ಇಂದು ಸಿ.ಸಿ. ಪಾಟೀಲ ಮರಳಿ ಕ್ಷೇತ್ರಕ್ಕೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗದಗ/ನರಗುಂದ, ಏ. 30
ಮಾರ್ಚ್ 17ರಂದು ಅಂಗರಕ್ಷನ ಬಂದೂಕಿನಿಂದ ಅಜಾಗರೂಕತೆಯಿಂದ ಸಿಡಿದ ಗುಂಡಿನಿಂದ ತೀವ್ರಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿ.ಸಿ. ಪಾಟೀಲರು ಗುಣಮುಖರಾಗಿ ಬುಧವಾರ ಕ್ಷೇತ್ರಕ್ಕೆ ಮರಳುತ್ತಿದ್ದಾರೆ.
ಈ ವಿಷಯ ತಿಳಿದು ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ ಉತ್ಸಾಹ ಚಿಮ್ಮಿದ್ದು, ಚುನಾವಣೆ ಮಾಡಲು ಹೊಸ ಉತ್ಸಾಹಕ್ಕೆ ಕಾರಣವಾಗಿದೆ.
ಮಾರ್ಚ್ 17ರಂದು ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆಗೆ ತೆರಳಿದ ವೇಳೆಯಲ್ಲಿ ಉಂಟಾದ ಗೊಂದಲದಲ್ಲಿ ಗನ್ಮ್ಯಾನ್ ಬಂದೂಕಿನಿಂದ ಹಾರಿದ ಗುಂಡಿನಿಂದ ಸಿ.ಸಿ. ಪಾಟೀಲ ತೀವ್ರ ಗಾಯಗೊಂಡು ಹುಬ್ಬಳ್ಳಿಯ ಲೈಫಲೈನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ನಂತರ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿ, ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ 20ಕ್ಕೂ ಹೆಚ್ಚು ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ಎಲ್ಲರಲ್ಲಿಯೂ ಹೊಸ ಚೈತನ್ಯಕ್ಕೆ ಕಾರಣವಾಗಿದೆ.
ಕ್ಷೇತ್ರದಲ್ಲಿಯೇ ಇರ್ತಾರೆ: ಅವರ ಆರೋಗ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದ್ದಾರೆ. ಕ್ಷೇತ್ರಕ್ಕೆ ಬರುತ್ತಿರುವ ಸಿ.ಸಿ. ಪಾಟೀಲ ಚುನಾವಣೆ ದಿನಾಂಕದವರೆಗೂ ಕ್ಷೇತ್ರದಲ್ಲಿಯೇ ಇರುತ್ತಾರೆ ಎನ್ನಲಾಗಿದ್ದು, ಇದು ಈವರೆಗೂ ಅವರ ಕಾರ್ಯಕರ್ತರೇ ಪ್ರಚಾರ ಕಾರ್ಯ ನಡೆಸುತ್ತಿದ್ದು, ಅವರು ಗುಣಮುಖರಾಗಿ ಕ್ಷೇತ್ರಕ್ಕೆ ಬರುತ್ತಿರುವುದು ಚುನಾವಣೆಯಲ್ಲಿ ಗೆಲವು ಸಾಧಿಸಿದಷ್ಟೇ ಖುಷಿಯನ್ನುಂಟು ಮಾಡಿದೆ.
ಹೊಸತನಕ್ಕೆ ಸಾಕ್ಷಿ: ಆಸ್ಪತ್ರೆಯಲ್ಲಿದ್ದುಕೊಂಡೇ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು ಕ್ಷೇತ್ರದ ಮಟ್ಟಿಗೆ ಹೊಸ ಇತಿಹಾಸವೇ ಸರಿ. ಅವರು ಏ. 17ರಂದು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಮಾತನಾಡಿ, ನಾನು ಆರೋಗ್ಯವಾಗಿದ್ದೇನೆ, ಸದ್ಯದಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಹೇಳುವ ಮೂಲಕ ಹೊಸತನಕ್ಕೆ ಸಾಕ್ಷಿಯಾಗಿದ್ದರು. ನಂತರ ಸಿಎಂ ಜಗದೀಶ ಶೆಟ್ಟರ್ ನರಗುಂದದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರದ ವೇಳೆಯಲ್ಲಿಯೂ, ಅದೇ ರೀತಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು ಗಮನಾರ್ಹವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

