ಧಾರವಾಡ

ಸೊರಗಿದೆ ಇನ್ಫೋಸಿಸ್ ಧರ್ಮಶಾಲಾ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 17
ಒಂದಲ್ಲ ಎರಡಲ್ಲ ಬರೋಬ್ಬರಿ ರು. 6 ಕೋಟಿ ಖರ್ಚು ಮಾಡಿ ಕಿಮ್ಸ್ ಆವರಣದಲ್ಲಿ 'ಇನ್ಫೋಸಿಸ್ ಫೌಂಡೇಶನ್ ಧರ್ಮಶಾಲಾ' ನಿರ್ಮಿಸಲಾಗಿದ್ದರೂ ಉದ್ದೇಶ ಮಾತ್ರ ಈಡೇರಿಲ್ಲ.
ಹೌದು, ಕಿಮ್ಸ್ ಅಧಿಕಾರಿ, ಆಡಳಿತ ಮಂಡಳಿಯ ನಿರ್ಲಕ್ಷ್ಯವೋ ಅಥವಾ ಬದಲಾವಣೆಗೆ ಒಗ್ಗಿ ಕೊಳ್ಳದ ಜನರಿಂದಾಗಿಯೋ ಇನ್ಫೋಸಿಸ್ ಧರ್ಮಶಾಲಾ ನಿರ್ಮಾಣದ ಘನ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಧರ್ಮಶಾಲೆಯ ಉಪಯೋಗ ಪಡೆಯುವವರೇ ಇಲ್ಲವಾಗಿದ್ದಾರೆ. ಬಡಬಗ್ಗರಿಗಾಗಿ ಇಂಥದೊಂದು ಸೌಲಭ್ಯವಿದ್ದರೂ ಅದರ ಸದ್ಬಳಕೆಯಾಗದಿರುವುದು ದುರಂತ.
ರು. 6 ಕೋಟಿಯ ಕಟ್ಟಡ: ಬೆಂಗಳೂರಿನ ಕಿದ್ವಾಯಿ ಹಾಗೂ ನಿಮ್ಹಾನ್ಸ್ ಮಾದರಿಯಾಗಿಟ್ಟುಕೊಂಡು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಇನ್ಫೋಸಿಸ್ ಫೌಂಡೇಶನ್ ಧರ್ಮಶಾಲೆ ನಿರ್ಮಿಸಿತ್ತು. ಕಳೆದ ಮೇ 2012ರಲ್ಲಿ ಇನ್ಫೋಸಿಸ್ ಫೌಂಡೇಶನ್ ಧರ್ಮಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿತ್ತು. ಈ ಕಟ್ಟಡ 2014ರಲ್ಲಿ ಉದ್ಘಾಟನೆಯೂ ಆಗಿತ್ತು. ಈ ಕಟ್ಟಡಕ್ಕಾಗಿ ರು. 6 ಕೋಟಿ ವೆಚ್ಚ ಮಾಡಲಾಗಿದೆ.
ರೋಗಿಗಳ ಸಂಬಂಧಿಕರು ಕಡಿಮೆ ಖರ್ಚಿನಲ್ಲಿ ಇಲ್ಲಿ ಉಳಿದುಕೊಳ್ಳಲಿ ಎನ್ನುವ ಉದ್ದೇಶದಿಂದ ಧರ್ಮಶಾಲಾ ನಿರ್ಮಿಸಲಾಗಿತ್ತು. ಕಿಮ್ಸ್ ಧರ್ಮ ಶಾಲೆಯಲ್ಲಿ 180 ಜನ ಉಳಿದುಕೊಳ್ಳುವ ವ್ಯವಸ್ಥೆ ಇದೆ. 10 ಡಾರ್‌ಮೆಟ್ರಿಗಳಿದ್ದು ಪ್ರತಿಯೊಂದು ಡಾರ್‌ಮೆಟ್ರಿಗಳಲ್ಲಿ 8 ಮಂದಿ ಉಳಿದುಕೊಳ್ಳಬಹುದು. 20 ಡಬಲ್ ಬೆಡ್ ರೂಮ್‌ಗಳಿವೆ.
ಇವುಗಳಲ್ಲಿ ಮಂಚ, ಹಾಸಿಗೆ ಹಾಗೂ ಲಾಕರ್ ಸೌಲಭ್ಯವಿದೆ. ಸುಸಜ್ಜಿತ ಸ್ನಾನ ಗೃಹ ಹೊಂದಿದ್ದು ಗೀಸರ್ ಅಳವಡಿಸಲಾಗಿದೆ. ರು. 5ರಿಂದ ರು. 25 ವರೆಗೆ ಮಾತ್ರ ದಿನ ಬಾಡಿಗೆ ಇದೆ. ಇಷ್ಟಿದ್ದಾಗಿಯೂ ಧರ್ಮಶಾಲೆಗೆ ರೋಗಿಗಳ ಸಂಬಂಧಿಕರು ಬರುತ್ತಿಲ್ಲ.
