ಜನತೆ ಚಿತ್ತ ಕಾಂಗ್ರೆಸ್ನತ್ತ
- ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಏ. 29
ರೋಣ ಕ್ಷೇತ್ರದ ಜನತೆಯ ಚಿತ್ತ ಕಾಂಗ್ರೆಸ್ನತ್ತ ಹೊರಳಿದ್ದು, 9 ವರ್ಷಗಳಲ್ಲಿ ಹಾಲಿ ಶಾಸಕರ ಕಾರ್ಯವೈಖರಿ ಹಾಗೂ ಅವರ ವರ್ತನೆಯಿಂದ ಬೇಸರಗೊಂಡ ಹಲವಾರು ಜನರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಜಾತ್ಯಾತೀತ ಶಕ್ತಿಗಳಿಗೆ ಖಂಡಿತ ಗೆಲವು ಸಿಗಲಿದೆ ಎಂದು ಮಾಜಿ ಶಾಸಕ, ರೋಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಹೇಳಿದರು. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 'ಕನ್ನಡಪ್ರಭ 'ಅವರನ್ನು ಸಂದರ್ಶಿಸಿದಾಗ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಬಾರಿ ಅತ್ಯಂತ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ. ಇದಕ್ಕೆಲ್ಲ ಕಾರಣರಾದವರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು. ಅವರು ನನ್ನ ಮೇಲಿಟ್ಟಿರುವ ವಿಶ್ವಾಸದಿಂದ ಸ್ವಯಂ ಪ್ರೇರಣೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಾರಿಯೂ ನೀವೇ ಕಾಂಗ್ರೆಸ್ನಿಂದ ಸ್ಪರ್ಧಿಸಬೇಕು ಎಂದು ಕೇವಲ ರೋಣ ಕ್ಷೇತ್ರದಿಂದ ನಾನೊಬ್ಬನೇ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಿ, ನನ್ನ ಚುನಾವಣೆಯನ್ನು ಅವರೇ ಮಾಡುತ್ತಿರುವುದು ನನಗೆ ಆನೆ ಬಲ ಬಂದಂತಾಗಿದೆ ಎಂದರು.
ಕಾಂಗ್ರೆಸ್ ಪರ ಅಲೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಡಿನೋಟಿಫಿಕೇಶನ್ ಸೇರಿದಂತೆ ಸಾಲು ಸಾಲು ಹಗರಣಗಳಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಿಜೆಪಿಯಿಂದ ದೂರವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಇದು ಒಂದು ನನಗೆ ವರವಾಗಲಿದೆ. ಇನ್ನೊಂದು ವಿಶೇಷವೆಂದರೆ ಸ್ಥಳೀಯ ಶಾಸಕರ ವರ್ತನೆ ಹಾಗೂ ಅವರ ಜನ ವಿರೋಧಿ ನೀತಿಗಳನ್ನು 9 ವರ್ಷಗಳಿಂದ ಅನುಭವಿಸಿಕೊಂಡು ಬಂದಿರುವ ಜನತೆ ರೋಸಿ ಹೋಗಿದ್ದಾರೆ. ಅವರೆಲ್ಲ ಮತ್ತೊಮ್ಮೆ ಜಿ.ಎಸ್. ಪಾಟೀಲ ಶಾಸಕರಾಗಲಿ ಎನ್ನುವ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೇ ನಮ್ಮ ಕಾರ್ಯಕರ್ತರು ಈ ಬಾರಿ ಜಿ.ಎಸ್.ಪಿ ಗೆಲುವು ಖಂಡಿತ. ಅವರಿಗೆ ಡಬಲ್ ಧಮಾಕಾ ಎನ್ನುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಕಾರ್ಯಕರ್ತರ ಬೆಂಬಲ: 2004 ಹಾಗೂ 2008ರಲ್ಲಿ ಜಿಲ್ಲೆಯಲ್ಲಿಯೇ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದೇನೆ. ನಾನು ಯಾವಾಗಲೂ ಕಾರ್ಯಕರ್ತರ ಮಧ್ಯೆ ಇರುವವನು. 2004 ರಲ್ಲಿ ವಾಜಪೇಯಿ ಅಲೆ, 2008ರಲ್ಲಿ ಬಿ.ಎಸ್. ಯಡಿಯೂರಪ್ಪನವರಿಗೆ ಅನ್ಯಾಯವಾಗಿದೆ ಎನ್ನುವ ಅಲೆಯಲ್ಲಿ ಉಂಟಾದ ಗೊಂದಲದಲ್ಲಿ ಜನತೆ ನಮಗೆ ಮತ ಹಾಕಲಿಲ್ಲ. ಆ ಎರಡೂ ಸೋಲುಗಳು ನಿಮ್ಮ ಸೋಲಲ್ಲ. ಕಾರ್ಯಕರ್ತರಾದ ನಮ್ಮ ಸೋಲಾಗಿದೆ. ಅದನ್ನೆಲ್ಲ ಈ ಬಾರಿ ಹೋಗಲಾಡಿಸೋಣ ಎನ್ನುವ ತವಕದಲ್ಲಿ ಕಾರ್ಯಕರ್ತರಿದ್ದಾರೆ.
