ನಾಳೆ ಪೊಲೀಸ್ ನಿರ್ಗಮನ ಪಥ ಸಂಚಲನ
ಧಾರವಾಡ: ಇಲ್ಲಿಯ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ತರಬೇತಿ ಶಾಲೆಯ 17ನೇ ತಂಡದ ಸಶಸ್ತ್ರ ಪೊಲೀಸ್ ಪಡೆಯ ನಿರ್ಗಮನ ಪಥ ಸಂಚಲನ ಫೆ. 24ರ ಸಂಜೆ 4ಕ್ಕೆ ನಡೆಯಲಿದೆ. ಬೆಂಗಳೂರು ತರಬೇತಿ ಪೊಲೀಸ್ ಮಹಾ ನಿರ್ದೇಶಕ ಸುಶಾಂತ ಮಹಾಪಾತ್ರ ಪಥ ಸಂಚಲನ ಪರಿವೀಕ್ಷಣೆ ನಡೆಸಿ ಬಹುಮಾನ ವಿತರಿಸಲಿದ್ದು, ಅತಿಥಿಗಳಾಗಿ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಭಾಸ್ಕರ್ ರಾವ್, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್. ಲೋಕೇಶ್ ಕುಮಾರ ಆಗಮಿಸುವರು.
26ಕ್ಕೆ ದಾರಾ ಶಿಖೊ
ಧಾರವಾಡ: ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ರಂಗಾಯಣ ಜಂಟಿಯಾಗಿ ಪ್ರಸಿದ್ಧ ಹಿಂದಿ ನಾಟಕ ಎಂ.ಎಸ್. ಸತ್ಯು ನಿರ್ದೇಶನದ ದಾರಾ ಶಿಖೊ ನಾಟಕ ಪ್ರದರ್ಶನ ಫೆ. 26ರಂದು ಸಂಜೆ 6.30ಕ್ಕೆ ನಡೆಯಲಿದೆ. ರು. 100 ಟಿಕೆಟ್ ದರ ನಿಗದಿ ಮಾಡಲಾಗಿದೆ. ಮೊ. 98454 47002 ಅಥವಾ 0836-2441706 ಸಂಪರ್ಕಿಸಬಹುದು.
ಪ್ರೋತ್ಸಾಹಧನ
ಧಾರವಾಡ: ಅಖಿಲ ಕರ್ನಾಟಕ ಲಿಂಗಾಯತ ಶಿವಸಿಂಪಿ ಸಮಾಜದ ಜಿಲ್ಲಾ ಘಟಕದ ವತಿಯಿಂದ ಮಾ. 23ರಂದು ಶಿವಸಿಂಪಿ ಸಮಾಜದ ಶಿವದಾಸಿಮಯ್ಯನವರ ಜಯಂತ್ಯುತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಶಿವಸಿಂಪಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಶೇ. 70ಕ್ಕಿಂತ ಮೇಲ್ಪಟ್ಟು ಅಂಕ ಪಡೆದ 2012-13 ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಡಿಪ್ಲೋಮಾ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳು ದಾಖಲೆಗಳೊಂದಿಗೆ ಮಾ. 13ರೊಳಗೆ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 93432 22071 ಸಂಪರ್ಕಿಸಬಹುದು.
ರಸ್ತೆ ದುರಸ್ತಿಗೆ ಆಗ್ರಹ
ಕುಂದಗೋಳ: ತಾಲೂಕಿನ ಗುಡಗೇರಿ-ಸಂಶಿ ರಸ್ತೆಯ ಮಧ್ಯದ ಎರಡನೇ ತಗ್ಗು ಎಂದು ಕರೆಯಲ್ಪಡುವ ಸ್ಥಳದಲ್ಲಿ ಅನೇಕ ರೀತಿಯ ಅಪಘಾತಗಳು ಸಂಭವಿಸುತ್ತಲೇ ಸಾಗಿದ್ದು, ತಕ್ಷಣ ಇಲ್ಲಿ ಕಿರು ಸೇತುವೆ ನಿರ್ಮಿಸಬೇಕು ಎಂದು ಶ್ರೀರಾಮಸೇನೆ ಮುಖಂಡ ವಿರೂಪಾಕ್ಷಗೌಡ ಹಿರೇಗೌಡರ ಆಗ್ರಹಿಸಿದ್ದಾರೆ. ಶ್ರೀಸಾಮಾನ್ಯರು ಜೀವ ಮುಷ್ಠಿಯಲ್ಲಿ ಹಿಡಿದುಕೊಂಡು ಈ ರಸ್ತೆ ಮೂಲಕ ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಈ ಕುರಿತಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು 20 ದಿನಗಳೊಳಗಾಗಿ ಈ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಬಸವನಗೌಡ ಸಿದ್ದನಗೌಡರ, ರಾಜು ಕರೆಹೊಳಲಪ್ಪನವರ, ರವಿ ನೆಗಳೂರು, ಬಸವರಾಜ ಕಮ್ಮಾರ, ಮಲ್ಲಿಕಾರ್ಜುನ ಸ್ವಾದಿ, ಶೇಖಪ್ಪ ಶ್ಯಾಗೋಟಿ ಎಚ್ಚರಿಸಿದ್ದಾರೆ.
