ಸಮಸ್ಯೆಗಳ ಆಗರ ಅಳ್ನಾವರ ರೈಲು ನಿಲ್ದಾಣ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 21
ಇತ್ತೀಚಿನ ವರ್ಷಗಳಲ್ಲಿ ರೈಲು ನಿಲ್ದಾಣಗಳು ಆಧುನಿಕ ಸ್ಪರ್ಶ ಪಡೆದುಕೊಳ್ಳುತ್ತಿದ್ದರೂ ಸುಮಾರು 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ, ನೂತನ ತಾಲೂಕು ಎಂದು ಘೋಷಣೆಯಾಗಿರುವ ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿನ ರೈಲು ನಿಲ್ದಾಣ ಮಾತ್ರ ಅವ್ಯವಸ್ಥೆಯ ಆಗರವಾಗಿದೆ.
ರೈಲು ನಿಲ್ದಾಣ ಮೂಲ ಸೌಕರ್ಯಗಳಿಂದ ನಲಗುತ್ತಿದ್ದು, ಸ್ಥಳೀಯ ಹಾಗೂ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ. ಅನೇಕ ವರ್ಷಗಳಿಂದ ಈ ನಿಲ್ದಾಣವನ್ನು ಸುಧಾರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ರೇಲ್ವೆ ಇಲಾಖೆ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ನಿಲ್ದಾಣ ಪೂರ್ತಿ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ.
ಸಮಸ್ಯೆಗಳೇನು?: ಅಳ್ನಾವರ ಸೇರಿದಂತೆ ಬೆಳಗಾವಿ ಜಿಲ್ಲೆಯ ಖಾನಾಪುರ, ಬೈಲಹೊಂಗಲ ಮತ್ತು ಕಾರವಾರ ಜಿಲ್ಲೆಯ ಹಳಿಯಾಳ, ಯಲ್ಲಾಪುರ ತಾಲೂಕುಗಳ ಸುಮಾರು ಐವತ್ತು ಕಿ.ಮೀ. ವ್ಯಾಪ್ತಿಯ ಜನರು ಪ್ರಯಾಣಕ್ಕಾಗಿ ಅಳ್ನಾವರ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಕಟ್ಟಿಗೆ ವ್ಯಾಪಾರ ಜೋರಾಗಿಯೇ ನಡೆಯುತ್ತದೆ. ಪ್ರಯಾಣಿಕರ ಬೇಡಿಕೆ ಹಾಗೂ ಸಂಖ್ಯೆಗೆ ಅನುಗುಣವಾಗಿ ಇಲ್ಲಿ ರೈಲುಗಳ ಲಭ್ಯತೆ ಇಲ್ಲ. ಕೆಲವೇ ಕೆಲ ರೈಲುಗಳನ್ನು ಹೊರತುಪಡಿಸಿದರೆ ಜೋಧಪುರ, ಅಜ್ಮೀರ, ಗಾಂಧಿಧಾಮ ಹಾಗೂ ಇನ್ನಿತರ ಪ್ರಮುಖ ರೈಲುಗಳು ಅಳ್ನಾವರದಲ್ಲಿ ನಿಲುಗಡೆಗೊಳ್ಳುವುದಿಲ್ಲ. ಹೀಗಾಗಿ ಗುಜರಾತಿಗೆ ಹೋಗುವ ಪ್ರಯಾಣಿಕರು 50 ಕಿ.ಮೀ. ದೂರದ ಧಾರವಾಡ ಅಥವಾ ಲೋಂಡಾ ನಿಲ್ದಾಣಕ್ಕೆ ಹೋಗುವ ಸ್ಥಿತಿ ಇದೆ.
