ಗದಗ

ಬೇಲೆಕೇರಿ ಅದಿರು: 7 ಅಧಿಕಾರಿಗಳಿಗೆ ಜೈಲು ಖಚಿತ

Published On :

ಗದಗ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ 7 ಹಿರಿಯ ಅಧಿಕಾರಿಗಳ ಕೈವಾಡ ಇರುವುದು ಸಾಬೀತಾಗಿದ್ದು, ಇವರುಗಳ ವಿರುದ್ಧ ಸಿಬಿಐ ತನಿಖೆ ನಡೆಸುತಿದ್ದು, ಈ ಅಧಿಕಾರಿಗಳು ಜೈಲು ಸೇರುವುದು ಖಚಿತ ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.  ಅವರು ಗುರುವಾರ ಹೊಸಪೇಟೆಯಿಂದ ಧಾರವಾಡಕ್ಕೆ ತೆರಳುವಾಗ ಮಾರ್ಗ ಮಧ್ಯ ಲಕ್ಕುಂಡಿಯಲ್ಲಿ ಮಾತನಾಡಿ, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಪಿಸಿಸಿಎಫ್ ಅಧಿಕಾರಿಗಳಾದ ಶ್ರೀವಾಸ್ತವ್, ಎಸ್. ನಾಗರಾಜ್, ಎಪಿಸಿಸಿಎಫ್ ಅಧಿಕಾರಿ ಎಸ್. ರಾಜೇಂದ್ರನ್, ಇಂದುಧರ್ ಬಿ, ಪುಟದಯ್ಯ ಎಸ್.ಎಂ, ಸಿ.ಡಿ. ದಾನಯ್ಯ, ಸಿಸಿಎಫ್ ಅಧಿಕಾರಿ ಮನೋಜಕುಮಾರ ಶುಕ್ಲಾ ಈ 7 ಜನರು ಸೇರಿದಂತೆ ಎಸಿಎಫ್ ಶ್ರೀನಿವಾಸನ್ ಈ ಪ್ರಕರಣದಲ್ಲಿನ ಪ್ರಮುಖ ಆರೋಪಿಗಳಾಗಿದ್ದಾರೆ. ಆಂಧ್ರಪ್ರದೇಶದ ಗಡಿಭಾಗದ ಚೆಕ್‌ಪೋಸ್ಟ್ ನಾಶಪಡಿಸಿದ ಅಲಿಖಾನ್ ಹಾಗೂ ಗಾಲಿ ಜನಾರ್ಧನರೆಡ್ಡಿ ಅವರು ತುಮಟಿ ಮತ್ತು ವಿಟ್ಲಾಪುರ ಚೆಕ್‌ಪೋಸ್ಟ್ ಧ್ವಂಸಗೊಳಿಸಿದ್ದರು ಎಂದು ದೂರಿದ ಅವರು, ಅಂದಿನ ಎಸ್‌ಪಿ ಸಂಪತ್‌ಕುಮಾರ್ ಅವರು 31 ಲಕ್ಷ ಮೆಟ್ರಿಕ್ ಟನ್ ಅಕ್ರಮ ಅದಿರಿಗೆ ಬೆಂಗಾವಲಾಗಿ ನಿಂತು ಅದಿರು ಸಾಗಿಸಿದ್ದಾರೆ ಎಂದು ಆರೋಪಿಸಿದರು. ಈ ಅದಿರು ಸಾಗಾಟದಲ್ಲಿ ಎಡಿಸಿ ಅಶೋಕ ಕುರೇರ, ಡಿವೈಎಸ್‌ಪಿ ಹನುಮಂತಪ್ಪ ತುರಾಯಿ, ಪಿಎಸ್‌ಐ ಅಧಿಕಾರಿಗಳಾದ ದೇವೆಂದ್ರಪ್ಪ, ಹುಲ್ಲೂರು, ಸಿಪಿಐ ರಮಾಕಾಂತ್ ಅವರು ಸಹಾಯ ಮಾಡಿರುವುದು ಸಿಬಿಐ ತನಿಖೆಯಿಂದ ಕಂಡುಬಂದಿದೆ ಎಂದರು. ಈ ಸಂದರ್ಭದಲ್ಲಿ ಐ.ಜಿ. ಪುಲ್ಲೆ, ಬಸನಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ನಾಪತ್ತೆ
ಗದಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಬರುವುದಾಗಿ ಹೇಳಿ ಮನೆಯಿಂದ ಹೋದ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾದ ಘಟನೆ ಬೆಟಗೇರಿಯಲ್ಲಿ ಜರುಗಿದೆ. ನಿಖಿತಾ ಏಕಬೋಟೆ ನಾಪತ್ತೆಯಾದ ವಿದ್ಯಾರ್ಥಿನಿ. ಇವಳನ್ನು ಯಾರೋ ಅಪಹರಿಸಿಕೊಂಡು ಹೋಗಿರುವುದಾಗಿ ತಂದೆ ತಿಪ್ಪಣ್ಣ ಏಕಬೋಟೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಾದಾಗೆಂಪು ಮೈಬಣ್ಣ, ಉದ್ದನೆಯ ಮುಖ, ನೀಟಾದ ಮೂಗನ್ನು ಹೊಂದಿದ್ದು, ಈ ಚಹರೆಯುಳ್ಳ ಬಾಲಕಿಯು ಪತ್ತೆಯಾದಲ್ಲಿ ಬೆಟಗೇರಿ ಪೊಲೀಸ್ ಠಾಣೆ ದೂ. 08372-246333, 235655 ಇಲ್ಲಿಗೆ ಸಂಪರ್ಕಿಸುವಂತೆ ಬೆಟಗೇರಿ ಪೊಲೀಸ್ ಠಾಣೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮೂಹಿಕ ವಿವಾಹ: ಹೆಸರು ನೋಂದಾಯಿಸಲು ಸೂಚನೆ
ನರಗುಂದ: ತಾಲೂಕಿನ ಕಲ್ಲಾಪುರ ಗ್ರಾಮದ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಗ್ರಾಮೀಣ ಶಿಕ್ಷಣ ಸಂಸ್ಥೆ ಕಲ್ಲಾಪುರ ಗ್ರಾಮದ ವತಿಯಿಂದ ಮೇ 20ರ 11.15 ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರಣ ಆಸಕ್ತ ಸಾರ್ವಜನಿಕರು ಸಾಮೂಹಿಕ ವಿವಾಹಗಳಲ್ಲಿ ವಿವಾಹವಾಗಲು ಇಚ್ಛಿಸುವವರು ಹೆಸರು ನೋಂದಾಯಿಸಲು ಮೇ 10ರೊಳಗೆ ನೋಂದಾಯಿಸಬೇಕು ಎಂದು ಸೇವಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.