ಬಿಜೆಪಿ ಮೊದಲ ಪಟ್ಟಿಯಲ್ಲಿ ಲಮಾಣಿ ಹೆಸರೇ ನಾಪತ್ತೆ
ಕನ್ನಡಪ್ರಭ ವಾರ್ತೆ, ಗದಗ, ಏ. 6
ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಶಿರಹಟ್ಟಿಯನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಹಾಲಿ ಶಾಸಕ ರಾಮಣ್ಣ ಲಮಾಣಿಗೆ ಬಿಜೆಪಿಯ ಮೊದಲನೇ ಪಟ್ಟಿಯಲ್ಲಿ ಟಿಕೆಟ್ ನೀಡದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಲಮಾಣಿಯವರು ಈ ಹಿಂದೆ ಕೆಜೆಪಿಯಲ್ಲಿ ಗುರುತಿಸಿಕೊಂಡು, ಮತ್ತೆ ಬಿಜೆಪಿಯಲ್ಲೇ ಉಳಿದಿದ್ದಾರೆ. ಅಲ್ಲದೆ 2011-12ನೇ ಸಾಲಿನ ಆಸ್ತಿ ವಿವರವನ್ನು ಲೋಕಾಯುಕ್ತರಿಗೆ ನೀಡುವಲ್ಲಿ ವಿಳಂಬ ಮಾಡಿದ್ದು, ಯಾವ ಕಾರಣದಿಂದ ಅವರ ಹೆಸರನ್ನು ಕೈ ಬಿಡಲಾಗಿದೆ ಎನ್ನುವುದು ಶಿರಹಟ್ಟಿ ಕ್ಷೇತ್ರದಲ್ಲಿ ಮಾತ್ರ ಇದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ರಾಮಣ್ಣ ಲಮಾಣಿ 2008ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಜಿಪಂ ಸದಸ್ಯರಾಗಿದ್ದರು. ನಂತರ ಕ್ಷೇತ್ರ ಮರು ವಿಂಗಡಣೆಯಲ್ಲಿ ಶಿರಹಟ್ಟಿಯನ್ನು ಮೀಸಲು ಕ್ಷೇತ್ರವನ್ನಾಗಿ ಘೋಷಣೆ ಮಾಡಿದ ನಂತರ ಅವರಿಗೆ ಅದೃಷ್ಟದ ಬಾಗಿಲು ತೆರೆದು, ಶಿರಹಟ್ಟಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ದೊರೆಯಿತು. ಬಿಜೆಪಿ ಪರ ಅಲೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದರು.
ಗೊಂದಲ: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಜೆಪಿಯಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಳ್ಳಾರಿ ರೆಡ್ಡಿಗಳು ಬಿಎಸ್ವೈ ವಿರುದ್ಧ ಬಂಡಾಯವೆದ್ದು, ಕೆಲವು ಶಾಸಕರನ್ನು ಹೈದ್ರಾಬಾದ್, ಗೋವಾ ರೆಸಾರ್ಟ್ನಲ್ಲಿಟ್ಟಾಗ ರಾಮಣ್ಣ ಲಮಾಣಿ ರೆಡ್ಡಿಗಳ ಆಪ್ತರಾಗಿ, ಬಿಎಸ್ವೈ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು. ನಂತರದ ಬೆಳವಣಿಗೆಯಲ್ಲಿ ಸದಾನಂದಗೌಡ ಸಿಎಂ ಆಗುವ ವೇಳೆಯಲ್ಲಿ ಬಿಎಸ್ವೈ ಜತೆ ಗುರುತಿಸಿಕೊಂಡರು. ಇದಾದ ಕೆಲ ದಿನಗಳಲ್ಲಿಯೇ ಶೆಟ್ಟರ್ ಸಿಎಂ ಆಗುವ ಸಂದರ್ಭದಲ್ಲಿಯೂ ಬಿಎಸ್ವೈ ಜತೆಯಲ್ಲಿಯೇ ಇದ್ದರು.
ಬಿಜೆಪಿಯಿಂದ ಬಿಎಸ್ವೈ ಸಿಡಿದು ಬಂದು ಕೆಜೆಪಿ ಸ್ಥಾಪನೆ ಮಾಡಿ, ಜನೆವರಿ 9ರಂದು ಹಾವೇರಿಯಲ್ಲಿ ನಡೆಸಿದ ಸಮಾವೇಶದಲ್ಲಿ ಬಹಿರಂಗವಾಗಿಯೇ ಕೆಜೆಪಿಯಲ್ಲಿ ಗುರುತಿಸಿಕೊಂಡು, ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ, ಸಿಎಂ ಶೆಟ್ಟರ್ ಹಾಗೂ ಪ್ರಲ್ಹಾದ ಜೋಶಿ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯಲ್ಲಿಯೇ ಉಳಿಯುವ ತೀರ್ಮಾನಕ್ಕೆ ಬಂದು, ನಾನು ಯಾವುದೇ ಕಾರಣಕ್ಕೂ ಕೆಜೆಪಿಗೆ ಹೋಗುವುದಿಲ್ಲ ಎಂದು ತಿಳಿಸಿ, ವಿದೇಶಕ್ಕೆ ಹಾರಿದರು.
