ಸಾಹಿತ್ಯ ಸಮ್ಮೇಳನ ಒಒಡಿ ದುರ್ಬಳಕೆಗೆ ಬ್ರೇಕ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 6
ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಅನ್ಯ ಕಾರ್ಯ ನಿಮಿತ್ತ 5 ದಿನಗಳವರೆಗೆ ರಜೆ (ಒಒಡಿ) ಪಡೆದು ಮೋಜು ಮಸ್ತಿ ಮಾಡುವ ಸರ್ಕಾರಿ ನೌಕರರಿಗೆ ಕಡಿಮೆಯಿದ್ದಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಮಡಿಕೇರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನೌಕರರ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಿದೆ.
ಇದೇ ಮೊಟ್ಟಮೊದಲ ಬಾರಿಗೆ ಒಒಡಿ ಫಾರ್ಮ್ ನೀಡುವುದು ಸೇರಿದಂತೆ ನಿಗದಿತ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುವ ಶಿಸ್ತು ಬದ್ಧ ವ್ಯವಸ್ಥೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಮಾಡಿದೆ. ಈ ಹಿಂದೆ ನಡೆದ ಬಹುತೇಕ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಜಿಲ್ಲೆಯ ಸರ್ಕಾರಿ ನೌಕರರು ನೇರವಾಗಿ ಸಮ್ಮೇಳನ ನಡೆಯುವಲ್ಲಿಗೆ ಹೋಗಿ ಪ್ರತಿನಿಧಿ ಶುಲ್ಕ ಕೊಟ್ಟು ಕಿಟ್ ಹಾಗೂ ಒಒಡಿ ಫಾರ್ಮ್ ಪಡೆದುಕೊಳ್ಳುತ್ತಿದ್ದರು. ಆದರೆ, ಈ ಪೈಕಿ ಬಹುಪಾಲು ನೌಕರರು ಮೂರು ದಿನಗಳ ಕಾಲ ಸಮ್ಮೇಳನಕ್ಕೆ ಹಾಜರಾಗದೇ 5 ದಿನಗಳ ಅನ್ಯ ಕಾರ್ಯ ನಿಮಿತ್ತ ರಜೆಯ ಫಾರ್ಮ್ ಪಡೆದು ಸಮ್ಮೇಳನದಿಂದ ಕಾಲ್ಕೀಳುತ್ತಿದ್ದರು. ಅಲ್ಲಿಂದ ರಜೆಯ ಮಜಾ ಅನುಭವಿಸಲು ಬಂಧು-ಮಿತ್ರರೊಂದಿಗೆ ಪ್ರವಾಸಿ ತಾಣ ಸೇರಿಕೊಳ್ಳುತ್ತಿದ್ದರು.
ಪ್ರತಿ ಸಮ್ಮೇಳನದಲ್ಲೂ ಗದ್ದಲ: ಈ ಹಿಂದಿನ ಎಲ್ಲ ಸಮ್ಮೇಳನಗಳನ್ನು ಮೆಲಕು ಹಾಕಿದಾಗ ಒಒಡಿ ಫಾರ್ಮ್ಗಾಗಿ ಸರ್ಕಾರಿ ನೌಕರರು ಗಲಾಟೆ ಮಾಡಿದ್ದು ಕಂಡು ಬರುತ್ತದೆ. ಬಿಜಾಪುರದಲ್ಲಿ ನಡೆದ ಸಮ್ಮೇಳನದಲ್ಲಿಯೂ ಪ್ರಥಮ ದಿನವೇ ಒಒಡಿ ಫಾರ್ಮ್ ನೀಡಬೇಕೆಂದು ನೌಕರರು ಗಲಾಟೆ ಮಾಡಿದ್ದರು. ಸಂಘಟಕರು ಕೊನೆಯ ದಿನ ಒಒಡಿ ಫಾರ್ಮ್ ನೀಡುತ್ತೇನೆಂದರೂ ನೌಕರರು ಸುತಾರಾಂ ಒಪ್ಪಲಿಲ್ಲ.
ಏನಿದು ಒಒಡಿ ಫಾರ್ಮ್?: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸರ್ಕಾರಿ ನೌಕರರಿಗೆ ಅನ್ಯ ಕಾರ್ಯ ನಿಮಿತ್ತ ರಜೆಯ ಅವಕಾಶವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ಆದರೆ, ಈ ರಜೆಯ ಸೌಲಭ್ಯ ಪಡೆಯಬೇಕಾದರೆ ಸಮ್ಮೇಳನದಲ್ಲಿ ಪಾಲ್ಗೊಂಡ ಬಗ್ಗೆ ಸಾಹಿತ್ಯ ಪರಿಷತ್ ನೀಡುವ ಮೂಲ ಒಒಡಿ ಫಾರ್ಮ್ ಕಡ್ಡಾಯವಾಗಿ ನೌಕರರು ಕಚೇರಿಗೆ ಸಲ್ಲಿಸಬೇಕು. ಸಮ್ಮೇಳನಕ್ಕೆ ಬಂದ ನೌಕರರು ಮೊದಲ ದಿನವೇ ಒಒಡಿ ಫಾರ್ಮ್ ಪಡೆದು ಸಮ್ಮೇಳನದಿಂದ ಜಾಗ ಖಾಲಿ ಮಾಡುತ್ತಿದ್ದರು.
