ಧಾರವಾಡ

200ಕ್ಕೂ ಹೆಚ್ಚು ಆಮ್ ಆದ್ಮಿ ಅಭ್ಯರ್ಥಿಗಳ ಆಯ್ಕೆ

Published On :

ಧಾರವಾಡ: ದೆಹಲಿ ವಿಧಾನಸಭೆ ಚುನಾವಣಾ ಮಾದರಿಯಲ್ಲಿ ಇಡೀ ದೇಶದಲ್ಲಿ ಲೋಕಸಭಾ ಚುನಾವಣೆ ವಾತಾವರಣವಿದೆ. ಲೋಕಸಭೆ ಚುನಾವಣೆಯಲ್ಲಿ  ಆಮ್ ಆದ್ಮಿಯ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ಧಾರವಾಡ ಲೋಕಸಭೆ ಕ್ಷೇತ್ರದ ಆಪ್ ಅಭ್ಯರ್ಥಿ ಹೇಮಂತ್‌ಕುಮಾರ್ ಪಾಂಚಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೈತ, ದಲಿತ, ಕಾರ್ಮಿಕ, ಪರಿಸರ, ಆದಿವಾಸಿ ಹೀಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳನ್ನು ಎತ್ತಿಕೊಂಡು ಚಳವಳಿ ಮೂಲಕ ಎಎಪಿ ಹುಟ್ಟಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಶ್ರೀಸಾಮಾನ್ಯ ಆಪ್‌ಗೆ ಬೆಂಬಲಿಸಲಿದ್ದಾನೆ ಎಂದು ಹೇಳಿದರು. ಇಲ್ಲಿನ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರೆಸ್ ಕ್ಲಬ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಅವರು, ಇತರ ಪಕ್ಷಗಳಂತೆ ಮತದಾರರಿಗೆ ನಾವು ಆಮಿಷ ಒಡ್ಡುವುದಿಲ್ಲ. ಬದಲಾಗಿ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಮತ ನೀಡಿ ಎಂದು ಕೇಳಿಕೊಳ್ಳುತ್ತೇವೆ ಎಂದು ಹೇಳಿದರು. ಕಾಂಗ್ರೆಸ್‌ನ ರಾಹುಲ್ ಗಾಂಧಿಗೆ ದೂರದೃಷ್ಟಿ ಇಲ್ಲ. ಹಣಕಾಸು ಮಂತ್ರಿ ಪಿ. ಚಿದಂಬರಂ ಚುನಾವಣೆಗೆ ಹೆದರಿ ಹಿಂದೆ ಸರಿದರು. ಇನ್ನು, ಬಿಜೆಪಿಯ ಮೋದಿಗೆ ಧೈರ್ಯವಿಲ್ಲ. ಕೇಜ್ರಿವಾಲ್ ಅವರ ಸವಾಲುಗಳನ್ನು ಮೋದಿ ಏಕೆ ಸ್ವೀಕರಿಸುತ್ತಿಲ್ಲ ಎಂದು ಪಾಂಚಾಳ ಪ್ರಶ್ನಿಸಿದರು.
ವಯೋವುತಿ ಅಗತ್ಯ: ವೃದ್ಧ್ಯಾಪ್ಯದ ಸ್ಥಿತಿಗೆ ತಲುಪಿರುವ ಬಹುತೇಕ ಇಂದಿನ ರಾಜಕಾರಣಿಗಳು ಈ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ರಾಜಕೀಯಕ್ಕೆ ಕರೆತರುವುದುಕ್ಕೆ ಹರಸಾಹಸ ಪಡುತ್ತಿದ್ದಾರೆ. ರಾಜಕೀಯಕ್ಕೆ ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ ಬೇಕು ಎನ್ನುವುದನ್ನು ಜನರು ನಿರ್ಧರಿಸಬೇಕಿದೆ ಎಂದು ಪಾಂಚಾಳ ಹೇಳಿದರು.  ಇದಕ್ಕೂ ಮುಂಚೆ ಸಂವಾದ ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಬಿ.ಡಿ. ಹಿರೇಮಠ ಉದ್ಘಾಟಿಸಿದರು. ಡಾ೤ ಇಕ್ಬಾಲ್ ಶೇಖ್ ಮಾತನಾಡಿ, ಕಾಂಗ್ರೆಸ್ 60 ವರ್ಷಗಳ ಕಾಲ ದೇಶವನ್ನು ಆಳಿದೆ ಇಷ್ಟು ದೀರ್ಘ ಸಮಯದಲ್ಲಿ ದೇಶವನ್ನು ಸ್ವರ್ಗ ಮಾಡಬಹುದಿತ್ತು. ಆದರೆ, ಹಗರಣ ಹಾಗೂ ಭ್ರಷ್ಟಾಚಾರಗಳಲ್ಲಿ ಭಾಗಿಯಾಗಿ ತನ್ನ ಪ್ರತಿಷ್ಠೆ ಹಾಳು ಮಾಡಿಕೊಂಡಿತು. ಬಿಜೆಪಿಯೂ ಅಷ್ಟೇ ಒಂದು ವರ್ಗವನ್ನೂ ಪೂರ್ತಿಯಾಗಿ ಕಡೆಗಣಿಸಿ, ವ್ಯಕ್ತಿಗತ ಭಾವನೆ ಮೇಲೆ ಅಧಿಕಾರ ಮಾಡಿತು. ಇದೀಗ ಹುಟ್ಟಿಕೊಂಡಿರುವ ಆಪ್ ತರಾತುರಿಯಲ್ಲಿ ಮುಂದುವರೆಯಲು ಹೋಗಿ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಿದರು.  ಶಂಕರ ಹಲಗತ್ತಿ ಹಾಗೂ ಪತ್ರಕರ್ತ ಗುರುರಾಜ ಜಮಖಂಡಿ ಮಾತನಾಡಿದರು. ಮುಸ್ತಫಾ ಕುನ್ನಿಬಾವಿ, ವೆಂಕನಗೌಡ ಪಾಟೀಲ, ಮನೋಜ ಗುದ್ದಿ, ಸುಭಾನಿ ಸಮಾರಂಭದ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.