ಧಾರವಾಡ

ರಂಜಾನ್‌ಗೆ ತೆರೆ, ಹೊಸ್ತಿಲಿನಲ್ಲಿದೆ ಪಂಚಮಿ

Published On :

ಧಾರವಾಡ: ಶ್ರಾವಣ ಮಾಸ ಶುರುವಾದರೆ ಸಾಕು ಹಿಂದೂಗಳಿಗೆ ಹಬ್ಬಗಳ ಸಾಲು. ಈ ವಿಶೇಷ ಮಾಸದ ಮೊದಲ ದೊಡ್ಡ ಹಬ್ಬ ನಾಗರ ಪಂಚಮಿ.
ನಾಳೆ ಹಾಗೂ ನಾಡಿದ್ದು (ಜು. 31, ಆ. 1) ನಾಗರ ಪಂಚಮಿ ಹಬ್ಬದಾಚರಣೆಗೆ ಧಾರವಾಡದ ಜನತೆ ಸಿದ್ಧರಾಗಿದ್ದಾರೆ. ಒಂದು ತಿಂಗಳ ಕಾಲ ಮುಸ್ಲಿಂ ಬಂಧುಗಳು ರಂಜಾನ್ ಹಬ್ಬ ನಡೆದಿದ್ದು, ಮಂಗಳವಾರ ರಂಜಾನ್ ಹಬಕ್ಕೆ ತೆರೆ ಬೀಳುವಷ್ಟರಲ್ಲಿ ಇದೀಗ ನಾಗರ ಪಂಚಮಿ ಹೊಸ್ತಿಲಿನಲ್ಲಿದೆ.
ಉಂಡಿಗಳ ಮಾರಾಟ ಜೋರು: ಮಹಿಳೆಯರು ಹಾಗೂ ಮಕ್ಕಳಿಗಂತೂ ಈ ಹಬ್ಬದಲ್ಲಿ ಎಲ್ಲಿಲ್ಲದ ಖುಷಿ. ಮನೆ ಬಳಿಯ ಹುಣಸೆ, ಬೇವಿನ ಮರಕ್ಕೆ ಜೋಕಾಲಿ ಕಟ್ಟಿ ಆಟವಾಡುವುದು, ಇಷ್ಟವಾದ ತರಹೇವಾರಿ ಉಂಡಿಗಳನ್ನು ತಿನ್ನುತ್ತಾ ಈ ಹಬ್ಬದಾಚರಣೆ ವಿಜೃಂಭಣೆಯಿಂದ ನಡೆಯುತ್ತದೆ.
ಶೇಂಗಾ, ಎಳ್ಳುಂಡೆ, ರವೆ, ಬುಂದಿ, ಬೇಸನ್, ಖಾರದಾನಿ, ಗುಳ್ಳಡಕಿ ಸೇರಿದಂತೆ ತರಹೇವಾರಿ ಉಂಡಿಗಳನ್ನು ಮನೆಯಲ್ಲಿಯೇ ಸಿದ್ಧಪಡಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಉಂಡಿಗಳು ಸಹ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹತ್ತಾರು ರೀತಿಯ ಉಂಡಿಗಳ ಮಾರಾಟ ಜೋರಾಗಿದೆ. ಇಲ್ಲಿನ ಸುಭಾಸ ರಸ್ತೆಯಲ್ಲಿ ಪೂರ್ತಿ ಉಂಡಿಗಳ ಮಾರಾಟ ನಡೆದಿದೆ.
ಸಂತಾನೋತ್ಪತ್ತಿಗೆ ನೆರವು: ಇಲ್ಲಿನ ಅಶ್ವತ್ಥಕಟ್ಟೆಗಳ ಕೆಳಗೆ ಪ್ರತಿಷ್ಠಾಪಿಸುವ ನಾಗರಕಲ್ಲುಗಳಿಗೆ ಪಂಚಮಿಯ ದಿನ ಮುತ್ತೈದೆಯರು ಮಡಿಯಲ್ಲಿ ಹಾಲೆರೆದು ಪೂಜಿಸುತ್ತಾರೆ. ಇಲ್ಲಿನ ದುರ್ಗಾದೇವತೆ ದೇವಸ್ಥಾನದಲ್ಲಿನ ಕಲ್ಲು ನಾಗರಿಗೂ ಪ್ರತಿ ವರ್ಷ ಮುತ್ತೈದೆಯರು ಹಾಲೆರೆದು ಪೂಜಿಸುತ್ತಾರೆ. ಹುತ್ತಕ್ಕೆ ಹಾಲೆರೆಯುವುದು ಕೃತಜ್ಞತೆಯ ಸಂಕೇತವೆಂಬುದು ಮೊದಲ ಕಾರಣವಾದರೆ, ಹುತ್ತಕ್ಕೆ ಹಾಲೆರೆಯುವುದರಿಂದ ಸಂತಾನೋತ್ಪತ್ತಿಗೆ ನೆರವಾಗುತ್ತದಂತೆ ಎಂಬ ಮಾಹಿತಿ ಇದೆ.
ನವಲಗುಂದ ತಾಲೂಕಿನಲ್ಲಿ ನಾಗರ ಪಂಚಮಿ ವಿಶೇಷವಾಗಿ ಆಚರಿಸುತ್ತಾರೆ. ಪಟ್ಟಣದ ಪ್ರತಿ ಓಣಿಯಲ್ಲೊಂದು ಮಣ್ಣಿನಿಂದ ಹುತ್ತ ರಚಿಸಿ ಹಾಲೆರೆದು ಪೂಜೆ ಮಾಡುತ್ತಾರೆ. ಸಂಜೆ ಹೊತ್ತು ಆ ಹುತ್ತ ಕೆಡವಿ ಅದೇ ಮಣ್ಣಿನಿಂದ ಓಣಿಯ ಜನರೆಲ್ಲರೂ ಮಣ್ಣಿನಾಟ ಆಡುತ್ತಾರೆ. ಅಲ್ಲದೇ, ತಾಲೂಕಿನ ಅಮರಗೋಳದಲ್ಲಿನ ನಾಗಸ್ವಾಮಿ ದೇವಸ್ಥಾನದಲ್ಲಿ ಎರಡೂ ದಿನ ವಿಶೇಷ ಪೂಜೆಗಳು ನಡೆಯುತ್ತವೆ.  
ಜಾತ್ರೆಯೂ ವಿಜೃಂಭಣೆಯಿಂದ ನಡೆಯುತ್ತದೆ. ಹಾವು ಕಡಿದರೆ ಈ ದೇವಸ್ಥಾನದಲ್ಲಿನ ಅಂಗಾರ ಹಚ್ಚಿಕೊಂಡರೆ ವಿಷ ಏರೋದಿಲ್ಲ ಎಂಬ ನಂಬಿಕೆಯೂ ಈ ಭಾಗದ ಜನರಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.