'ಭಾರತ ಗೆಲ್ಲಿಸಿ' ರ್ಯಾಲಿಗೆ ಕ್ಷಣಗಣನೆ
ಹುಬ್ಬಳ್ಳಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ರ್ಯಾಲಿಗೆ ಕ್ಷಣಗಣನೆ ಆರಂಭಗೊಡಿದೆ.
ಹುಬ್ಬಳ್ಳಿ ಕುಸುಗಲ್ ರಸ್ತೆಯ ಆಕ್ಸ್ಫರ್ಡ್ ಕಾಲೇಜಿನ ಪಕ್ಕದ ಮೈದಾನದಲ್ಲಿ ಫೆ. 28ರಂದು ಮಧ್ಯಾಹ್ನ 4ಕ್ಕೆ ನಡೆಯಲಿರುವ 'ಭಾರತ ಗೆಲ್ಲಿಸಿ' ರ್ಯಾಲಿಯ ಸಿದ್ಧತೆಗಳು ಪೂರ್ಣಗೊಂಡಿವೆ.
ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಗೊಂಡ ನಂತರ ಇದೇ ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ನರೇಂದ್ರ ಮೋದಿ ಭಾಷಣ ಕೇಳಲು ಧಾರವಾಡ ಜಿಲ್ಲೆಯ ಜೊತೆಗೆ ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟ, ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರು ವಾಹನಗಳಲ್ಲಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿಯೂ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಆಟೋ ಹಾಗೂ ಮತ್ತಿತರ ವಾಹನಗಳಲ್ಲಿ ಕಳೆದ ಒಂದು ವಾರದಿಂದ ಪ್ರಚಾರ ಮಾಡಲಾಗುತ್ತಿದೆ.
ದೂರದೂರಿನ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಬೆಳಗ್ಗೆಯೇ ಬಸ್ ಹಾಗೂ ಮತ್ತಿತರ ವಾಹನಗಳಲ್ಲಿ ಹೊರಟಿದ್ದು, ರ್ಯಾಲಿ ಪ್ರಾರಂಭಗೊಳ್ಳುವ ಸಮಯದೊಳಗೆ ಹುಬ್ಬಳ್ಳಿ ತಲುಪಲಿದ್ದಾರೆ. ಅವಳಿ ನಗರದ ಪ್ರಮುಖ ಬಡಾವಣೆಗಳಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೆರವಣಿಗೆ ನಡೆಸುತ್ತಿದ್ದು, ಮೆರವಣಿಗೆ ಮೂಲಕವೇ ರ್ಯಾಲಿ ಸ್ಥಳ ತಲುಪಲಿದ್ದಾರೆ.
ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಈ ಹಿಂದೆ ಎಂದೂ ಕಾಣದ ಭದ್ರತೆ ಆಯೋಜಿಸಲಾಗಿದ್ದು, ಎಲ್ಲೆಡೆ ಪೊಲೀಸರು ಕಣ್ಗಾವಲಿಟ್ಟಿದ್ದಾರೆ. ನಿಗದಿಪಡಿಸಿರುವ ಸ್ಥಳದಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡಲು ನಾಮಫಲಕಗಳನ್ನೂ ಅಳವಡಿಸಲಾಗಿದೆ.
ಈ ಮಧ್ಯೆ ರ್ಯಾಲಿ ಮುನ್ನಾ ದಿನವಾದ ಗುರುವಾರ ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿ ಮೋದಿ ಭಾವಚಿತ್ರದ ಜೊತೆಗೆ 'ಮೋದಿ ಫಾರ್ ಪಿಎಂ' ಶೀರ್ಷಿಕೆಯುಳ್ಳ ದೊಡ್ಡ ಗಾತ್ರದ ಬಲೂನ್ಗಳನ್ನು ಹಾರಿಸಲಾಯಿತು. ಗುರುವಾರ ಸಂಜೆ ವಿವಿಧ ಪ್ರದೇಶಗಳಿಂದ ಬೈಕ್ ಮೂಲಕ ಸಾವಿರಾರು ಕಾರ್ಯಕರ್ತರು ಹುಬ್ಬಳ್ಳಿ ತಲುಪಿದ್ದು, ಶುಕ್ರವಾರವೂ ಬೈಕ್ ಮೂಲಕ ಕಾರ್ಯಕರ್ತರು ನಗರಕ್ಕೆ ಆಗಮಿಸುತ್ತಿದ್ದರು.
ಹುಬ್ಬಳ್ಳಿ-ಧಾರವಾಡದ ಪ್ರಮುಖ ಸ್ಥಳಗಳು ಸೇರಿದಂತೆ ಸಮೀಪದ ಗ್ರಾಮೀಣ ಪ್ರದೇಶದಿಂದ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳ ಅನುಕೂಲಕ್ಕಾಗಿ ಉಚಿತ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯ ಕುಸುಗಲ್ ರಸ್ತೆಯುದ್ದಕ್ಕೂ ಬಿಜೆಪಿ ಧ್ವಜ ಹಾಗೂ ಮೋದಿ ಭಾವಚಿತ್ರಗಳನ್ನು ಲಗತ್ತಿಸಲಾಗಿದೆ.
ಮೋದಿ ಭಾಷಣ ಕೇಳಲು ಹಾಗೂ ಮೋದಿ ಅವರನ್ನು ನೋಡಲು ಅನುಕೂಲವಾಗುವುದಕ್ಕಾಗಿ ರ್ಯಾಲಿ ನಡೆಯಲಿರುವ ಮೈದಾನದಲ್ಲಿ 13 ಹಾಗೂ ಶ್ರೀ ಸಿದ್ಧಾರೂಢ ಮಠದ ಸಮೀಪ 2 ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ.
ಒಟ್ಟಿನಲ್ಲಿ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಮಟ್ಟಿಗೆ 'ಭಾರತ ಗೆಲ್ಲಿಸಿ' ರ್ಯಾಲಿ ಮೈಲಿಗಲ್ಲೊಂದನ್ನು ಸೃಷ್ಟಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