2 ತಿಂಗಳಲ್ಲಿ ಹತ್ತೇ ಜನ: ಕನಿಷ್ಠ 180 ಜನ ಉಳಿದುಕೊಳ್ಳಲು ಧರ್ಮಶಾಲೆಯಲ್ಲಿ ವ್ಯವಸ್ಥೆಯಿದ್ದರೂ ಕಳೆದ ಎರಡು ತಿಂಗಳ ಅವಧಿಯಲ್ಲಿ ಕೇವಲ ಹತ್ತೇ ಮಂದಿ ರೋಗಿಗಳ ಸಂಬಂಧಿಕರು ಧರ್ಮಶಾಲೆಯಲ್ಲಿ ಉಳಿದುಕೊಂಡಿದ್ದಾರೆ. ಇದೇ ಸ್ಥಿತಿ ಮುಂದುವರಿದಲ್ಲಿ ಧರ್ಮಶಾಲೆಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಕಾಡಲಿದೆ.
ಕೇರ್‌ಟೇಕರ್ ನೇಮಿಸಿಲ್ಲ: ಧರ್ಮಶಾಲೆ ಉದ್ಘಾಟನೆಯಾದ ಕೂಡಲೇ ಇನ್ಫೋಸಿಸ್ ಫೌಂಡೇಶನ್ ಅದನ್ನು ಕಿಮ್ಸ್‌ಗೆ ಹಸ್ತಾಂತರಿಸಿದೆ. ಹೀಗಾಗಿ ಧರ್ಮಶಾಲಾ ನಿರ್ವಹಣೆ, ಅಭಿವೃದ್ಧಿ ಎಲ್ಲ ಹೊಣೆಯೂ ಕಿಮ್ಸ್ ಹೆಗಲಿಗಿದೆ. ಹೀಗಿರುವಾಗ ಧರ್ಮಶಾಲೆಗೆ ಕೇರ್‌ಟೇಕರ್ ನೇಮಿಸುವ ಕೆಲಸ ಕಿಮ್ಸ್ ನಿರ್ದೇಶಕರು ಮಾಡಬೇಕಿತ್ತು. ಆದರೆ ಈವರೆಗೂ ಧರ್ಮಶಾಲೆಗೆ ಕೇರ್‌ಟೇಕರ್ ನೇಮಕ ಮಾಡಿಲ್ಲ. ಕನಿಷ್ಠ ಪಕ್ಷ ಓರ್ವ ಕ್ಲರ್ಕ್‌ನನ್ನೂ ನೇಮಕ ಮಾಡಿಲ್ಲ. ಪ್ರಸ್ತುತ ಇಲ್ಲಿನ ಭದ್ರತಾ ಸಿಬ್ಬಂದಿಯೇ ಎಲ್ಲ ಜವಾಬ್ದಾರಿ ನಿರ್ವಹಿಸುವಂತಾಗಿರುವುದು ದೌರ್ಭಾಗ್ಯ.
ಧರ್ಮಶಾಲೆಯ ನಿರ್ವಹಣೆಯ ಜವಾಬ್ದಾರಿಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಶ್ರೀನಿವಾಸ ಹಾಗೂ ರಮೇಶ ಅವರನ್ನು ನೇಮಿಸಲಾಗಿದೆ. ಕಿಮ್ಸ್ ಕಡೆಯಿಂದ ನಿರ್ದೇಶಕ, ಮೆಡಿಕಲ್ ಸೂಪರಿಟೆಂಡೆಂಟ್, ಪೆಥಾಲಜಿ ವಿಭಾಗದ ಮುಖ್ಯಸ್ಥರು ಸಮಿತಿಯಲ್ಲಿದ್ದಾರೆ. ಕೇರ್‌ಟೇಕರ್ ನೇಮಿಸುವುದು ಸೇರಿದಂತೆ ಮತ್ತಿತರ ಕೆಲಸ ಕಿಮ್ಸ್ ನಿರ್ದೇಶಕರದ್ದು. ಆದರವರು ಈ ಕಾರ್ಯಕ್ಕೆ ಮುಂದಾಗಿಲ್ಲ.