ಆಸ್ತಿ ವಿವರ ಸಲ್ಲಿಸಿಲ್ಲ: ರಾಜ್ಯದ 12 ಶಾಸಕರು 2010-11ನೇ ಸಾಲಿನ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತರಿಗೆ ನೀಡಿಲ್ಲ ಎಂದು ಲೋಕಾಯುಕ್ತ ಭಾಸ್ಕರ್ರಾವ್ ಈಚೆಗೆ ರಾಜ್ಯಪಾಲ ಹಂಸರಾಜ ಭಾರದ್ವಾಜ, ಸ್ವೀಕರ್ ಬೋಪಯ್ಯ ಅವರಿಗೆ ಪತ್ರ ಬರೆದು, ಆಸ್ತಿ ವಿವರ ನೀಡದವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದರು. ಆ 12 ಶಾಸಕರಲ್ಲಿ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೆಸರು ಮೊದಲ ಸ್ಥಾನದಲ್ಲಿದ್ದು, ಆಸ್ತಿ ವಿವರ ಸಲ್ಲಿಸಲು ನೀಡಿದ್ದ ಗಡುವು ಮುಗಿದು 8 ತಿಂಗಳು ಗತಿಸಿದರೂ ಆಸ್ತಿ ವಿವರ ಸಲ್ಲಿಸದೇ ಇರುವುದು ಪ್ರಥಮ ಪಟ್ಟಿಯಿಂದ ಅವರ ಹೆಸರು ಕೈ ತಪ್ಪಲು ಪ್ರಮುಖ ಕಾರಣ ಎಂದು ಬಿಜೆಪಿಯ ಆಪ್ತ ವಲಯಗಳು ಖಚಿತ ಪಡಿಸುತ್ತಿವೆ.
ಜನತೆಗೆ ಬೇಸರ: ರಾಮಣ್ಣ ಲಮಾಣಿ ಆಯ್ಕೆಯಾದ ನಂತರ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಹೆಚ್ಚಿನ ಗಮನ ನೀಡಿದ್ದಾರೆ. ಆದರೆ, ಪದೆಪದೇ ಬಿಜೆಪಿಯ ಬಣ ರಾಜಕೀಯದಲ್ಲಿ ಗೊಂದಲಗಳ ಮೇಲೆ ಗೊಂದಲ ಸೃಷ್ಟಿ ಮಾಡಿಕೊಂಡಿದ್ದು, ಕ್ಷೇತ್ರದ ನೈಜ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ ಎಂದು ಹಲವರು 'ಕನ್ನಡಪ್ರಭ'ಕ್ಕೆ ತಮ್ಮ ನೋವು ತಿಳಿಸಿದರು. ಅಲ್ಲದೆ ವಿರೋಧ ಪಕ್ಷಗಳಿಗೂ ಇವರನ್ನು ಟೀಕೆ ಮಾಡಲು ಪ್ರಮುಖ ಅಸ್ತ್ರವಾದಂತಾಗಿದೆ.
ಪಕ್ಷೇತರರಾಗಿ ಸ್ಪರ್ಧಿಸಿದರೂ ಆಶ್ಚರ್ಯವಿಲ್ಲ: ರಾಮಣ್ಣ ಲಮಾಣಿ ಅವರಿಗೆ ಬಿಜೆಪಿ 2ನೇ ಲಿಸ್ಟ್ನಲ್ಲಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಟಿಕೆಟ್ ತಪ್ಪಿದಲ್ಲಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಆದ್ದರಿಂದ ಅವರ ಬೆಂಬಲಿಗರೇ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದ್ದು, ಪಕ್ಷ ಟಿಕೆಟ್ ನೀಡದಿದ್ದಲ್ಲಿ ಅನಿವಾರ್ಯವಾಗಿ ಬಂಡಾಯ ಎದುರಿಸಬೇಕಾಗುತ್ತದೆ.
ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸುವಲ್ಲಿ ಅಲ್ಪ ವಿಳಂಬವಾಗಿದೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ಮೊದಲನೇ ಲಿಸ್ಟ್ನಲ್ಲಿ ನನ್ನ ಹೆಸರು ಪ್ರಕಟಿಸದೇ ಇರುವುದಕ್ಕೆ ಇಲ್ಲದ ಗೊಂದಲ ಸೃಷ್ಟಿಸುವುದು ಬೇಡ. 2ನೇ ಪಟ್ಟಿಯಲ್ಲಿ ನನ್ನ ಹೆಸರು ಪ್ರಕಟವಾಗುತ್ತದೆ. ಪಕ್ಷದ ವರಿಷ್ಠರ ಮೇಲೆ ನನಗೆ ವಿಶ್ವಾಸವಿದೆ. ಒಂದು ವೇಳೆ 2ನೇ ಲಿಸ್ಟ್ನಲ್ಲಿಯೂ ನನ್ನ ಹೆಸರು ಪ್ರಕಟವಾಗದೇ ಇದ್ದಲ್ಲಿ ಕ್ಷೇತ್ರದ ಜನತೆಯೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ.
- ರಾಮಣ್ಣ ಲಮಾಣಿ, ಶಾಸಕರು. ಶಿರಹಟ್ಟಿ ಮೀಸಲು ಕ್ಷೇತ್ರ
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

