ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ: ಕರಿಗೌಡ್ರ
ಮುಂಡರಗಿ: ನಾವು ಯಾವುದೇ ಜಾತಿ-ಭೇದವಿಲ್ಲದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಇದನ್ನು ಸಹಿಸದ ಕೆಲವರು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಬಿಜೆಪಿ ಎಂದಿಗೂ ಅಲ್ಪಸಂಖ್ಯಾತರ ವಿರೋಧಿಯಲ್ಲ ಎಂದು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಹೇಳಿದರು. ಈಚೆಗೆ ಅವರು ಪಟ್ಟಣದ ಎಸ್.ಎಸ್. ಪಾಟೀಲ ನಗರದಲ್ಲಿ ಕಾಂಗ್ರೆಸ್, ಬಿ.ಎಸ್.ಆರ್. ಪಕ್ಷದಿಂದ ಅನೇಕ ಜನ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿದರು. ಅಬ್ದುಲ್ಗಫಾರ ಔರಂಗ್, ಹನಮಂತಪ್ಪ ಚೂರಿ, ಶಿವಪುತ್ರಪ್ಪ ಕುರಿ, ಯಂಕಪ್ಪ ಮಲಾರ್ಜಿ, ಅಂದಪ್ಪ ಹೂಗಾರ, ಹುಸೇನಸಾಬ ನಸೇಖಾನ, ನಿಂಗಪ್ಪ ಹಿರೇಮನಿ, ಹನಮಂತಪ್ಪ ಬಟ್ಟೂರ, ಹುಲುಗಪ್ಪ ಕೊಪ್ಪಳ, ಹನಮಂತಪ್ಪ ಕಟ್ಟೆನ್ನವರ, ದಸ್ತಗಿರಿಸಾಬ ಹೊಸಮನಿ, ಅಡಿವೆಪ್ಪ ಚಲವಾದಿ ಸೇರಿದಂತೆ 50 ಕ್ಕೂ ಹೆಚ್ಚು ಜನ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಶಹರ ಬಿಜೆಪಿ ಅಧ್ಯಕ್ಷ ರಜನೀಕಾಂತ ದೇಸಾಯಿ, ಯುವಮೋರ್ಚಾ ಅಧ್ಯಕ್ಷ ಮಂಜುನಾಥ ಕಾಗನೂರ, ಆರ್.ಎಂ. ತಪ್ಪಡಿ, ಸುರೇಶ ಜೈನ್, ಸುರೇಶ ಕ್ಯಾದಿಗಿಹಳ್ಳಿ, ಎಸ್.ವಿ. ಪಾಟೀಲ ಇದ್ದರು.
ಬಿಜೆಪಿ ಸೇರ್ಪಡೆ
ನರಗುಂದ: ನರಗುಂದ ವಿಧಾನಸಭಾ ಮತಕ್ಷೇತ್ರದ ಚಿಕ್ಕನರಗುಂದ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಎಪಿಎಂಸಿ ಸದಸ್ಯ ರುದ್ರಗೌಡ ರಾಚನಗೌಡ್ರ, ಪಡಿಯಪ್ಪ ಬಾಚಿ, ನಿಂಗಪ್ಪ ಯರಗಟ್ಟಿ, ರವಿ ಕರಿಯವರು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡರು. ಅಣ್ಣಪ್ಪಗೌಡ ಪಾಟೀಲ, ಸಂಗನಗೌಡ ಪಾಟೀಲ, ಚಂದ್ರು ದಂಡಿನ, ಎಂ.ಬಿ. ಜ್ಞಾನೋಪಂತ, ವಿ.ಬಿ. ಕುರಹಟ್ಟಿ, ನಿಂಗಪ್ಪ ಗಾಣಿಗೇರ, ಮಲ್ಲಪ್ಪ, ತಿಪ್ಪಣ್ಣ ಕಲಹಾಳ, ಎಸ್.ಪಿ. ಹೂಲಿ, ಈರಪ್ಪ ಹೊಂಗಲ, ಸುರೇಶ ಭೂಮಣ್ಣವರ, ಬಿ.ಎಸ್. ಹನುಮಂತಗೌಡ್ರ ಮುಂತಾದವರು ಉಪಸ್ಥಿತರಿದ್ದರು.
