ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ
ಹಾವೇರಿ: ಪೊಲೀಸ್ ಪೇದೆಯೊರ್ವ ಕರ್ತವ್ಯದಲ್ಲಿದ್ದಾಗಲೇ ಬಂದೂಕಿನಿಂದ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ತಡಸ ಠಾಣೆಯಲ್ಲಿ ಜರುಗಿದೆ. ಗುರುನಾಥ ಮಿಳ್ಳಿ (29) ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಶುಕ್ರವಾರ ರಾತ್ರಿ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯ ಪೂರೈಸಿ ಶನಿವಾರ ಬೆಳಗಿನ 4.55ರ ಹೊತ್ತಿಗೆ ಠಾಣೆಗೆ ಮರಳಿದ್ದ ಗುರುನಾಥ, ಠಾಣೆಯಲ್ಲಿದ್ದ ಎಸ್‌ಎಚ್‌ಓಗೆ ಬಂದೂಕು ಹಾಗೂ ಗುಂಡುಗಳನ್ನು ಒಪ್ಪಿಸಿ ಮನೆಗೆ ತೆರಳಿದ್ದ. ಕರ್ತವ್ಯ ಇಲ್ಲದಿದ್ದರೂ ಬೆಳಗ್ಗೆ 7.30ಕ್ಕೆ ಠಾಣೆಗೆ ಮರಳಿದ ಮಿಳ್ಳಿ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಕೋಣೆಗೆ ತೆರಳಿ ಡಬಲ್ ಬಾರ್ ಬಂದೂಕಿನಿಂದ ಹಣೆಗೆ ಗುಂಡು ಹಾರಿಸಿಕೊಂಡು ಕ್ಷಣಾರ್ಧದಲ್ಲಿ ರಕ್ತದ ಮಡುವಿನಲ್ಲಿ ನೆಲಕ್ಕುರುಳಿದ. ಗಾಬರಿಯಾದ ಇತರ ಸಿಬ್ಬಂದಿ ತಕ್ಷಣ ವೈರ್‌ಲೆಸ್ ಮೂಲಕ ಠಾಣಾಧಿಕಾರಿ ಹಾಗೂ ಎಸ್ಪಿಗೆ ವಿಷಯ ತಿಳಿಸಿದರು.
ಮೂವರೇ ಸಿಬ್ಬಂದಿ: ಪೇದೆ ಗುರುನಾಥ ಠಾಣೆಗೆ ಬೆಳಗ್ಗೆ ಆಗಮಿಸಿದಾಗ ಕೇವಲ ಮೂವರು ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಅವರನ್ನು ಸ್ವಾಭಾವಿಕವಾಗಿಯೇ ಮಾತನಾಡಿದ ಮಿಳ್ಳಿ ಶಸ್ತ್ರಾಸ್ತ್ರ ಕೋಣೆಗೆ ತೆರಳಿದ್ದ. ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂಬ ಕಲ್ಪನೆಯೂ ಸಿಬ್ಬಂದಿಗೆ ಇರಲಿಲ್ಲ. ಕೋಣೆಯಿಂದ ಗುಂಡಿನ ಶಬ್ದ ಕೇಳಿ ಬಂದಾಗ ಬೆಚ್ಚಿಬಿದ್ದರು. ಧಾವಿಸಿ ನೋಡಿದಾಗ ಗುರುನಾಥ ಜೀವನ್ಮರಣ ಸ್ಥಿತಿಯಲ್ಲಿದ್ದ. ತಕ್ಷಣ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಗುರುನಾಥನ ಪ್ರಾಣಪಕ್ಷಿ ಹಾರಿ ಹೋಗಿದೆ.
ಎಸ್ಪಿ ರಾಠೋಡ್ ಭೇಟಿ: ಪೇದೆ ಡಬಲ್ ಬಾರ್ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿದೊಡನೆ ಎಸ್ಪಿ ಚೇತನ್ ಸಿಂಗ್ ರಾಠೋರ್ ಆತನ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲು ಆಸ್ಪತ್ರೆಗೆ ದೌಡಾಯಿಸಿದರು. ಅಷ್ಟರಲ್ಲಿ ಪೇದೆ ಮೃತಪಟ್ಟಿದ್ದ.
ವೈಯಕ್ತಿಕ ಕಾರಣವೇ?: 2008ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ಗುರುನಾಥ ಮೂರು ವರ್ಷಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದ. ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ಆತ್ಮಹತ್ಯೆಗೆ ವೈಯಕ್ತಿಕ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕರ್ತವ್ಯದಲ್ಲಿ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳ ಜತೆ ಉತ್ತಮ ಸಂಬಂಧ ಹೊಂದಿದ್ದ ಮಿಳ್ಳಿಯ ಆತ್ಮಹತ್ಯೆಗೆ ಕಾರಣವೇನೆಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಮುಗಿಲು ಮುಟ್ಟಿದ ಆಕ್ರಂದನ: ಗುರುನಾಥ ಗುಂಡು ಹಾರಿಸಿಕೊಂಡ ಸುದ್ದಿ ತಿಳಿದ ಕುಟುಂಬದ ಸದಸ್ಯರು ತಂಡೋಪತಂಡವಾಗಿ ಠಾಣೆ ಬಳಿ ಜಮಾಯಿಸಿದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

