ಗದಗ

ಶುಲ್ಕ ಹೆಚ್ಚಳ: ಜೆಸಿ ಶಾಲೆ ಎದುರು ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಗದಗ, ಏ. 5
ಪ್ರಸ್ತುತ ಸಾಲಿನ ವಿದ್ಯಾರ್ಥಿಗಳ ಶಾಲಾ ಶುಲ್ಕದಲ್ಲಿ ರು. 6 ಸಾವಿರ ಹೆಚ್ಚಳಗೊಳಿಸಿರುವ ಕ್ರಮವನ್ನು ವಿರೋಧಿಸಿ ಶುಕ್ರವಾರ ನಗರದ ಜೆಸಿ ಶಾಲೆಯ ಮುಂದೆ ಪಾಲಕರು ಪ್ರತಿಭಟಿಸಿದರು.
ಗುರುವಾರದಿಂದಲೇ ಈ ವಿಷಯವಾಗಿ ಪಾಲಕರು ಮತ್ತು ಆಡಳಿತ ಮಂಡಳಿಯ ಮಧ್ಯೆ ತಿಕ್ಕಾಟ ನಡೆದಿದ್ದು, ಈ ಮಧ್ಯೆ ಶಾಲೆಯಲ್ಲಿನ ಕೆಲ ಆಡಳಿತಾತ್ಮಕ ಸಿಬ್ಬಂದಿಗಳು ಸಹಿತ ಅನುಚಿತವಾಗಿ ವರ್ತಿಸುವುದಲ್ಲದೇ, ಪಾಲಕರನ್ನು ನಿಂದಿಸಿದ್ದರು ಎನ್ನಲಾಗಿದೆ. ಇದರಿಂದ ಗುರುವಾರ ಸಂಜೆಯವರೆಗೂ ಸಹಿಸಿಕೊಂಡಿದ್ದ ಪಾಲಕರು ಸಂಜೆಯೇ ಸಣ್ಣ ಮಟ್ಟದ ಸಭೆಯನ್ನು ನಡೆಸಿ, ಈ ಕುರಿತು ಶುಕ್ರವಾರ ಶಾಲೆಗೆ ಎಲ್ಲ ಪಾಲಕರು ಒಟ್ಟಿಗೆ ಭೇಟಿ ನೀಡಿ ಹೆಚ್ಚುವರಿ ಶುಲ್ಕದ ಕುರಿತು ಪ್ರಶ್ನಿಸೋಣ ಎಂದು ನಿರ್ಧರಿಸಿದ್ದಾರೆ.
ಶುಕ್ರವಾರ ಎಲ್ಲ ಪಾಲಕರು ಒಟ್ಟಿಗೆ ಶಾಲೆಗೆ ಆಗಮಿಸಿ ಆಡಳಿತ ಮಂಡಳಿಯ ಕಾರ್ಯ ವೈಖರಿಯ ಬಗ್ಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಲು ಮುಂದಾದ ವೇಳೆಆವರಣದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪಾಲಕರು ತೀವ್ರ ಆಕ್ರೋಶ ಭರಿತರಾಗಿ ಆಡಳಿತ ಮಂಡಳಿಯನ್ನು ಟೀಕಿಸಿ, ಕೂಡಲೇ ಡಿಡಿಪಿಐ ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ, ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಾಲಕರು ಶಾಲಾ ಶುಲ್ಕವನ್ನು ಹೆಚ್ಚಿಸಿರುವ ಆಡಳಿತ ಮಂಡಳಿ ವಿರುದ್ಧ ಮಹಿಳೆಯರು ಸೇರಿದಂತೆ ಎಲ್ಲರೂ ಘೋಷಣೆಗಳನ್ನು ಕೂಗಿದರು. ಈ ಕೂಡಲೇ ಶುಲ್ಕ ಹೆಚ್ಚಳವನ್ನು ಕೈಬಿಡಬೇಕು. ಇಲ್ಲದೇ ಹೋದಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಇದರಿಂದಾಗಿ ಮತ್ತಷ್ಟು ಗೊಂದಲದ ವಾತಾವರಣ ಉಂಟಾಯಿತು. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗದಗ ನಗರ ಬಿಇಓ ಐ.ಬಿ.ಬೆನಕೊಪ್ಪ ಪಾಲಕರೊಂದಿಗೆ ಚರ್ಚಿಸಿದರು. ನಂತರ ಶಾಲೆಯಿಂದಾದ ಶುಲ್ಕ ಹೆಚ್ಚಳ ಕುರಿತು ಆಡಳಿತ ಮಂಡಳಿಯ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾ ನಿರತ ಪಾಲಕರು ಪ್ರತಿಭಟನೆಯನ್ನು ಕೈಬಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.