ಶಾಲಾ ವಾರ್ಷಿಕೋತ್ಸವ
ಕಲಘಟಗಿ: ತಾಲೂಕಿನ ದೇವಿಕೊಪ್ಪ ಗ್ರಾಮದ ಜ್ಞಾನ ಭಾರತಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಇತ್ತೀಚಿಗೆ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಅಧ್ಯಕ್ಷ ಎಸ್.ಸಿ. ಅಗಡಿ, ಡಾ. ಬಿ.ಜಿ. ಬಿರಾದಾರ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರಷ್ಟೇ ಪಾಲಕರು ಜವಾಬ್ದಾರರು ಎಂದರು. ಮುಖ್ಯಶಿಕ್ಷಕಿ ರಾಜೇಶ್ವರಿ ಕಬನೂರ, ಗಜೇಂದ್ರ ಟೊಂಗಳೆ, ಜಿನೇಶ ಮಿರ್ಜಿ, ಫಕ್ಕಿರೇಶ ಕೆರಿಮಠ, ಸಂಗಪ್ಪ ಹಸಮನಿ, ಮಹಾದೇವ ನೂಲ್ವಿ ಮತ್ತಿತರರು ಇದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಹೊಲಿಗೆ ತರಬೇತಿಗೆ ಅರ್ಜಿ
ಹುಬ್ಬಳ್ಳಿ: ನಗರದ ಅಪರೇಲ್ ಟ್ರೇನಿಂಗ್ ಆ್ಯಂಡ್ ಡಿಸೈನ್ ಸೆಂಟರ್ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ವತಿಯಿಂದ ನಾಲ್ಕು ತಿಂಗಳ ಅವಧಿಯ ಗಾರಮೆಂಟ್ ಕನ್ಸಟ್ರಕ್ಷನ್ ಟೆಕ್ನಿಕ್ಸ್ ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಧಾರವಾಡ ಜಿಲ್ಲೆಯವರಾಗಿರಬೇಕು ಹಾಗೂ ಹಿಂದುಳಿದ ವರ್ಗದವರಾಗಿರಬೇಕು. 18ರಿಂದ 35 ವರ್ಷದವರಾಗಿದ್ದು, ಕನಿಷ್ಠ 8ನೇ ತರಗತಿ ಪಾಸಾಗಿರಬೇಕು. ಅಭ್ಯರ್ಥಿಗಳು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು. ಮಾಹಿತಿ ಹಾಗೂ ಅರ್ಜಿಗೆ ಅಪರೇಲ್ ಟ್ರೇನಿಂಗ್ ಆ್ಯಂಡ್ ಡಿಸೈನ್ ಸೆಂಟರ್-ಸ್ಮಾರ್ಟ್-ಹುಬ್ಬಳ್ಳಿ, ಎಟಿಎ ಕಾಂಪೌಂಡ್, ಕೆನರಾ ಹೋಟೆಲ್ ಹಿಂಭಾಗ, ಹೊಸೂರು ವೃತ್ತ, ಹುಬ್ಬಳ್ಳಿ (ದೂಸಂ 0836 2271137)ಗೆ ಸಂಪರ್ಕಿಸಲು ಹಾಗೂ ಮಾ. 8ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
ಧಾರವಾಡ: ಜಿಲ್ಲೆಯಲ್ಲಿರುವ ಆದರ್ಶ ವಿದ್ಯಾಲಯಗಳಲ್ಲಿ ಪ್ರಸಕ್ತ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಫೆ. 28ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಫೆ. 30ರಂದು ಬೆಳಗ್ಗೆ 10.30ರಿಂದ 12.30ರ ವರೆಗೆ ಪರೀಕ್ಷೆ ಜರುಗಲಿದೆ. ತಾಲೂಕಿನ ಶಾಲೆಗಳಲ್ಲಿ 5ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಆದರ್ಶ ವಿದ್ಯಾಲಯ ಇಲ್ಲವೆ ಬಿಇಓ ಕಚೇರಿಗಳಲ್ಲಿ ಅರ್ಜಿ ನಮೂನೆಗಳನ್ನು ಉಚಿತವಾಗಿ ಪಡೆದು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (ಗ್ರಾಮೀಣ ವಲಯ) ಶ್ರೀಶೈಲ ಕರಿಕಟ್ಟಿ ಅವರನ್ನು ಸಂಪರ್ಕಿಸಬಹುದು.
