ಭಾವೈಕ್ಯದ ಸಂಕೇತ ಯಮನೂರು ಜಾತ್ರೆ
- ಪುಂಡಲೀಕ ಮುದೋಳೆ
ನವಲಗುಂದ: ಹಿಂದೂ-ಮುಸ್ಲಿಂರ ಭಾವೈಕ್ಯದ ಸಂಕೇತ ಸಾರಿದ ಮಹಿಮಾಪುರುಷ ಚಾಂಗದೇವ ಪುಣ್ಯಸ್ಥಳ ಯಮನೂರು. ಅಂತಹ ಮಹಿಮಾ ಪುರುಷನ ಸ್ಮರಣಿಗಾಗಿ ಮಾ. 20ರಂದು ಗಂಧಾಭಿಷೇಕ ಹಾಗೂ ಮಾ. 21ರಂದು ಉರೂಸ್ ಜರುಗಲಿದೆ.
ಅವತಾರ ಪುರುಷರಾಗಿದ್ದ ಚಾಂಗದೇವ ಸಂತ ಪರಂಪರೆಯ ಮಹಾಜ್ಞಾನಿಯಾಗಿ ಸಂಚರಿಸುತ್ತ ಬಂದ ಈ ಯೋಗಿಯೂ ಹಿಂದೂ- ಮುಸ್ಲಿಂರಲ್ಲಿ ಭಾವೈಕ್ಯ ಮೂಡಿಸಿ ಯಮನೂರನ್ನು ಭಕ್ತಿಯ ಸಾಮರಸ್ಯ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಚಾಂಗದೇವರು ಈ ಗ್ರಾಮದಲ್ಲಿ ನೆಲೆಸಿ ನರಸಿಂಹ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅಷ್ಟೆ ಅಲ್ಲದೇ ದೇವಸ್ಥಾನದಲ್ಲಿ ಮುಸ್ಲಿಂ ಧರ್ಮದ ಸಂಕೇತವಾದ ಪಂಜಾಗಳು ಹಿಂದು ಧರ್ಮದ ಸಂಕೇತವಾದ ಸಾಲಿ ಗ್ರಾಮವಿದೆ. ಆದ್ದರಿಂದ ಇದು ದೇವಸ್ಥಾನವು ಹೌದು, ದರ್ಗಾವೂ ಹೌದು. ಇದರಿಂದಾಗಿ ಯಮನೂರ ನಾಡಿನ ಭಕ್ತರ ಆರಾಧನಾ ಕ್ಷೇತ್ರವಾಗಿದೆ. ಚಾಂಗದೇವರು ಹುಲಿಯನ್ನೇ ವಾಹನವನ್ನಾಗಿ ಹಾವನ್ನೆ ಚಾಟಿಯಾಗಿ, ಚೇಳುಗಳನ್ನೇ ಮೂಗುದಾರವಾಗಿ ಮಾಡಿಕೊಂಡು ಸಂಚರಿಸುತ್ತಿದ್ದುದರಿಂದ ಈ ಮಹಾತ್ಮನನ್ನು ಭಕ್ತರು ರಾಜಾ ಬಾಗ ಸವಾರ ಎಂದು ಕರೆಯುತ್ತಾರೆ. ಇವರ ಹಲವಾರು ಪವಾಡಗಳಲ್ಲಿ ಮೈಸೂರು ಮಹಾರಾಜನಾಗಿದ್ದ ಟಿಪ್ಪುವಿನ ಉದರಶೂಲೆ ನಿವಾರಿಸಿದಾಗ ಈ ಸಂತನಲ್ಲೇ ಅಲ್ಲಾ ನನ್ನು ಕಂಡ ಸುಲ್ತಾನ ಪಂಜಾವನ್ನು ಪೂಜಾ ಸ್ಥಳದಲ್ಲಿಟ್ಟು ಭಕ್ತಿ ಮೆರೆದನಂತೆ. ಅಂದಿನಿಂದ ಈ ಕ್ಷೇತ್ರ ಹಿಂದೂ ಮುಸ್ಲಿಂ ಭಕ್ತರ ಪುಣ್ಯಕ್ಷೇತ್ರ ಆಗಿದೆ ಎಂದು ಹೇಳಲಾಗುತ್ತಿದೆ.
ಚಾಂಗದೇವರು ತಮ್ಮ ಪೂಜೆ ಸೇರಿದಂತೆ ಮತ್ತಿತರ ಧರ್ಮಾಚರಣೆಗೆ ತಮ್ಮ ಅಂತರಂಗದ ಶಿಷ್ಯನಾದ ಕ್ಷೆತ್ರೋಜಿರಾವ್ ಬರ್ಗೆ ಅವರಿಗೆ ವಹಿಸಿಕೊಟ್ಟಿದ್ದರು. ಅಲ್ಲಿಂದ ಈವರೆಗೂ ಬರ್ಗೆ ಕುಟುಂಬಸ್ಥರೆ ಚಾಂಗದೇವರ ಪೂಜೆ ನೆರವೇರಿಸಿಕೊಂಡು ಬಂದಿದ್ದಾರೆ. ಮಾ. 20 ರಂದು ಬೆಳಗ್ಗೆ ನಡೆಯುವ ಗಂಧಾಭಿಷೇಕದ ಮೆರವಣಿಗೆ ಮಹಾರಾಷ್ಟ್ರದಿಂದ ಬರುವ ಸಂತರ ನೇತೃತ್ವದಲ್ಲಿ ನಡೆಯಲಿದೆ. ಪಲ್ಲಕ್ಕಿ ಹೊತ್ತು ಸಾಗುವ ಮಾರ್ಗದುದ್ದಕ್ಕೂ ಭಕ್ತರು ಮಲಗುವ ಮೂಲಕ ಪಾಪಗಳನ್ನು ಪರಿಸುವಂತೆ ಶ್ರೀ ಚಾಂಗದೇವರಲ್ಲಿ ಬೇಡಿಕೊಳ್ಳುತ್ತಾರೆ. ಈ ಜಾತ್ರೆಯ ಇನ್ನೊಂದು ವಿಶೇಷತೆ ಎಂದರೆ, ಬೆಣ್ಣಿಹಳ್ಳದ ನೀರಿನಿಂದಲೇ ಸಂತರು ದೀಪ ಬೆಳಗಿಸುವ ಪ್ರತೀತಿ ಇದೆ. ಇದನ್ನು ನೋಡಲು ರಾಜ್ಯ ಹೊರರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಳ್ಳದ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮರೋಗ ನಿವಾರಣಿಯಾಗುತ್ತದೆ ಎಂಬುದ ಭಕ್ತ ಸಮೂಹದ ನಂಬಿಕೆ. ಒಟ್ಟಾರೆ ವರ್ಷದಿಂದ ವರ್ಷಕ್ಕೆ ತನ್ನ ಮಹಿಮೆ ಸಾರುತ್ತ ಭಕ್ತರನ್ನು ಆಕರ್ಷಿಸುತ್ತಾ ಪುಣ್ಯಕ್ಷೇತ್ರವಾಗಿ ಯಮನೂರ ಬೆಳೆಯುತ್ತಲೇ ಸಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