ಜಾಗ ಸಿಕ್ಕಲ್ಲಿ ನಿದ್ದೆ; ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಕಿಮ್ಸ್‌ನಲ್ಲಿ ಧರ್ಮಶಾಲಾ ಇದ್ದರೂ ರೋಗಿಗಳ ಸಂಬಂಧಿಕರು ಇದರ ಸೌಲಭ್ಯ ಮಾತ್ರ ಪಡೆಯುತ್ತಿಲ್ಲ. ಕಿಮ್ಸ್ ಆವರಣದಲ್ಲಿ ಸಿಕ್ಕಸಿಕ್ಕಲ್ಲಿ ಮಲಗುವ ದೃಶ್ಯ ಇಂದಿಗೂ ಕಾಣಿಸುತ್ತದೆ. ಕೇವಲ ರು. 5 ಕೊಟ್ಟು ಸುಸಜ್ಜಿತ ವ್ಯವಸ್ಥೆ ಪಡೆಯಲು ಸಿದ್ಧರಿಲ್ಲ. ಇದರೊಟ್ಟಿಗೆ ಅದೆಷ್ಟೋ ರೋಗಿಗಳ ಸಂಬಂಧಿಕರಿಗೆ ಕಿಮ್ಸ್‌ನಲ್ಲಿ ಧರ್ಮಶಾಲಾ ವ್ಯವಸ್ಥೆ ಇದೆ ಎಂಬುದೇ ಗೊತ್ತಿಲ್ಲ. ಕಿಮ್ಸ್ ಆವರಣದಲ್ಲಿ ಕಣ್ಣಿಗೆ ಕಾಣುವ ಹಾಗೆ ಧರ್ಮಶಾಲೆಯ ಬಗ್ಗೆ ಯಾವುದೇ ಮಾಹಿತಿ ಫಲಕ ಅಳವಡಿಸಿಲ್ಲ. ಹೀಗಿದ್ದಾಗ ಸೌಲಭ್ಯವಿದ್ದರೂ ಗಮನಕ್ಕೆ ಬಾರದೆ ರೋಗಿಗಳ ಸಂಬಂಧಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಕಿಮ್ಸ್ ಆವರಣದಲ್ಲಿ ಜನ ಅಲ್ಲಲ್ಲಿ ನಿದ್ರೆ ಮಾಡಿ ಅವ್ಯವಸ್ಥೆಯನ್ನುಂಟು ಮಾಡುತ್ತಿದ್ದರೂ ಕಿಮ್ಸ್ ಭದ್ರತಾ ಸಿಬ್ಬಂದಿ ಮಾತ್ರ ಕಂಡೂ ಕಾಣದಂತಿರುತ್ತಾರೆ. ಇಂತವರಿಗೆ ನಿದ್ರೆಯಿಂದ ಎಬ್ಬಿಸಿ ಧರ್ಮಶಾಲೆಯ ಲಾಭ ಪಡೆದುಕೊಳ್ಳುವಂತೆ ತಿಳಿಹೇಳುವುದೂ ಇಲ್ಲ.
ನಿರ್ಲಕ್ಷ್ಯತನ ಬೇಡ: ಬಡಬಗ್ಗರಿಗೆ ನೆರವಾಗಲಿ ಎನ್ನುವ ಘನ ಉದ್ದೇಶದಿಂದೇನೋ ಇನ್ಫೋಸಿಸ್ ಫೌಂಡೇಶನ್ ರು. 6 ಕೋಟಿ ಖರ್ಚು ಮಾಡಿ ಧರ್ಮಶಾಲಾ ನಿರ್ಮಿಸಿಕೊಟ್ಟಿದೆ. ಆದರೆ ಪ್ರಮುಖವಾಗಿ ಕಿಮ್ಸ್ ಆಡಳಿತ ಸಿಬ್ಬಂದಿಯ ಮೈಗಳ್ಳತನದಿಂದಾಗಿ ಧರ್ಮಶಾಲೆಯ ಬಳಕೆ ಸರಿಯಾಗಿ ಆಗುತ್ತಿಲ್ಲ. ಕಿಮ್ಸ್ ನಿರ್ದೇಶಕ ಡಾ. ಯು.ಎಸ್. ಹಂಗರಗಾ ಮುತುವರ್ಜಿ ವಹಿಸಿ ಕೇರ್‌ಟೇಕರ್ ನೇಮಿಸುವುದು ಸೇರಿದಂತೆ ಧರ್ಮಶಾಲೆ ಸದ್ಭಳಕೆಗೆ ಒತ್ತು ನೀಡಬೇಕಿದೆ. ಇಲ್ಲದೇ ಹೋದಲ್ಲಿ ಕೋಟ್ಯಂತರ ರುಪಾಯಿ ವೆಚ್ಚದ ಕಟ್ಟಡ ಭೂತ ಬಂಗಲೆಯಾಗಲು ಸಮಯ ಬೇಕಿಲ್ಲ.
- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.