ಮೂವರನ್ನು ಮುಖ್ಯಮಂತ್ರಿ ಮಾಡಿದ್ದೇ ಬಿಜೆಪಿ ಸಾಧನೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 4
ಜೆಡಿಎಸ್ ಜತೆ ಮೈತ್ರಿಯಾಗಿ 20 ತಿಂಗಳ ಸಮ್ಮಿಶ್ರ ಸರ್ಕಾರ ನಡೆಸಿ, ಅನಂತರ 4 ವರ್ಷ 10 ತಿಂಗಳು ದಕ್ಷಿಣ ಕರ್ನಾಟಕದ ಮೊದಲ ಬಿಜೆಪಿ ಸರ್ಕಾರ ಆಡಳಿತ ನಡೆಸಿದರೂ ಮೂವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದೇ ಬಿಜೆಪಿ ಸಾಧನೆ ಎಂದು ರೋಣ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಹೇಳಿದರು.
ಗುರುವಾರ ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ಡಂಬಳ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಗಣಿ ಲೂಟಿ ಮಾಡಿ ಸರ್ಕಾರ ಮತ್ತು ಶಾಸಕರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿ ಸರ್ಕಾರವನ್ನೂ ರಚಿಸಿದ್ದರು. ಮಣ್ಣುಮಾರಿ ಸರ್ಕಾರ ರಚನೆಗೆ ಸಹಾಯ ಮಾಡಿದ ಅತಿರಥ- ಮಹಾರಥರು ಈಗ ಬಿಜೆಪಿಯಲ್ಲಿ ಉಳಿದಿಲ್ಲ. ನಾಯಕರಿಲ್ಲದೆ ಬಿಜೆಪಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. 4 ವರ್ಷ 10 ತಿಂಗಳು ದುರಾಡಳಿತ ನಡೆಸಿದ ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕೇಂದ್ರ ಯುಪಿಎ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ ಯೋಜನೆ, ಭ್ರಷ್ಟಾಚಾರ ಹತ್ತಿಕ್ಕಲು ಮಾಹಿತಿ ಹಕ್ಕು ಕಾಯ್ದೆ, ಬಡವರಿಗಾಗಿ ಪಡಿತರ ವ್ಯವಸ್ಥೆ, ಶಿಕ್ಷಣ ಹಕ್ಕು ಕಾಯ್ದೆ ಜನೋಪಯೋಗಿ ಆಗಿವೆ. ರೈತರ ರು. 73 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಈ ಬಾರಿ ಮತದಾರ ಕಾಂಗ್ರೆಸ್ ಕೈ ಹಿಡಿಯಲಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ವಾಸಣ್ಣ ಕುರುಡಗಿ ಮಾತನಾಡಿ, ಭ್ರಷ್ಟಾಚಾರ ಬಡಿದೋಡಿಸಲು ಮತದಾರ ಕಾಂಗ್ರೆಸ್ ಬೆಂಬಲಿಸಬೇಕಿದೆ. ಅಲ್ಪಸಂಖ್ಯಾತರಿಗೆ ಮನ್ನಣೆ ನೀಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಿಮ್ಮರಡ್ಡೆಪ್ಪ ಮೇಟಿ, ಚಂದ್ರಹಾಸ ಉಳ್ಳಾಗಡ್ಡಿ, ಧೀರನಗೌಡ ಪಾಟೀಲ, ಕೊಟ್ರೇಶ ಅಂಗಡಿ, ಮಿಥುನ್ಗೌಡ ಪಾಟೀಲ ಮಾತನಾಡಿದರು. ಪುರಸಭೆಗೆ ಆಯ್ಕೆಯಾದ 12 ಕಾಂಗ್ರೆಸ್ ಸದಸ್ಯರನ್ನು ಸನ್ಮಾನಿಸಲಾಯಿತು. ಗಂಗಣ್ಣ ಸೊರಟೂರ, ದೇವಪ್ಪ ಗಂಡಿಕೇರಿ, ಶಿವಲಿಂಗಯ್ಯ ಗುರುವಿನ, ರಾಮಸ್ವಾಮಿ ಹೆಗ್ಗಡಾಳ, ಎಸ್.ಡಿ. ಮಕಾಂದಾರ, ಬಿ.ಎಸ್. ಮೇಟಿ, ಹನುಮರಡ್ಡಿ ಮೇಟಿ, ರಾಮಣ್ಣ ಬಳ್ಳಾರಿ, ನಾಗೇಶ ಹುಬ್ಬಳ್ಳಿ, ಪಾಲಾಕ್ಷಿ ಗಣದಿನ್ನಿ ಉಪಸ್ಥಿತರಿದ್ದರು. ಪುರಸಭೆ ಮಾಜಿ ಉಪಾಧ್ಯಕ್ಷ ರಾಮು ಕಲಾಲ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

