ಕಾಂಗ್ರೆಸ್ಸಿಗರು ಗೂಂಡಾಗಿರಿ ನಿಲ್ಲಿಸಲಿ: ಮೆಣಸಿನಕಾಯಿ
ಗದಗ: ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪಾದಯಾತ್ರೆ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಎಚ್.ಕೆ.ಪಾಟೀಲ ಬೆಂಬಲಿಗರು ಆಗಮಿಸಿ ಜನರಲ್ಲಿ ಇಲ್ಲ ಸಲ್ಲದ ಹೇಳಿಕೆ ನೀಡಿ ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಗೂಂಡಾಗಿರಿ ನಿಲ್ಲಿಸಲಿ ಎಂದು ಗದಗ ವಿಧಾನಸಭಾ ಮತಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹೇಳಿದರು.
ಅವರು ಶುಕ್ರವಾರ ನಗರದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2 ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ನಾನು ಹಾಗೂ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರ ಪಾದಯಾತ್ರೆ, ಸ್ಲಂ ವಾಸ್ತವ್ಯ ಕೈಗೊಳ್ಳಲಾಗಿದೆ. ಅದರಂತೆ ಗುರುವಾರ ಎಸ್.ಎಂ. ಕೃಷ್ಣಾ ನಗರದಲ್ಲಿ ಪಾದಯಾತ್ರೆ ಕೈಗೊಂಡು ಪಕ್ಷದ ಕಾರ್ಯಕರ್ತ ಗೋವಿಂದ ಗುತ್ತಿ ನಿವಾಸದಲ್ಲಿ ವಾಸ್ತವ್ಯ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ನ 20ಕ್ಕೂ ಹೆಚ್ಚು ಕಾರ್ಯಕರ್ತರು ಎಸ್.ಎಂ.ಕೃಷ್ಣಾ ನಗರಕ್ಕೆ ಆಗಮಿಸಿ ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ.
ಅಲ್ಲದೇ ನಮ್ಮ ಪಕ್ಷದ ಕಾರ್ಯಕರ್ತರು ಹಣ, ಹೆಂಡ, ಸೀರೆ ಹಂಚುತ್ತಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರ ಮೇಲೆ ದಾಂಧಲೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಇಲ್ಲದೇ ಹೋದಲ್ಲಿ ಇನ್ನೂ ಹೆಚ್ಚಿನ ಅನಾಹುತವಾಗುವ ಸಂಭವವಿತ್ತು. ಕಾಂಗ್ರೆಸ್ನ ಕಾರ್ಯಕರ್ತರು ನಡೆಸುತ್ತಿರುವ ಈ ಗೂಂಡಾಗಿರಿ ಸಂಸ್ಕೃತಿಯನ್ನು ಮೊದಲು ನಿಲ್ಲಿಸಲಿ. ಮಾಜಿ ಸಚಿವ ಎಚ್.ಕೆ.ಪಾಟೀಲರ ಮೇಲೆ ನಮಗೆ ಗೌರವವಿದೆ. ಆದರೆ, ಬಿಎಸ್ಆರ್ ಕಾಂಗ್ರೆಸ್ ಎಲ್ಲಿ ಗೆಲ್ಲುವುದೋ ಎಂಬ ಭಯದಲ್ಲಿ ಈ ರೀತಿಯ ಕೀಳು ಮಟ್ಟದ ರಾಜಕಾರಣ ನಡೆಸುತ್ತಿರುವುದು ಖಂಡನಾರ್ಹವಾಗಿದೆ.
ಜನರು ಜಾಗೃತರಾಗಿದ್ದು, ಈ ಹಿಂದೆ ಗೂಂಡಾ ಸಂಸ್ಕೃತಿ ನಡೆಸಿ ಶಾಸಕ, ಸಚಿವರಾದಂತೆ ಈಗ ಚುನಾಯಿತರಾಗಲು ಸಾಧ್ಯವಿಲ್ಲ. ಜನರು ಜಾಗೃತರಾಗಿದ್ದು, ಇದೇ ರೀತಿ ಗೂಂಡಾ ಸಂಸ್ಕೃತಿ ಅನುಸರಿಸಿದಲ್ಲಿ ಕಾಂಗ್ರೆಸ್ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಇಂತಹ ಗೂಂಡಾ ಸಂಸ್ಕೃತಿಗೆ ನಮ್ಮ ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ. ನಾವು ಕೈಗೊಂಡಿರುವ ಪಾದಯಾತ್ರೆ ಮುಂದುವರೆಯಲಿದ್ದು, ಶುಕ್ರವಾರ ಜವುಳ ಗಲ್ಲಿಯಲ್ಲಿ ಪಾದಯಾತ್ರೆ, ವಾಸ್ತವ್ಯ, ನಂತರ ಹಮಾಲರ ಕಾಲೋನಿ, ವಡ್ಡರಗಲ್ಲಿ, ಹರಿಣಶಿಕಾರಿ, ಸಿಕ್ಕಲಗಾರ ಓಣಿಯಲ್ಲಿ ಪಾದಯಾತ್ರೆ, ವಾಸ್ತವ್ಯ ಹಮ್ಮಿಕೊಳ್ಳಲಾಗುವುದು. ನಂತರ ಗ್ರಾಮೀಣ ಪ್ರದೇಶಗಳಲ್ಲಿ ಪಾದಯಾತ್ರೆ, ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗುವುದು ಎಂದರು.
ನಗರಸಭೆ ಸದಸ್ಯ ಎಂ.ಎಚ್. ಮುಳಗುಂದ ಸುದ್ದಿಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

