ಭೀಷ್ಮ ಕೆರೆಗೆ ಕಲುಷಿತ ನೀರು: ಮೀನುಗಳ ಮಾರಣ ಹೋಮ
ಕನ್ನಡಪ್ರಭ ವಾರ್ತೆ, ಗದಗ, ಏ. 12
ಗದಗ-ಬೆಟಗೇರಿ ಅವಳಿ ನಗರದಲ್ಲೇ ಭೀಷ್ಮ (ಬಿಸಿ) ಕೆರೆ ಅತಿ ದೊಡ್ಡ ಕೆರೆಯಾಗಿದೆ. ಕೆಲವು ಮೀನು ಸಾಕಾಣಿಕಾ ಗುತ್ತಿಗೆದಾರರು ಕೆರೆಯ ಎಡಭಾಗದಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ, ಈಗ ಇದಕ್ಕೆ ಕಂಟಕ ಎದುರಾಗಿದ್ದು, ಮೀನು ಸಾಕಾಣಿಕೆಗೆ ಬಳಕೆ ಮಾಡಿಕೊಳ್ಳಲಾಗಿದ್ದ ಕೆರೆಗೆ ಕಲುಷಿತ ನೀರು ಸೇರಿದ ಹಿನ್ನೆಲೆಯಲ್ಲಿ ಸಾವಿರಾರು ಮೀನು ಸಾಯುತ್ತಿವೆ.
ಭೀಷ್ಮಕೆರೆಗೆ ಮಳೆಯ ನೀರು ಹೋಗಲು ಯಾವುದೇ ರೀತಿ ಕಾಲುವೆಗಳಿಲ್ಲ. ಈ ಹಿಂದೆ ಇದ್ದ ಕೆಲವು ಕಾಲುವೆಗಳು ಇಂದು ಇಲ್ಲದಂತಾಗಿದ್ದು, ಇದಕ್ಕೆ ಪ್ರಮುಖ ಕಾರಣ ಕೆರೆಯ ಸುತ್ತಮುತ್ತಲೂ ತಲೆ ಎತ್ತಿರುವ ಅಕ್ರಮ ಕಟ್ಟಡಗಳು. ಇನ್ನು ಕಳಸಾಪುರ ರಸ್ತೆಗೆ ಹೊಂದಿಕೊಂಡಿರುವ ಭೀಷ್ಮಕೆರೆಗೆ ಬರುವ ಬಹುತೇಕ ನೀರು ಚರಂಡಿ ನೀರಾಗಿದೆ. ನಗರದ ಹುಡ್ಕೋ ಕಾಲೋನಿಯ ಚರಂಡಿ ನೀರು ಕೆರೆಗೆ ಸೇರುತ್ತಿದೆ ಹಾಗಾಗಿ ಕೆರೆಯ ನೀರು ಕಲುಷಿತವಾಗುತ್ತಿದೆ.
ಮೀನುಗಳ ಸಾವು: ಈಗಾಗಲೇ ಭೀಷ್ಮ ಕೆರೆಯ ಬಲಭಾಗದಲ್ಲಿನ ಕಳಸಾಪುರ ರಸ್ತೆಗೆ ಹೊಂದಿಕೊಂಡಿರುವ ಕೆರೆಯಲ್ಲಿ ಕೆಲವು ಖಾಸಗಿ ಗುತ್ತಿಗೆದಾರರು ಲಕ್ಷಾಂತರ ಹಣ ಖರ್ಚುಮಾಡಿ ಮೀನು ಸಾಕಾಣಿಕೆ ನಡೆಸುತ್ತಿದ್ದಾರೆ. ಈ ನೀರು ಬಹುತೇಕ ಕಲುಷಿತಗೊಂಡಿದ್ದು, ಕಳೆದ ಬುಧವಾರ ಹಾಗೂ ಗುರುವಾರ ಈ ಎರಡೇ ದಿನಗಳಲ್ಲಿ ಸುಮಾರು ರು. 2 ಲಕ್ಷಕ್ಕೂ ಅಧಿಕ ಮೌಲ್ಯದ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ.
ಗಬ್ಬೆದ್ದು ನಾರುತ್ತಿರುವ ಭೀಷ್ಮಕೆರೆ: ಭೀಷ್ಮಕೆರೆಯನ್ನು ಸುಂದರಗೊಳಿಸಲು ಜಿಲ್ಲಾಡಳಿತ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆರೆಯ ಒಳಾಂಗಣದಲ್ಲಿ ಸುಂದರ ಉದ್ಯಾನವನ್ನು ಕೆಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆಯಾದರೂ ಅದರ ಸಂರಕ್ಷಣೆಗೆ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಅದು ಹಾಳಾಗಿ ಹೋಗಿದೆ. ಇದೇ ಕೆರೆಯ ಮಧ್ಯದಲ್ಲಿ ಬಸವೇಶ್ವರರ 111 ಅಡಿಯ ಮೂರ್ತಿಯನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಕೆರೆಯು ಸುಂದರವಾಗಿರಲು ಹಾಗೂ ನಗರ ಸುಂದರವಾಗಿರಲು ಕೆರೆ ಹಾಗೂ ಕೆರೆಯ ನೀರು ಪ್ರಮುಖ. ಆದರೆ, ಈ ಕೆರೆಯ ನೀರನ್ನು ಸಂರಕ್ಷಿಸುವಲ್ಲಿ, ಶುಚಿಗೊಳಿಸುವಲ್ಲಿ ನಗರಸಭೆ, ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿವೆ ಎಂಬುದು ಸಾರ್ವಜನಿಕರ ಆಭಿಪ್ರಾಯವಾಗಿದೆ. ಈ ಕೂಡಲೇ ನಗರಸಭೆ, ಜಿಲ್ಲಾಡಳಿತ ಈ ಕಲುಷಿತಗೊಂಡಿರುವ ನೀರನ್ನು ಶುಚಿಗೊಳಿಸುವ ಕಾರ್ಯಕೈಗೊಂಡಲ್ಲಿ ಅಲ್ಪ ಪ್ರಮಾಣದಲ್ಲಿರುವ ಮೀನುಗಳಾದರೂ ಉಳಿಯಬಹುದಾಗಿದೆ.
- ಅಜೀಜಅಹ್ಮದ ಬಳಗಾನೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

