2300ಕ್ಕೆ ಟಿಬಿ ಡ್ಯಾಂ ಅಸ್ತಿತ್ವವಿಲ್ಲ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 11
ವರ್ಷದಿಂದ ವರ್ಷಕ್ಕೆ ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ 2300ರ ವೇಳೆಗೆ ಜಲಾಶಯದ ಅಸ್ತಿತ್ವವೆ ಇರುವುದಿಲ್ಲ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಡಿ. ರಂಗಾರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ ಆಯೋಜಿಸಿದ್ದ ಜಲಾಶಯಗಳಲ್ಲಿ ಹೂಳು ಸಮಸ್ಯೆ ಹಾಗೂ ಪರಿಹಾರ ಕ್ರಮಗಳ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ನೀರನ್ನೇ ನಂಬಿದ ರಾಜ್ಯದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಹಾಗೂ ನೆರೆಯ ಪಾಲುದಾರ ಆಂಧ್ರಪ್ರದೇಶದ ಕಡಪಾ, ಕರ್ನೂಲು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಮೂಲ ತುಂಗಭದ್ರಾ ಜಲಾಶಯದಲ್ಲಿ ಇದೆ ವೇಗದಲ್ಲಿ ಹೂಳು ತುಂಬಿದರೆ ಭವಿಷ್ಯದಲ್ಲಿ ಜಲಾಶಯ ಅನುಪಯುಕ್ತವಾಗಲಿದೆ ಎಂದು ತಿಳಿಸಿದರು.
ಜಲಾಶಯಗಳಲ್ಲಿ ಹೂಳು ತುಂಬುವುದು ಸಹಜ, ಇದರಿಂದಾಗಿ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿ, ಬೇಸಾಯ, ವಿದ್ಯುತ್ ಉತ್ಪಾದನೆ, ಕುಡಿಯುವ ನೀರು, ಕಾರ್ಖಾನೆಗಳಿಗೆ ನೀರಿನ ಕೊರತೆ ಹೆಚ್ಚಾಗಲಿದೆ. ಇಂತಹ ಸಂದರ್ಭದಲ್ಲಿ ಹೂಳು ತೆಗೆಯುವ ಜತೆಗೆ, ನದಿಯ ಮೂಲಕ ಜಲಾಶಯಕ್ಕೆ ಹೂಳು ಹರಿದು ಹೋಗದಂತೆ ತಡೆಯಬೇಕು. ಇನ್ನು ನೀರು ಜಲಾಶಯದಲ್ಲಿ ಪ್ರವಾಹದ ಮೂಲಕ ಹರಿದು ಹೋಗದಂತೆ ತಡೆಯಲು ಪ್ರವಾಹ ಕಾಲುವೆ ನಿರ್ಮಾಣ ಮಾಡಿ, ಪರ್ಯಾಯ ಜಲಾಶಯದಲ್ಲಿ ಸಂಗ್ರಹವಾಗಬೇಕು. ವ್ಯರ್ಥವಾಗಿ ಸಮುದ್ರಕ್ಕೆ ನೀರು ಸೇರುವುದನ್ನು ತಡೆಗಟ್ಟಬಹುದು ಎಂದರು.
ಪರ್ಯಾಯ ಮಾರ್ಗ ಅಗತ್ಯ: ನಿವೃತ್ತ ಮುಖ್ಯ ಅಭಿಯಂತರ ವಿ.ಪಿ. ಉದ್ದೀಹಾಳ್ ಮಾತನಾಡಿ, ಹೂಳು ತೆಗೆಯುವ ಮಾರ್ಗಕ್ಕಿಂತ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಪರ್ಯಾಯ ಮಾರ್ಗಗಳು ಇರುವುದರಿಂದ ಅದರ ಬಗ್ಗೆ ಆಲೋಚಿಸಬೇಕಾಗಿದೆ. ಹೂಳು ತೆಗೆಯುವುದು ವೇದಿಕೆಗಳ ಮೇಲೆ ಮಾತನಾಡಿದಷ್ಟು ಸುಲಭವಲ್ಲ. ಹೂಳು ತೆಗೆಯುವಿಕೆಯಲ್ಲಿ ಅನೇಕ ಬಗೆಯ ಸಮಸ್ಯೆಗಳಿವೆ. ಜಲಾಶಯದ ಈಗಿರುವ ಜಲ ಸಂಗ್ರಹಣೆ ಸಾಮರ್ಥ್ಯ ಉಳಿಸಿಕೊಳ್ಳುವತ್ತ ಗಮನ ಹರಿಸಿ ಶ್ರಮಿಸಬೇಕಿದೆ. ಪರ್ಯಾಯ ಮಾರ್ಗಗಳಾದ ಚೆಕ್ಡ್ಯಾಂ ನಿರ್ಮಾಣ, ಜಲಾಶಯಕ್ಕೆ ಹೂಳು ಸೇರದಂತೆ ಗಿಡಮರ ಬೆಳೆಸುವಿಕೆ ಮೊದಲಾದ ಕ್ರಮಗಳ ಬಗ್ಗೆ ಯೋಚಿಸಬೇಕು. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಹಿತದೃಷ್ಟಿ ಕಾಪಾಡುವತ್ತ ಚಿಂತನೆ ನಡೆಸಿ, ಚರ್ಚಿಸಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ, ಉಪ ಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ, ಜಿಲ್ಲಾ ರೈತ ಸಂಘ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಆಂಧ್ರಪ್ರದೇಶದ ರೈತ ಮುಖಂಡ ರಾಮಿರೆಡ್ಡಿ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ರೈತರು, ನೀರಾವರಿ ಇಲಾಖೆ ಅಧಿಕಾರಿಗಳು, ಕಾಲೇಜು ಪ್ರಾಚಾರ್ಯ ಡಾ.ಟಿ. ಹನುಮಂತರೆಡ್ಡಿ, ಅಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.
ಸಿವಿಲ್ ವಿಭಾಗದ ಮುಖ್ಯಸ್ಥ ಟಿ.ಎಚ್. ಪಟೇಲ್ ಸ್ವಾಗತಿಸಿದರು. ಪುಷ್ಪಲತಾ ನಿರ್ವಹಿಸಿದರು. ಶೋಭಾ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಾಕಿನಾಡದ ಜೆಎನ್ಟಿಯು ನಿರ್ದೇಶಕ ಡಾ.ಜಿ. ಅಬ್ಬಯ್ಯ, ಡಾ.ವಿ.ಶ್ರೀನಿವಾಸಲು, ಸಿವಿಲ್ ವಿಭಾಗದ ಮುಖ್ಯಸ್ಥ ಹಾಗೂ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜ್ ಸಿವಿಲ್ ವಿಭಾಗದ ಡಾ.ಸಿ. ರಾಜಗೋಪಾಲ್ ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

