ಶಿಶುವಿನಹಾಳ ಶರೀಫರ 195ನೇ ಜಯಂತ್ಯುತ್ಸವ, ಪುಣ್ಯ ಸ್ಮರಣೋತ್ಸವ
ಶಿಗ್ಗಾಂವಿ: ಶಿಶುವಿನಹಾಳದ ಶರೀಫಗಿರಿಯಲ್ಲಿ ಶರೀಫರ 195ನೇ ಜಯಂತ್ಯುತ್ಸವ ಹಾಗೂ 125ನೇ ಪುಣ್ಯ ಸ್ಮರಣೋತ್ಸವ ಜು. 3ರಂದು ನಡೆಯಲಿದೆ. ಅಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗುವವು. ಸಾನ್ನಿಧ್ಯವನ್ನು ಧಾರವಾಡದ ಸರ್ವಧರ್ಮ ಸಮನ್ವಯ ಪೀಠದ ಸಂಗಮಾನಂದಜಿ ವಹಿಸುವರು. ವೈದಿಕತ್ವವನ್ನು ವೇ. ಮೂ. ಜೋಗಯ್ಯನವರ ಹಿರೇಮಠ ನೇರವೇರಿಸುವರು. ಅಧ್ಯಕ್ಷತೆಯನ್ನು ಶರೀಫಗಿರಿ ವಿಸ್ವಸ್ಥ ಸಮಿತಿ ಪಕ್ಕೀರಗೌಡ ಹಿರೇಗೌಡರ ವಹಿಸುವರು. ಶಾಸಕ ಬಸವರಾಜ ಬೊಮ್ಮಾಯಿ, ಉಪನ್ಯಾಸಕ ಬೆಳಗಾವಿ ಲಿಂಗರಾಜ, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಬಸವರಾಜ ಜಗಜಂಪಿ, ಸಂಸದ ಪ್ರಹ್ಲಾದ್ ಜೋಷಿ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ಬಿ.ಟಿ. ಇನಾಮತಿ, ನಿಂಗಣ್ಣ ಜವಳಿ, ಮಹಾದೇವಿ ವಾಲ್ಮೀಕಿ, ಮಹದೇವಪ್ಪ ರಟಗೇರಿ, ವಿಶ್ವನಾಥ ದಲಭಂಜನ ಮತ್ತಿತರರು ಇರುವರು.
ಅಂಕೋಲಾ: ಅಂತಾರಾಜ್ಯ ಕಳ್ಳ ಅಯಾಜ್ ಖಾನ್ ಬಂಧನ
ಅಂಕೋಲಾ: ಅಂತರ್ ಜಿಲ್ಲಾ ಕಳ್ಳ ಬೆಳಗಾವಿಯ ಅಯಾಜ್ ಖಾನ್ ಅಲಿಯಾಸ್ ಇಕ್ಬಾಲ್ ಪಠಾಣ ಅಮೀರ್ಖಾನ್ನನ್ನು ಪೊಲೀಸರು ತಾಲೂಕಿನ ವಿಠ್ಠಲ ಘಾಟ್ ಬಳಿ ಬಂಧಿಸಿದ್ದಾರೆ. ಈತ ಮಾರುತಿ ಓಮಿನಿ ಸೇರಿದಂತೆ 20ಕ್ಕೂ ಹೆಚ್ಚು ಬೈಕ್ಗಳನ್ನು ಕಳ್ಳತನ ಮಾಡಿದ್ದು, ಸುಮಾರು 15 ಪ್ರಕರಣಗಳಲ್ಲಿ ಶಿಕ್ಷೆಗೂ ಗುರಿಯಾಗಿದ್ದ ಎನ್ನಲಾಗಿದೆ. ಈತ ಐಷಾರಾಮಿ ಜೀವನ ನಡೆಸುತ್ತಿದ್ದು, ಕದ್ದ ವಾಹನದೊಂದಿಗೆ ಪ್ರತಿಷ್ಠಿತ ಅಂಗಡಿಗಳಿಗೆ ತೆರಳಿ ಲಕ್ಷಾಂತರ ಮೌಲ್ಯದ ಸಾಮಾನುಗಳನ್ನು ಖರೀದಿಸುತ್ತಿದ್ದನು. ಖರೀದಿಸಿದ ವಸ್ತುಗಳ ಪಾವತಿಸಬೇಕಾದ ಸಂದರ್ಭದಲ್ಲಿ ಅಂಗಡಿಕಾರರನ್ನು ಯಾಮಾರಿಸಿ ಅಲ್ಲಿಂದ ತಲೆಮರೆಸಿಕೊಳ್ಳುತ್ತಿದ್ದ ಎನ್ನಲಾಗಿದೆ. 20 ದಿನಗಳ ಹಿಂದೆ ಹೊನ್ನಾವರ ಗೇರುಸೊಪ್ಪ ನಿವಾಸಿ ಗಣೇಶ ಕೃಷ್ಣಪ್ಪ ನಾಯ್ಕ ಎನ್ನುವವರಿಗೆ ಸೇರಿದ ಮಾರುತಿ ಓಮಿನಿ ವಾಹನ ಕಳುವಾದ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳುವಾದ ಮಾರುತಿ ಓಮಿನಿ ವಾಹನ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಗುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಅಂಕೋಲಾ ಪೊಲೀಸ್ ನಿರೀಕ್ಷಕ ಗಣೇಶ ಹೆಗಡೆ ಹಾಗೂ ಹೊನ್ನಾವರ ಪೊಲೀಸ್ ನಿರೀಕ್ಷಕ ಮಂಜುನಾಥ ಗೌಡ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಾಳೆಗುಳಿ ಬಳಿ ತಡೆಹಿಡಿದ ಆರೋಪಿಯನ್ನು ಬಂಧಿಸಿದ್ದಾರೆ. ಈತ ಈ ಹಿಂದೆ ಹಳಿಯಾಳ, ಬೆಳಗಾವಿ, ಶಿವಮೊಗ್ಗ, ಭದ್ರಾವತಿ, ಮಂಗಳೂರು ಜಿಲ್ಲೆಗಳಲ್ಲಿ ಹಲವಾರು ವಾಹನ ಹಾಗೂ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿರುವುದಾಗಿ ತಿಳಿದುಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಈತ ತನ್ನ ಹಳೆಯ ಚಾಳಿಯನ್ನು ಮತ್ತೆ ಮುಂದುವರೆಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸ್ ಅಧೀಕ್ಷಕ ಆರ್. ದಿಲೀಪ, ಡಿವೈಎಸ್ಪಿ ರಾಮಾ ಎಲ್. ಹರಸಿದ್ದಿ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಗಣೇಶ ಹೆಗಡೆ ಹಾಗೂ ಸಿಬ್ಬಂದಿ ಎಎಸ್ಐ ತಳದಪ್ಪನವರ, ಹಸನ್ ಕುಟ್ಟಿ, ರವಿ ಗೌಡ, ಬಾಡಕರ, ಗಿರೀಶ ಲಮಾಣಿ ದಾಳಿಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

