯಿಂದ ಕೂಡಿರುವ ಕಾಲೇಜುಗಳಿಗೆ ಮೂಲ ಸೌಕರ್ಯ ನೀಡಿ ಕಾಲೇಜುಗಳ ಗುಣಮಟ್ಟಕ್ಕೆ ಎತ್ತರಿಸಿ ಈ ರೀತಿಯ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಸಿದ್ದು ಸಾಲಿಮಠ, ಸಂಚಿತ ಬುಳ್ಳಾನವರ, ಮನೋಹರ ಜಮಾದಾರ, ವೀರೇಶ ಹಿಪ್ಪರಗಿ, ಪ್ರಭು ಹುರಿಕಡ್ಲಿ, ಕಾರ್ತಿಕ ಬಿ., ಪ್ರಕಾಶ ಅಣ್ಣಿಗೇರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