ಬಿಜೆಪಿ ಅಧಿಕಾರ ದುರ್ಬಳಕೆ: ನಾನು ಹಲವಾರು ಬಾರಿ ಮಾಧ್ಯಮಗಳಿಗೆ ಹೇಳಿದ್ದೇನೆ. ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಿನಲ್ಲಿ ಸಾವಿರಾರು ಅಲ್ಪ ಸಂಖ್ಯಾತರ ಮತಗಳನ್ನು ಡಿಲಿಟ್ ಮಾಡಲು ಸ್ಥಳೀಯ ಅಧಿಕಾರಿಗಳ ಮೂಲಕ ಹಾಲಿ ಶಾಸಕರು ಕುತಂತ್ರದ ಕೆಲ್ಸಾ ನೆಡೆಸಿದ್ರು.. ಅದನ್ ನಮ್ಮ ಕಾರ್ಯಕರ್ತರು ತಡೆದಿದ್ದಾರೆ. ಗಜೇಂದ್ರಗಡದ ಪ್ರಮುಖ ವೃತ್ತದಲ್ಲಿ ಕುದುರೆಗಳನ್ನು ನಿಲ್ಲಿಸುವ ಮೂಲಕ ವಾಸ್ತು ಮೊರೆ ಹೋಗುತ್ತಿದ್ದಾರೆ. ಈಚೆಗೆ ಜಿಗಳೂರ ಗ್ರಾಮದಲ್ಲಿ ವಾಮಾಚಾರ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹಾಲಿ ಶಾಸಕರಿಗೆ ಸೋಲಿನ ಭೀತಿ ಕಾಡುತ್ತಿದ್ದು, ಅವರು ವಾಮ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ.
ಜನರ ಸಮಸ್ಯೆಗೆ ಸ್ಪಂದನೆ: ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ. ನನಗೆ ಅಧಿಕಾರ ಇರಲಿ... ಬಿಡಲಿ, ಅವರ ಕಷ್ಟ, ತೊಂದರೆ, ನೋವುಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಬಡವರ ಮನೆಯಲ್ಲಿ ಏನಾದರೂ ತೊಂದರೆಯಾದಲ್ಲಿ ಅದು ನನ್ನ ಮನೆಯ ತೊಂದರೆಯಂದೆ ಭಾವಿಸಿ ಅವರೊಟ್ಟಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇನೆ. ಆದರೆ, ಇನ್ನುಳಿದ ಅಭ್ಯರ್ಥಿಗಳಿಗೆ ಈಗಾಗಲೇ ಸ್ಪಷ್ಟವಾಗಿದೆ. ಅಧಿಕಾರದಲ್ಲಿದ್ದಾಗ ಜನರೊಂದಿಗೆ ಸರಿಯಾಗಿ ವರ್ತನೆ ಮಾಡದೆ ಇದ್ದಲ್ಲಿ, ಜನತೆ ಸಹಜವಾಗಿ ನಮ್ಮಿಂದ ದೂರವಾಗುತ್ತಾರೆ ಎನ್ನುವುದು ಮನಗಂಡಂತೆ ತೋರುತ್ತಿದೆ ಎಂದು ಪರೋಕ್ಷವಾಗಿ ಶಾಸಕರನ್ನು ಮಾತಿನ ಮೂಲಕ ತಿವಿದರು.
ಜನರಿಗೆ ಬೇಸರ ತಂದಿದೆ: ನಮ್ಮದೇ ಪಕ್ಷದ ಜಿಪಂ ಸದಸ್ಯರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ಈಗ ಜೆಡಿಎಸ್ನಿಂದ ಸ್ಪರ್ಧಿಸಿದ್ದಾರೆ. ಅದು ಮುಂಡರಗಿ ಭಾಗದವರು. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇದೆ. ನಾನು ಈಗಾಗಲೇ ಕ್ಷೇತ್ರವನ್ನು 2 ಬಾರಿ ಸುತ್ತಿ ಪ್ರಚಾರ ಮಾಡಿದ್ದೇನೆ. ಸಾರ್ವಜನಿಕರಿಗೆ ಬದಲಾವಣೆ ಬೇಕಾಗಿದೆ. ಹಾಲಿ ಶಾಸಕರ ಆಡಳಿತ ವೈಖರಿ ಮತ್ತು ಅವರ ವರ್ತನೆ ಜನರಲ್ಲಿ ಬೇಸರ ಮೂಡಿಸಿದೆ. ಈ ಎಲ್ಲ ಅಂಶಗಳು ನನ್ನ ಗೆಲುವಿಗೆ ಕಾರಣವಾಗಲಿವೆ.