ದಾಳಿ: ಮದ್ಯ ವಶ
ರೋಣ: ತಾಲೂಕಿನ ಗಜೇಂದ್ರಗಡ ತಾಂಡಾ, ನೆಲ್ಲೂರ ತಾಂಡಾ ಮತ್ತು ಸರ್ಜಾಪುರ ತಾಂಡಾಗಳಲ್ಲಿ ಭಾನುವಾರ ಅಬಕಾರಿ, ಅಬಕಾರಿ ಲಾಟರಿ ಮತ್ತು ನಿಷೇಧ ದಳ ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಕಳ್ಳ ಭಟ್ಟಿ ಸಾರಾಯಿ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಮದ್ಯವಶ ಪಡಿಸಿಕೊಂಡಿದ್ದಾರೆ. ಸುಮಾರು ರು. 8 ಸಾವಿರ ಮೌಲ್ಯದ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡು, ರು. 22 ಸಾವಿರ ಮೌಲ್ಯದ ಸುಮಾರು 1100 ಲೀಟರ್ ಬೆಲ್ಲದ ರಸಾಯನ ನಾಶಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಘವೇಂದ್ರ ರಾಠೋಡ, ಚಂದ್ರು ರಾಠೋಡ ಮತ್ತು ಗೀತಾ ರಾಠೋಡ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಇನಸ್ಪೆಕ್ಟರ್ ಶಂಕರ ರಾಗಿ ಇವರ ನೇತೃತ್ವದಲ್ಲಿ ರೋಣ ತಾಲೂಕು ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿ, ಮಲ್ಲಿಕಾರ್ಜುನ ರಡ್ಡಿ, ಗಜೇಂದ್ರಗಡ ಪಿಎಸ್ಐ ವೀರಾರಡ್ಡಿ, ಎಸ್.ಎನ್. ಚಿಕ್ಕನ್ನವರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರು. 3.89 ಲಕ್ಷ ನಗದು ವಶ
ಗದಗ: ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಚೆಕ್ಪೋಸ್ಟ್ ಬಳಿ ಗ್ರಾಮೀಣ ಠಾಣೆ ಪೊಲೀಸರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರು. 3.89 ಲಕ್ಷ ವಶಪಡಿಸಿಕೊಂಡ ಘಟನೆ ಭಾನುವಾರು ರಾತ್ರಿ ಜರುಗಿದೆ. ಗಜೇಂದ್ರಗಡದಿಂದ ಹುಬ್ಬಳ್ಳಿಗೆ ಸಾಗಿಸಲಾಗುತ್ತಿದ್ದ ಈ ಹಣವನ್ನು ವಶಪಡಿಸಿಕೊಂಡ ಪೊಲೀಸರು ಹಣ ಸಾಗಣೆಗೆ ಬಳಸಿಕೊಂಡಿದ್ದ ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬಸವರಾಜ ಸಂಕನೂರ ಹಾಗೂ ಶಂಕ್ರಪ್ಪ ತಳವಾರ ಎಂಬುವವರ ಮೇಲೆ ಗದಗ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
ಬಿಎಸ್ವೈ ಅಭಿವೃದ್ಧಿ ಕಾರ್ಯಗಳೇ ಗೆಲವಿಗೆ ಶ್ರೀರಕ್ಷೆ
ನರೇಗಲ್ಲ: ರಾಜ್ಯದಲ್ಲಿ 60 ವರ್ಷಗಳಿಂದ ಅಧಿಕಾರ ನಡೆಸಿದ ಯಾವ ಸರ್ಕಾರವೂ ಮಾಡಲಾರದಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಿ.ಎಸ್. ಯಡಿಯೂರಪ್ಪನವರು ಕೇವಲ ತಮ್ಮ ಮೂರುವರೆ ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳೇ ಕೆಜೆಪಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ರೋಣ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಶರಣಬಸವ ಮೆಣಸಿನಕಾಯಿ ಹೇಳಿದರು. ಅವರು ಈಚೆಗೆ ಸ್ಥಳೀಯ ಜೊಂಡಿಗೇರಿ ಓಣಿಯಲ್ಲಿ ಕೆಜೆಪಿ ಕಾರ್ಯಕರ್ತರ ಸೇರ್ಪಡೆ ಮತ್ತು ಪ್ರಚಾರ ಕಾರ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪನವರು ಕಟ್ಟಿದ ಕೆಜೆಪಿ ಗೆಲುವು ನಿಶ್ಚಿತ. 45 ವರ್ಷಗಳಿಂದ ಬಿಜೆಪಿ ಕಟ್ಟಿ ಬೆಳೆಸಿದರೂ ಬಿಜೆಪಿ ರಾಷ್ಟ್ರೀಯ ನಾಯಕರು ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದರು. ರೋಣ ಮತಕ್ಷೇತ್ರದ ಮತದಾರರು ಈ ಭಾರಿಯ ಚುನಾವಣೆಯಲ್ಲಿ ಹಿಂದೆಂದೂ ಕಾಣದ ಬದಲಾವಣೆಯನ್ನು ಎಲ್ಲ ಪಕ್ಷದ ನಾಯಕರಿಗೆ ತೋರಿಸಲಿದ್ದಾರೆ. ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆಚ್ಚಿ ಮತದಾನ ಮಾಡುವವರು ನಮ್ಮ ಪಕ್ಷಕ್ಕೆ ಮತ ನೀಡುತ್ತಾರೆ. ಇದರಿಂದ ನಮ್ಮ ಪಕ್ಷದ ಗೆಲುವು ಖಂಡಿತ ಎಂದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

