ಧೂಳು ತಿನ್ನುತ್ತಿದೆ ರು. 5 ಲಕ್ಷದ ಸಕ್ಕಿಂಗ್ ಮಷಿನ್
ಹೊನ್ನಪ್ಪ ಲಕ್ಕಮ್ಮನವರ
ಧಾರವಾಡ: ಇಲ್ಲಿನ ತಾಲೂಕು ಪಂಚಾಯಿತಿ ಸದಸ್ಯರ ಮತ್ತು ಅಧಿಕಾರಿಗಳ ಆಡಳಿತದ ಬೇಜವಾಬ್ದಾರಿ ಫಲವಾಗಿ ರು. 5.5 ಲಕ್ಷ ಮೌಲ್ಯದ ಸಕ್ಕಿಂಗ್ ಮಷಿನ್ ಬರೋಬ್ಬರಿ 11 ವರ್ಷಗಳಿಂದ ಧೂಳು ತಿನ್ನುತ್ತಿದೆ.
ಗ್ರಾಮಗಳಲ್ಲಿನ ಸಾರ್ವಜನಿಕ ಶೌಚಾಲಯಗಳು ಹಾಗೂ ವೈಯಕ್ತಿಕ ಶೌಚಾಲಯಗಳು ಭರ್ತಿಯಾದರೆ ಅದನ್ನು ಯಾಂತ್ರಿಕವಾಗಿ ಸ್ವಚ್ಛಗೊಳಿಸುವ ಈ ಯಂತ್ರ ಪಾಲಿಕೆ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ ತಾಪಂನಲ್ಲಿರುವ ಈ ಯಂತ್ರ ಇಲ್ಲಿಯವರೆಗೆ ಒಂದು ಬಾರಿ ಕೂಡ ಬಳಕೆಯಾಗಿಲ್ಲ. ಉಪಯೋಗಿಸದೇ ಇರುವ ಹಿನ್ನೆಲೆಯಲ್ಲಿ ಇಂದಿಗೂ ಈ ಯಂತ್ರ ಅತ್ಯುತ್ತಮ ಸ್ಥಿತಿಯಲ್ಲಿದೆ. ಇದನ್ನು ಗ್ರಾಮಗಳಿಗೆ ಕೊಂಡೊಯ್ಯಲು ಟ್ರ್ಯಾಕ್ಟರ್ ಅವಶ್ಯಕತೆ ಇದೆ. ಆದರೆ ತಾಪಂ ಹಾಗೂ ಜಿಲ್ಲಾ ಪಂಚಾಯಿತಿ ಬಳಿ ಟ್ರ್ಯಾಕ್ಟರ್ ಇಲ್ಲ ಎಂಬ ಕುಂಟು ನೆಪವನ್ನು ಅಧಿಕಾರಿಗಳು ಹೇಳುತ್ತಾರೆ. ಇಲ್ಲದ ಕೆಲಸಗಳಿಗೆ ಕಾರು ಮತ್ತಿತರ ವಾಹನಗಳನ್ನು ಬಾಡಿಗೆ ಪಡೆಯುವ ಅಧಿಕಾರಿಗಳು ಟ್ರ್ಯಾಕ್ಟರ್ ಒಂದನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಂಡು ಗ್ರಾಮೀಣ ಪರಿಸರದಲ್ಲಿ ಸ್ವಚ್ಛ ಪರಿಸರ ನಿರ್ಮಿಸುವುದಕ್ಕೆ ಕಾರ್ಯಕ್ರಮ ರೂಪಿಸದೇ ಇರುವುದನ್ನು ನೋಡಿದರೆ ಅಧಿಕಾರಿಗಳಿಗೆ ಹೇಳಲಿಕ್ಕೊಂದು ಕುಂಟು ನೆಪವಿದ್ದರೆ ಸಾಕು ಎನ್ನುವಂತಿದೆ ಅವರ ಈ ಧೋರಣೆ.
