ಕೃಷಿ ಪಂಪ್ಸೆಟ್ಗೆ ಸೋಲಾರ್ ಅಳವಡಿಕೆ
ಕನ್ನಡಪ್ರಭ ವಾರ್ತೆ, ಗದಗ, ಏ. 22
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿರುವ ಎಲ್ಲ ರೈತರ ಕೃಷಿ ಪಂಪ್ಸೆಟ್ಗಳಿಗೆ ಸೋಲಾರ್ ಅಳವಡಿಸಲಾಗುವುದು ಎಂದು ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಅವರು ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಸಾವಿರಾರು ರೈತರ ಹೊಲದಲ್ಲಿ ಕೊಳವೆಬಾವಿಗಳಿದ್ದರೂ ಸಮರ್ಪಕವಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಈ ಮಹತ್ತರವಾದ ಯೋಜನೆ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ ಎಂದರು.
ರೈತರ ಸಾಲಮನ್ನಾ: ಕಳೆದೆರಡು ವರ್ಷಗಳಿಂದಿರುವ ನಿರಂತರ ಬರಗಾಲದ ಹಿನ್ನೆಲೆಯಲ್ಲಿ 16 ಲಕ್ಷ ರೈತರ ರು. 3600 ಕೋಟಿ ಸಾಲವನ್ನು ನಮ್ಮ ಸರ್ಕಾರ ಮನ್ನಾ ಮಾಡಿದೆ. ರಾಜ್ಯದ 10 ಸಾವಿರ ಕಿಮೀ ಜಿಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. 2500 ಕಿಮೀ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದೆ. 16 ಲಕ್ಷ 50 ಸಾವಿರ ಜನರಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮಾಡಲಾಗಿದೆ. ಕೆರೆಗಳ ಹೂಳೆತ್ತಲು ವಿಶೇಷ ಅನುದಾನ ನೀಡಲಾಗಿದೆ. ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ 43 ನೂತನ ತಾಲೂಕುಗಳ ಘೋಷಣೆ ಮಾಡಿದ್ದೇವೆ. ರಾಜ್ಯದ ಬಡವರಿಗೆ ಅಕ್ಕಿ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಂಡಿದ್ದು, ಆದರೆ ಕಾಂಗ್ರೆಸ್ ಕುತಂತ್ರದಿಂದಾಗಿ ಕೇಂದ್ರ ಸರ್ಕಾರ ನಮಗೆ ನೀಡುತ್ತಿರುವ ಆಹಾರ ಧಾನ್ಯಗಳನ್ನು ಕಡಿಮೆಗೊಳಿಸಿದ್ದು, ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು.
ರೋಣ ಕ್ಷೇತ್ರದ ಅಭ್ಯರ್ಥಿ, ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ, ಕಾಂಗ್ರೆಸ್ನವರಿಗೆ ಅಭಿವೃದ್ಧಿ ಬೇಕಿಲ್ಲ. 9 ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಈ ಹಿಂದೆ ಕ್ಷೇತ್ರವನ್ನು ಆಳಿದವರು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗಮನಿಸಿ, ನಿಮಗೆ ತಿಳಿಯುತ್ತದೆ ಯಾರು ಅಭಿವೃದ್ಧಿ ಪರವಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಹಲವಾರು ಜನರು ಅನ್ಯ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಸಿದ್ದಪ್ಪ ಬಂಡಿ, ಶ್ರೀಪತಿ ಉಡುಪಿ, ರವಿ ಬಿದರೂರ, ಬಿ.ಎಂ. ಸಜ್ಜನ, ಎಂಪಿಎಂಸಿ ಅಧ್ಯಕ್ಷ ಪರಶುರಾಮ ಹಂಡಿ, ಬಸವಂತಪ್ಪ ತಳವಾರ, ಅಶೋಕ ನವಲಗುಂದ ಹಾಜರಿದ್ದರು. ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಹೊಸ ಅಭಿವೃದ್ಧಿ ಮಾಡಲ್ಲ
ಕಾಂಗ್ರೆಸ್ನವರಿಗೆ ಅಧಿಕಾರಾ ಕೊಟ್ರ್... ಹೊಸಾ ಅಭಿವೃದ್ಧಿ ಕೆಲ್ಸಾ ಏನೂ ಮಾಡುದಿಲ್ಲ. ಬರೇ ಕೆಟ್ಟ ವಿಚಾರಾ ಮಾಡ್ಕೊಂತಾ.. ಕುಂದ್ರವ್ರ.. ಅವಕಾಶ ಸಿಕ್ರ ಕೆಟ್ಟದ್ದು ಮಾಡವ್ರ.. ಅಲ್ರೀ ಅವ್ರಗೆ ಎಷ್ಟ ಸಲ ಅಧಿಕಾರ ಕೊಟ್ಟಿರಿ.. ಏನ್ ಅಭಿವೃದ್ಧಿ ಮಾಡ್ಯಾರಾ ನೀವ್ ಹೇಳ್ರಿ... ನಾವ್ 5 ವರ್ಷದಾಗ ಮಾಡಿದಷ್ಟ ಕೆಲ್ಸಾ ಕಾಂಗ್ರೆಸ್ನವರು ಮಾಡಬೇಕಾದ್ರೆ ಅರ್ಧ ಶತಮಾನವೇ ಬೇಕಾಗತ್, ಅದ್ಕ ಅವಕಾಶ ಮಾಡಬ್ಯಾಡ್ರಿ.. ಬಿಜೆಪಿಗೆ ಅಧಿಕಾರ ನೀಡ್ರಿ.. ಎಂದು ತಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿಯೇ ಸಿಎಂ ಶೆಟ್ಟರ್ ಹೇಳಿದ್ದು ಗಮನಾರ್ಹವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