ಜಿಲ್ಲಾ ಸಮಿತಿಗೆ ಜವಾಬ್ದಾರಿ: ಆದರೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪ್ರತಿನಿಧಿಗಳಾಗಿ ಆಗಮಿಸುವ ನೌಕರರು ಕಡ್ಡಾಯವಾಗಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ನಿಗಾ ವಹಿಸಿದೆ. ಜತೆಗೆ ನಿಗದಿತ ಸಂಖ್ಯೆಯಲ್ಲಿ ಮಾತ್ರ ನೌಕರರು ಪಾಲ್ಗೊಳ್ಳುವಂತೆ ಶಿಸ್ತುಬದ್ಧ ವ್ಯವಸ್ಥೆ ಮಾಡಿದೆ.
ಕೇಂದ್ರ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯಾ ಜಿಲ್ಲೆಯ ಜವಾಬ್ದಾರಿ ವಹಿಸಿದೆ. ಡಿ. 15ರೊಳಗೆ ಪ್ರತಿನಿಧಿಗಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ತಿಳಿಸಿದ್ದಲ್ಲದೇ, ಪ್ರತಿ ಜಿಲ್ಲೆಯಿಂದ ಸರಿಸುಮಾರು 300ರ ಆಸುಪಾಸು ಪ್ರತಿನಿಧಿಗಳು ಮಾತ್ರ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಆಗಮಿಸಬಹುದು ಎಂದು ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ನೋಂದಣಿ ಮಾಡಿಕೊಂಡು ಪ್ರತಿನಿಧಿ ಶುಲ್ಕವನ್ನೂ ಜಿಲ್ಲಾ ಸಮಿತಿಯೇ ಸಂಗ್ರಹಿಸಿದೆ. ನೋಂದಣಿ ಮಾಡಿಕೊಂಡ ಪ್ರತಿನಿಧಿಗಳಿಗೆ ಸಮ್ಮೇಳನದಲ್ಲಿಯೇ ಕಿಟ್ ಸಿಗಲಿದೆ.
ಆದರೆ ಓಓಡಿ ಫಾರ್ಮ್ ಮಾತ್ರ ಸಮ್ಮೇಳನದ ಕೊನೆ ದಿನ ವಿತರಿಸಲಾಗುತ್ತದೆ. ಕೇಂದ್ರ ಸಮಿತಿ ಒಒಡಿ ಫಾರ್ಮ್ ಜ. 9ರಂದು ಜಿಲ್ಲಾ ಸಮಿತಿ ಅಧ್ಯಕ್ಷರಿಗೆ ನೀಡಲಿದೆ, ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರಿಗೆ ಫಾರ್ಮ್ ಹಸ್ತಾಂತರಿಸಲಿದ್ದಾರೆ.
ಸಂಘಟಕರಿಗೆ ಅನುಕೂಲ: ಈ ನೂತನ ವ್ಯವಸ್ಥೆಯಿಂದಾಗಿ ಸಂಘಟಕರಿಗೆ ಎಷ್ಟು ಪ್ರತಿನಿಧಿಗಳು ಆಗಮಿಸುತ್ತಾರೆಂಬ ಲೆಕ್ಕ ಈಗಾಗಲೇ ಸಿಕ್ಕಿದೆ. ಹೀಗಾಗಿ ಅಚ್ಚುಕಟ್ಟು ವ್ಯವಸ್ಥೆ ಮಾಡಲು ಅವರಿಗೆ ಅನುಕೂಲವಾಗಿದೆ. ಜತೆಗೆ ಪ್ರತಿ ಸಮ್ಮೇಳನದಲ್ಲಿ ಒಒಡಿ ಫಾರ್ಮ್ಗಾಗಿ ನಡೆಯುತ್ತಿದ್ದ ಕಿತ್ತಾಟಕ್ಕೆ ಕಡಿವಾಣ ಬೀಳಲಿದೆ ಹಾಗೂ ಸಮ್ಮೇಳನದ ಹೆಸರಲ್ಲಿ ನೌಕರರು ಮಾಡುತ್ತಿದ್ದ ಮೋಜು ಮಸ್ತಿಗೂ ಬ್ರೇಕ್ ಬೀಳಲಿದೆ.
- ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