ಸುಪ್ರೀಂ ಕೋರ್ಟ್ನ ಆದೇಶದ ಪರಿಣಾಮವಾಗಿ ಸರ್ಕಾರ ಮಲಹೊರುವ ಪದ್ಧತಿಯನ್ನು ನಿಷೇಧಿಸಿದೆ. ಗ್ರಾಮಗಳಲ್ಲಿ ಶೌಚಾಲಯಗಳ ಸ್ವಚ್ಛತೆಗೆ ಪರ್ಯಾಯ ವ್ಯವಸ್ಥೆ ಎಂಬಂತೆ ಈ ಸಕ್ಕಿಂಗ್ ಮಷಿನ್ ರೂಪುಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಹಾಗೂ ಸಾರ್ವಜನಿಕ ಶೌಚಾಲಯಗಳು ಭರ್ತಿಯಾದ ನಂತರ ಸಂಬಂಧಪಟ್ಟವರು ಗ್ರಾಪಂಗೆ ಮಾಹಿತಿ ನೀಡಬೇಕು. ಆಗ ಗ್ರಾಪಂ ಅಧಿಕಾರಿಗಳು ತಾಪಂಗೆ ತಿಳಿಸುತ್ತಾರೆ. ತಾಪಂನಿಂದ ಸಕ್ಕಿಂಗ್ ಯಂತ್ರ ಕಳುಹಿಸಿ ಶೌಚಾಲಯಗಳ ಸೆಪ್ಚಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲಾಗುತ್ತದೆ.
5 ಸಾವಿರ ಸಂಗ್ರಹ: ಇಂಥ ಯಂತ್ರಗಳು ರಸ್ತೆಗಿಳಿಯಲು ಮುಖ್ಯವಾಗಿ ಸಾರಿಗೆ ಇಲಾಖೆಯಲ್ಲಿ ನೋಂದಣಿ ಆಗಬೇಕು. ಜುಲೈ 2003ರಲ್ಲಿ ಸಕ್ಕಿಂಗ್ ಯಂತ್ರವನ್ನು ತಾತ್ಕಾಲಿಕ ನೋಂದಣಿ ಆಗಿದೆ. ಆದರೆ ಈವರೆಗೂ ಕಾಯಂ ನೋಂದಣಿಯಾಗಿಲ್ಲ. ಅಲ್ಲದೇ, ಯಂತ್ರವನ್ನು ಕೊಂಡೊಯ್ಯುವ ಟ್ರ್ಯಾಕ್ಟರ್ ಇಲ್ಲದಿರುವುದು ಈ ಯಂತ್ರ ಬಳಕೆ ಆಗದಿರುವುದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ತಾಪಂ ಕಚೇರಿ ಆವರಣದ ಮೂಲೆಯಲ್ಲಿ ಈ ಯಂತ್ರ ನಿಂತಿದ್ದರೂ ಇಲ್ಲಿನ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ನೋಡಿಯೂ ನೋಡದಂತೆ ಜಾಣ ಕುರುಡರಾಗಿದ್ದಾರೆ. ಇತ್ತ ತಾಲೂಕಿನ 37 ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಇಂಥದೊಂದು ಯಂತ್ರವಿದ್ದು, ಅದನ್ನು ಬಳಸಿಕೊಳ್ಳಬೇಕು ಎನ್ನುವ ಗೋಜಿಗೂ ಹೋಗಿಲ್ಲ. ಈ ಹಿಂದೆ ತಾವು ತಾಪಂಗೆ ನೀಡಿದ ಹಣ ಏನಾಯಿತು ಎಂದು ಪ್ರಶ್ನಿಸುವ ಜನಪ್ರತಿನಿಧಿಗಳೂ ಇಲ್ಲ. ಜೊತೆಗೆ ಸಾರ್ವಜನಿಕರಲ್ಲೂ ಈ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಸೋಜಿಗದ ಸಂಗತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

