ಧಾರವಾಡ

ಶಿಕ್ಷಕಿಗೆ ಲೈಂಗಿಕಕಿರುಕುಳ ನೀಡಿದ ಶಿಕ್ಷಕ ಅಮಾನತು

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 22
ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರತಿಭಟನೆ, ಚರ್ಚೆ ನಡೆಯುತ್ತಿದ್ದರೆ, ಹಳೆಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಮೀಡಿಯಮ್ ಶಾಲೆಯ ಶಿಕ್ಷಕನೊಬ್ಬ ಸಹೋದ್ಯೋಗಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಶಾಲೆಯ ಗಣಿತ ಶಿಕ್ಷಕ ಸಂಜೀವ ಎಂ.ಎಸ್. ವಯಸ್ಸಿನಲ್ಲಿ ತನಗಿಂತ ಹಿರಿಯರಾದ ವಿವಾಹಿತೆ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಇಬ್ಬರ ಮಧ್ಯೆ ಆಗಾಗ ಜಗಳವೂ ನಡೆದಿದೆ. ಶಿಕ್ಷಕನ ಉಪಟಳ ತಾಳಲಾರದೆ ಶಿಕ್ಷಕಿ ಜು. 14ರಂದೇ ಶಾಲಾ ಆಡಳಿತ ಮಂಡಳಿಗೆ ವಿವರವಾದ ಪತ್ರ ಬರೆದು, ನ್ಯಾಯ ಕೇಳಿದ್ದಾರೆ. ಪತ್ರ ಬರೆದ ಮೇಲೆ ಶಿಕ್ಷಕನ ಕೀಟಲೆ ಹೆಚ್ಚಾಗಿದೆ. ಶಿಕ್ಷಕಿ ಮತ್ತೊಮ್ಮೆ ಜು. 17ರಂದು ಶಾಲಾ ಆಡಳಿತ ಮಂಡಳಿಗೆ ಪತ್ರ ಬರೆದು ನೋವು ತೋಡಿಕೊಂಡಿದ್ದಲ್ಲದೆ, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಎಚ್ಚೆತ್ತ ಆಡಳಿತ ಮಂಡಳಿ ಶಿಕ್ಷಕ ಸಂಜೀವ ಹಾಗೂ ಶಿಕ್ಷಕಿಯನ್ನು ಕರೆಸಿ ಸಂಧಾನ ಮಾಡುವ ಮೂಲಕ ತೇಪೆ ಹಚ್ಚಿದೆ. ಪರಸ್ಪರ ಸಹವಾಸಕ್ಕೆ ಹೋಗಕೂಡದು. ಶಾಲೆಯ ಮರ್ಯಾದೆ ಹಾಳಾಗಬಹುದೆಂಬ ಕಾರಣಕ್ಕೆ, ಪೊಲೀಸರಿಗೆ ದೂರು ನೀಡದಂತೆ ತಾಕೀತು ಮಾಡಿದೆ. ಇಷ್ಟಾದ ಮೇಲೂ ಶಿಕ್ಷಕನ ಉಪಟಳ ನಿಂತಿಲ್ಲ. ಇಷ್ಟು ಗಂಭೀರ ಪ್ರಕರಣವನ್ನು ಆಡಳಿತ ಮಂಡಳಿ ಹಗುರವಾಗಿ ಪರಿಗಣಿಸಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಕ ಸಂಜೀವ ಈ ಹಿಂದೆ ಇದೇ ಆಡಳಿತ ಮಂಡಳಿಗೆ ಒಳಪಟ್ಟಿರುವ ದೇಶಪಾಂಡೆ ನಗರ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲೂ ಹಗ್ಗ ಕಡಿಯುವ ಚಾಳಿ ಇದ್ದಿದ್ದರಿಂದ ನ್ಯೂಇಂಗ್ಲಿಷ್ ಮೀಡಿಯಂ ಸ್ಕೂಲ್‌ಗೆ ವರ್ಗಾವಣೆ ಮಾಡಲಾಗಿತ್ತು ಎನ್ನಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಶಿಕ್ಷಕಿಗೆ ರಕ್ಷಣೆ ನೀಡುವ ಜತೆಗೆ ಪ್ರಕರಣದ ಪೂರ್ವಾಪರ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

ದೂರು ಕೊಟ್ಟಿದ್ದೆ...
ಪ್ರಕರಣದ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಶಿಕ್ಷಕಿ, ಮೌಖಿಕವಾಗಿ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಶಿಕ್ಷಕ ಸಂಜೀವನ ಕಾಟ ತಪ್ಪಲಿಲ್ಲ. ಈ ಕಾರಣಕ್ಕೆ ಶಾಲಾ ಆಡಳಿತ ಮಂಡಳಿಗೆ ದೂರು ಸಲ್ಲಿಸಿದೆ. ಆಡಳಿತ ಮಂಡಳಿ ಮಧ್ಯಸ್ಥಿಕೆ ವಹಿಸಿ, ಸಂಧಾನ ಮಾಡಿದ್ದರಿಂದ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿಸಿದರು. ಇನ್ನು, ಶಿಕ್ಷಕ ಸಂಜೀವ ಪ್ರತಿಕ್ರಿಯಿಸಿ, ಶಿಕ್ಷಕಿ ಆರೋಪ ಸತ್ಯಕ್ಕೆ ದೂರವಾದದ್ದು, ತಾವು ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.