ಗದಗ

ಕಳಸಾ-ಬಂಡೂರಿ ಯೋಜನೆ ಪೂರ್ಣಗೊಳಿಸುತ್ತೇವೆ: ಸಿಎಂ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಏ. 22
ರಾಜ್ಯದಲ್ಲಿ ಬಹುದಿನಗಳಿಂದ ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ವಂಚಿತಗೊಂಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಳಸಾ ಬಂಡೂರಿ ಯೋಜನೆ ಪ್ರಾರಂಭವಾಗಿದ್ದು, ಈ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಅವರು ಸೋಮವಾರ ಪಟ್ಟಣದ ಗಾಂಧಿಚೌಕ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಪರ ಮತಯಾಚನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಈ ಭಾಗದ ರೈತ ಸಮುದಾಯದ ಬೇಡಿಕೆಯಾದ ಕಳಸಾ ಬಂಡೂರಿ ಯೋಜನೆ ಮಲಪ್ರಭಾ ಜಲಾಶಯಕ್ಕೆ ಜೋಡಣೆ ಕಾಮಗಾರಿ ನಮ್ಮ ಅಧಿಕಾರದ ಅವಧಿಯಲ್ಲಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಮತ್ತೆ ಈ ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಹೆದರಿಕೆಯಿಂದ ಕಾಂಗ್ರೆಸ್ ಪಕ್ಷದವರು ಅರಣ್ಯ ಪ್ರದೇಶ, ಇತರೆ ನೆಪ ಹೇಳಿ ಗೋವಾ ರಾಜ್ಯದವರಿಂದ ತಕರಾರು ಮಾಡಿ, ನ್ಯಾಯಾಧೀಕರಣ ನೇಮಕ ಮಾಡಿ ಕಾಮಗಾರಿ ವಿಳಂಬಕ್ಕೆ ಕಾರಣರಾಗಿದ್ದಾರೆಂದು ಕಾಂಗ್ರೆಸ್ ಪಕ್ಷದವರನ್ನು ಟೀಕಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಈ ಕಳಸಾ ಬಂಡೂರಿ ಯೋಜನೆ ಕುರಿತು ಮಾತನಾಡುವ ಹಕ್ಕಿಲ್ಲ. ಕೇಂದ್ರದಲ್ಲಿ ಯುಪಿಎ ಆಡಳಿತ ನಡೆಸುತ್ತಿದ್ದು, ಈ ಭಾಗದ ಜನರ ಮೇಲೆ ಅಷ್ಟು ಪ್ರೀತಿ, ಕಾಳಜಿ ಇದ್ದಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ಕಾಮಗಾರಿ ಪೂರ್ಣಗೊಳಿಸಬಹುದಾಗಿತ್ತು. ಆದರೆ, ಸಿದ್ದರಾಮಯ್ಯ ಈ ಕೆಲಸಕ್ಕೆ ಕೈ ಹಾಕದೆ ಇರುವುದು ಈ ಭಾಗದ ಜನರಿಗೆ ಗೊತ್ತಿರುವ ವಿಷಯ. ಹಾಗಾಗಿ ಈ ಕಾಮಗಾರಿಯ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ. ಕೇಂದ್ರದಲ್ಲಿ ಈ ಬಾರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗುತ್ತಾರೆ. ನಮ್ಮ 5 ವರ್ಷದ ಅವಧಿಯಲ್ಲಿ ಬಿಜೆಪಿ ಹಲವು ಯೋಜನೆಗಳನ್ನು ಜನರಿಗೆ ನೀಡುವ ಮೂಲಕ ಸಾರ್ವಜನಿಕರ ಏಳ್ಗೆಗೆ ಶ್ರಮಿಸಲಾಗಿದೆ. ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸುಧಾರಿಸಿದ್ದು, 4-5 ದಿನಗಳಲ್ಲಿ ಅವರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದರು.
ಶಾಸಕ ಸಿ.ಸಿ. ಪಾಟೀಲ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿ, ಕ್ಷೇತ್ರದ ಜನತೆ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನನಗೆ ಏನು ಆಗುವುದಿಲ್ಲ. ನಾನೀಗ ಆರೋಗ್ಯವಾಗಿದ್ದೇನೆ. ಆದಷ್ಟು ಬೇಗನೆ ಕ್ಷೇತ್ರಕ್ಕೆ ಆಗಮಿಸುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ರು. 600 ಕೋಟಿ ಅನುದಾನ ತಂದು ಅಭಿವೃದ್ದಿ ಮಾಡಿದ್ದೇನೆ. ಈ ಭಾಗದ ಜನತೆಯ ಬಹುದಿನಗಳ ಬೇಡಿಕೆ ಕಳಸಾ ಬಂಡೂರಿ ಯೋಜನೆ ಸ್ವಲ್ಪ ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು, ಕೆಲವೇ ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು. ನನ್ನ ಅಧಿಕಾರದ ಅವಧಿಯಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ಈ ಹಿಂದೆ ಅಧಿಕಾರ ಮಾಡಿದವರ ಅವಧಿಯಲ್ಲಿ ಏನು ಅಭಿವೃದ್ಧಿಯಾಗಿವೆ ಎಂದು ಮತದಾರರು ಅರಿತು ಮತದಾನ ಮಾಡುವಂತೆ ಕೋರಿದರು.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡರ, ಮತಕ್ಷೇತ್ರ ಅಧ್ಯಕ್ಷ ಚಂದ್ರು ದಂಡಿನ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಶೋಭಾ ಪಾಟೀಲ, ಉಮೇಶಗೌಡ ಪಾಟೀಲ, ಎಸ್.ಆರ್. ಹಿರೇಮಠ, ಬಿ.ಎಸ್. ಉಪ್ಪಾರ, ಸಿ.ಎಸ್. ಪಾಟೀಲ, ನಿಂಗಣ್ಣ ಗಾಡಿ, ಜಿ.ಬಿ. ಕುಲಕರ್ಣಿ, ಬಿ.ಕೆ. ಗುಜಮಾಗಡಿ, ಚನ್ನಪ್ಪಗೌಡ್ರ, ವಿ.ಎನ್. ಕೊಳ್ಳಿ, ಬಿ.ಎಸ್.ಪಾಟೀಲ, ಗುರಪ್ಪ ಆದಪ್ಪನವರ, ರಾಜುಗೌಡ ಪಾಟೀಲ, ಎಸ್.ಬಿ. ಕರಿಗೌಡರ, ಮುತ್ತು ಜ್ಞಾನೋಪಂತ, ಶಿವಪ್ಪ ಬೋಳಸಟ್ಟಿ, ಗೋವಿಂದರಡ್ಡಿ ಸಿದ್ನಾಳ, ಶಿವಾನಂದ ಮುತ್ತವಾಡ, ವಾಸು ಜೋಗಣ್ಣವರ, ಅನಿಲ ಧರಿಯಣ್ಣವರ, ವಿ.ಎಸ್. ಡಾಣೆ, ಬಸವರಾಜ ಸಾಬಳೆ, ಮುತ್ತು ತೆಗ್ಗಿನಮನಿ, ಉಮೇಶ ಮೊರಬದ, ಎಲ್.ಎಂ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.