ಪ್ಯಾಸೆಂಜರ್ ರೈಲು ಬೇಕು: ಹುಬ್ಬಳ್ಳಿಯಲ್ಲಿಯೇ ಕೇಂದ್ರ ಕಚೇರಿ ಹೊಂದಿರುವ ನೈಋತ್ಯ ರೇಲ್ವೆಯ ಸುಮಾರು 50 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ನಿಲ್ದಾಣ ರೇಲ್ವೆ ಇಲಾಖೆ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ. ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೆಸರಿಗೆ ಮಾತ್ರ ಕಾಯುವ ಕೋಣೆ ಇದ್ದು, ಯಾವತ್ತೂ ಬೀಗ ಹಾಕಿರುತ್ತದೆ. ಮಹಿಳೆಯರು, ಮಕ್ಕಳು ರಾತ್ರಿ ಸಮಯ ರೈಲು ತಪ್ಪಿಸಿಕೊಂಡಾಗ ನಿಲ್ದಾಣದ ಹೊರ ಆವರಣದಲ್ಲಿಯೇ ಮಲಗುವ ಸ್ಥಿತಿ ಇದೆ. ನಾಲ್ಕೈದು ಟ್ರ್ಯಾಕ್ ಇದ್ದರೂ ಮೇಲು ಸೇತುವೆ ಇಲ್ಲದ್ದರಿಂದ ರೈಲು ಹಳಿಗಳ ಮೇಲೆಯೇ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಬೇಕಾದ ಸ್ಥಿತಿಯೂ ಇಲ್ಲಿದೆ. ಬೆಂಗಳೂರು, ಚೆನ್ನೈ, ಮಹಾರಾಷ್ಟ್ರ, ಗೋವಾ ಕಡೆಗೆ ಹೆಚ್ಚಿನ ಸಂಖ್ಯೆಯ ಜನ ಇಲ್ಲಿಂದ ಪ್ರಯಾಣಿಸುತ್ತಿದ್ದು, ರೈಲು ಸೇವೆಗಳು ತೀರ ಕಡಿಮೆ ಇದೆ.
ಒಂದೇ ಕೌಂಟರ್: ರೈಲು ಬರುವ ಹಾಗೂ ಹೋಗುವ ಸಮಯ, ರೈಲುಗಳ ಮಾಹಿತಿ ಕೇಳಲು ಇಲ್ಲಿ ವ್ಯವಸ್ಥೆ ಇಲ್ಲ ಎಂಬ ಆರೋಪವೂ ಪ್ರಯಾಣಿಕರದ್ದು. ಇರುವ ಒಂದೇ ಕೌಂಟರ್ನಲ್ಲೇ ಸಾಮಾನ್ಯ ಟಿಕೆಟ್, ಕಾಯ್ದಿರುವ ಟಿಕೆಟ್ ಹಾಗೂ ಪಾರ್ಸಲ್ ಟಿಕೆಟ್ ಸಹ ಪಡೆಯಬೇಕು. ಹೀಗಾಗಿ ಬೇಗ ಟಿಕೆಟ್ ಸಿಗದೇ ಕೌಂಟರ್ ಸಿಬ್ಬಂದಿ ಜೊತೆ ಪ್ರಯಾಣಿಕರ ಜಗಳ ಸಾಮಾನ್ಯದ ಸಂಗತಿ. ಸರದಿಯಲ್ಲಿ ನಿಂತು ಟಿಕೆಟ್ ಸಿಗದೇ ರೈಲು ತಪ್ಪಿಸಿಕೊಂಡ ಉದಾಹರಣೆಗಳಿಗೇನೂ ಕಮ್ಮಿ ಇಲ್ಲ. ಈ ನಿಲ್ದಾಣದಿಂದ ವ್ಯಾಪಾರಸ್ಥರು ಹಾಗೂ ಬಡ ಜನರೇ ಜಾಸ್ತಿ ಪ್ರಯಾಣಿಸುತ್ತಾರೆ. ಈ ಮಾರ್ಗದಿಂದ ನಿತ್ಯ ಸಾಕಷ್ಟು ಆದಾಯವಿದ್ದು, ಸೌಲಭ್ಯಗಳನ್ನು ಇನ್ನಷ್ಟು ಕಲ್ಪಿಸಿದರೆ ಇಲಾಖೆಗೆ ಆದಾಯವೂ ಹೆಚ್ಚುತ್ತದೆ. ಪ್ರಯಾಣಿಕರು ನೆಮ್ಮದಿಯಿಂದ ಪ್ರಯಾಣಿಸುತ್ತಾರೆ. ಇಲಾಖೆ ಅಧಿಕಾರಿಗಳು ಆದಷ್ಟು ಶೀಘ್ರ ಈ ನಿಲ್ದಾಣಕ್ಕೆ ಕಾಯಕಲ್ಪ ಒದಗಿಸಬೇಕಾದ ಅನಿವಾರ್ಯತೆ ಇದೆ ಎಂಬುದು ಸಾರ್ವಜನಿಕರ ಒತ್ತಾಯ.
-ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