ಶಿಕ್ಷಕರ ಪತ್ತಿನ ಸಂಘಕ್ಕೆ ಆಯ್ಕೆ
ಧಾರವಾಡ: ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಲತಾ ಮುಳ್ಳೂರ ಗುಂಪಿನ ಎಲ್ಲ 11 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಝಾಕೀರ್ ಹುಸೇನ್ ಸುತಾರ, ಬಸವರಾಜ ಪಾಸಣ್ಣವರ, ಎಂ.ಆರ್. ಕುಬ್ಬೇರ್, ಮಹ್ಮದ್ ಸವಣೂರ, ರಮೇಶ ಲಿಂಗದಾಳ, ವೀರಯ್ಯ ಕಂಬಿ ಎಚ್.ಎಂ. ಕಂಬಿ, ಎಚ್.ಎಂ. ಶಿವಯೋಗಿ, ಬಿ.ಎಂ. ಕವಳಿಕಾಯಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಮಹಿಳಾ ಸ್ಥಾನಕ್ಕೆ ಲತಾ ಮುಳ್ಳೂರ, ಬಿ.ಎಸ್. ಯರಗಟ್ಟಿ, ಮೀಸಲು ಕ್ಷೇತ್ರಕ್ಕೆ ಮನೋರಮಾ ಸಂಬ್ರಾಣೆ ಚುನಾಯಿತರಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ.
ವಿದ್ಯಾಸಾಗರ ಶಾಲೆ ವಾರ್ಷಿಕೋತ್ಸವ
ಕಲಘಟಗಿ: ಪಟ್ಟಣದ ಎಸ್. ಲಾಡ್ ಸಭಾಭವನದಲ್ಲಿ ಜರುಗಿದ ವಿದ್ಯಾಸಾಗರ ಸ್ಕೂಲಿನ ವಾರ್ಷಿಕೊತ್ಸವವನ್ನ್ನು ಜಿಪಂ ಅಧ್ಯಕ್ಷ ಶಂಕರ ಅಗಡಿ ಉದ್ಘಾಟಿಸಿದರು. ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮಾತೃಭೂಮಿ ಸೇವಾ ಸಂಸ್ಥೆಯ ಜಯತೀರ್ಥ ಕಟ್ಟಿ, ಟಿ. ಪಿ. ಕೊಂಡಿ, ಸುಧೀಂದ್ರ ದೇಶಪಾಂಡೆ, ಶಾಲಾ ಆಡಾಳಿತಾಧಿಕಾರಿ ಸುನಿತಾ ಪಾಟಿಲ, ಅರುಣ ಪಾಟೀಲ, ಮುಖ್ಯೋಪಾಧ್ಯಾಪಕಿ ವಿಜಯಲಕ್ಷ್ಮಿ ಕಾಮಧೇನು, ಶಿಕ್ಷಕ ಸಿಬ್ಬಂದಿ, ಪುಷ್ಪಾ ಕಲಕರ್ಣಿ, ವಿದ್ಯಾರ್ಥಿಗಳು ಪಾಲಕರುಇದ್ದರು. ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳಾದ ಪೂಜಾ ಹೊಸಳ್ಳಿ, ಆಕಾಶ ಕುಂಬಾರ ನಿರ್ವಹಿಸಿದರು. ಶ್ರದ್ಧಾ ಬಡಿಗೇರ ಸ್ವಾಗತಿಸಿ, ಕಿರಣ ಮೊರಬದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