ಜಾತ್ಯತೀತ ಮನೋಭಾವನೆ: ರೋಣ ಕ್ಷೇತ್ರದ ಜನತೆ ಜಾತ್ಯತೀತ ಮನೋಭಾವನೆ ಹೊಂದಿದವರು. ಕೇವಲ ತಮ್ಮ ತಮ್ಮ ಸಮಾಜದವರಿಗೆ ಮತ ಹಾಕುವುದಿಲ್ಲ. ಹಾಗಿದ್ದರೆ ನನಗೆ 48 ಸಾವಿರದಷ್ಟು ಮತಗಳು ಬರುತ್ತಿರಲಿಲ್ಲ. ಇಲ್ಲಿನ ಜನತೆಗೆ ಜಾತಿ ಮುಖ್ಯವಲ್ಲ. ಚುನಾಯಿತರಾಗುವ ನಾಯಕರು ನಡೆದುಕೊಳ್ಳುವ ರೀತಿಯನ್ನು ಇಲ್ಲಿನ ಜನತೆ ಬಹಳ ಮೆಚ್ಚುತ್ತಾರೆ. ನಾನು ಕ್ಷೇತ್ರವನ್ನು ಈಗಾಗಲೇ ಪ್ರತಿನಿಧಿಸಿದ್ದೇನೆ. ಸೋಲು, ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಹಾಗಾಗಿ ಒಂದೇ ಕೋಮು ಒಂದೇ ಪಕ್ಷವನ್ನು ಬೆಂಬಲಿಸುತ್ತದೆ ಎನ್ನುವುದು ಸತ್ಯಕ್ಕೆ ದೂರದ ಮಾತು. ಅದರಲ್ಲಿಯೂ ಈ ಬಾರಿಯ ಚುನಾವಣೆಯಲ್ಲಿ ಅದೆಲ್ಲ ನಡೆಯುವುದಿಲ್ಲ.
ವೀರಶೈವರು ಕಾಂಗ್ರೆಸ್ ಕೈ ಹಿಡಿಯುತ್ತಾರೆ: ಈ ಹಿಂದೆಯೂ ವೀರಶೈವರು ಬೆಂಬಲಿಸಿ ಕೈ ಹಿಡಿದಿದ್ದಾರೆ. ಆದ್ರೆ ಸ್ವಲ್ಪ ಅಂತರದಲ್ಲಿ ನಾನು ಸೋಲು ಕಂಡಿದ್ದೇನೆ. ರೋಣ ಕ್ಷೇತ್ರದಲ್ಲಿ ವೀರಶೈವರು ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದಾರೆ. ಈಗಲೂ ಬೆಂಬಲಿಸುತ್ತಾರೆ. 1957 ರಿಂದ ಈವರೆಗಿನ ಚುನಾವಣೆಯ ಫಲಿತಾಂಶಗಳನ್ನು ನೀವು ಗಮನಿಸಿದಾಗ ಅದು ನಿಮಗೆ ಅರ್ಥವಾಗುತ್ತದೆ. ಈ ಕ್ಷೇತ್ರದಲ್ಲಿ ವೀರಶೈವರ ಬಗ್ಗೆ ಅನುಮಾನ ಪಡುವುದು ಬೇಡ. ಅವರೆಲ್ಲ ಕಾಂಗ್ರೆಸ್ ಬೆಂಬಲಿಸಲಿದ್ದಾರೆ.
ರೈತರ ಪ್ರಗತಿಗೆ ಶ್ರಮಿಸುವೆ: ರೋಣ ಕ್ಷೇತ್ರವು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ಕಳೆದ 9 ವರ್ಷಗಳ ಕಾಲ ಬಿಜೆಪಿ ಕೈಯಲ್ಲಿ ಅಧಿಕಾರ ಸಿಕ್ಕು, ಯಾವುದೇ ರೈತ ಪರ ಶಾಶ್ವತ ಯೋಜನೆಗಳನ್ನು ಅವರು ರೂಪಿಸಿಲ್ಲ. ಮುಖ್ಯವಾಗಿ ಕ್ಷೇತ್ರದ ರೈತರ ಬದುಕನ್ನು ಸುಧಾರಿಸಲು ಅವರ ಹೊಲಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಮುಖ್ಯವಾಗಿದೆ. ಅದರಲ್ಲಿಯೂ ಇಲ್ಲಿನ ರೈತರು ಹೆಚ್ಚಾಗಿ ನಂಬಿಕೊಂಡಿರುವುದು ಕೊಳವೆ ಬಾವಿಗಳನ್ನು, ಅವೆಲ್ಲ ಇಂದು ಬತ್ತಿ ಹೋಗಿವೆ. ಅವುಗಳ ಪುನಶ್ಚೇತನ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸುವುದು ನನ್ನ ಮುಖ್ಯ ಗುರಿ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಸೇರಿದಂತೆ ಸಾಲು ಸಾಲು ಹಗರಣಗಳಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಿಜೆಪಿಯಿಂದ ದೂರವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಇದು ನನಗೆ ವರವಾಗಲಿದೆ. ಈ ಬಾರಿ ಅತ್ಯಂತ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು. ನನ್ನ ಚುನಾವಣೆಯನ್ನು ಅವರೇ ಮಾಡುತ್ತಿರುವುದು ನನಗೆ ಆನೆ ಬಲ ಬಂದಂತಾಗಿದೆ.
-ಜಿ.ಎಸ್. ಪಾಟೀಲ, ಮಾಜಿ ಶಾಸಕ, ರೋಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

