ಗದಗ

ಅಲ್ಪಸಂಖ್ಯಾತರ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ

Published On :

ಕನ್ನಡಪ್ರಭ ವಾರ್ತೆ, ಗದಗ, ಏ. 28
ದೇಶದಲ್ಲಿ ಜಾತ್ಯತೀತ ವ್ಯವಸ್ಥೆ ಉಳಿದು, ಅಲ್ಪಸಂಖ್ಯಾತರ ರಕ್ಷಣೆಯಾಗಬೇಕಾದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕೇಂದ್ರದ ಮಾಜಿ ಸಚಿವ ಕೆ. ರಹಮಾನ್‌ಖಾನ್ ಹೇಳಿದರು.
ಭಾನುವಾರ ಸಂಜೆ ನಗರದ ಜಾಕೀರ ಹುಸೇನ ಕಾಲನಿಯ ಶಾದಿ ಮಹಲ್‌ನಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ ದೊಡ್ಡದು. ಕಾಂಗ್ರೆಸ್ ಅಧಿಕಾರಿಕ್ಕಾಗಿ ಅಲ್ಲ, ಹೋರಾಟಕ್ಕಾಗಿ ಜನ್ಮ ತಳೆದ ಪಕ್ಷ. ಅಲ್ಪಸಂಖ್ಯಾತರು ಕಾಂಗ್ರೆಸ್‌ನಿಂದ ದೂರ ಸರಿದಾಗೆಲ್ಲ ಪಕ್ಷಕ್ಕೆ ಹಿನ್ನಡೆಯಾಗಿದೆ. ನಾವು ಕಟ್ಟಿದ ಮನೆಯಿಂದ ನಾವು ಹೊರಗೆ ಹೋಗಬೇಕಾಗಿಲ್ಲ, ಇಲ್ಲಿಯೇ ಇದ್ದು ಹೋರಾಟ ಮನೋಭಾವನೆಯ ಮೂಲಕ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.
ಇತ್ತೀಚೆಗೆ ಅಲ್ಪಸಂಖ್ಯಾತರ ಭಾವನೆಗಳೊಂದಿಗೆ ಆಟವಾಡುತ್ತಾ ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿದ್ದು, ನಾವೆಲ್ಲ ಜಾಗೃತಗೊಳ್ಳಬೇಕಿದೆ. ಬೇರೆ ಪಕ್ಷಗಳು ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಸ್ಪರ್ಧಿಸುತ್ತವೆ. ಕಾಂಗ್ರೆಸ್ ಮಾತ್ರ ದೇಶ-ರಾಜ್ಯದ ಹಿತಕ್ಕಾಗಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಹೆಸರು ಘೋಷಿಸಿದ್ದಾರೆ. ಆದರೆ, ಕೆಲವು ದೇಶಗಳು ನರೇಂದ್ರ ಮೋದಿ ಭೇಟಿಗೆ ನಿಷೇಧ ಹೇರಿವೆ. ಇಂತಹ ವ್ಯಕ್ತಿ ಪ್ರಧಾನಿಯಾಗಿ ನಮಗೆ ಬೇಕೇ ಎನ್ನುವ ಪ್ರಶ್ನೆಯನ್ನು ದೇಶವಾಸಿಗಳು ಗಂಭೀರವಾಗಿ ಚಿಂತಿಸಬೇಕು ಎಂದರು.
ಅಭ್ಯರ್ಥಿ ಎಚ್.ಕೆ. ಪಾಟೀಲ ಮಾತನಾಡಿದರು. ಇನಾಯತ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಸರಫರಾಜ್ ಉಮಚಗಿ, ಅಕ್ಬರ್‌ಸಾಬ ಬಬರ್ಚಿ, ಸಾಧಿಕ ನರಗುಂದ, ಎಂ.ಸಿ. ಶೇಖ, ಪೀರಸಾಬ ಕೌತಾಳ ಹಾಜರಿದ್ದರು. ಶಂಶುದ್ದೀನ ಟೋಪಿವಾಲೆ ನಿರೂಪಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.